ತಿವಾರಿ ಕುಟುಂಬಕ್ಕೆ 5 ಕೋಟಿ ಪರಿಹಾರ ನೀಡಬೇಕು ಎಂದ ಅಖಿಲೇಶ್!

Update: 2018-10-04 15:55 GMT

ಆ್ಯಪಲ್ ಕಂಪನಿಯ ಉದ್ಯೋಗಿ ವಿವೇಕ್ ತಿವಾರಿಯನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಲಕ್ನೋದಲ್ಲಿ ಗುಂಡಿಕ್ಕಿ ಕೊಂದಿರುವ ಮಾಡಿರುವ ಘಟನೆಯ ಬೆನ್ನಲ್ಲೇ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯ ಪ್ರಮುಖ ವೋಟ್‍ಬ್ಯಾಂಕ್ ಆಗಿರುವ ಮೇಲ್ವರ್ಗದ ಹಿಂದೂಗಳ ಸಂಭಾವ್ಯ ಆಕ್ರೋಶ ಶಮನಗೊಳಿಸಲು ರಾಜ್ಯ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಘಟನೆ ನಡೆದ ಎರಡು ದಿನಗಳ ಬಳಿಕ, ತಿವಾರಿ ಪತ್ನಿಯನ್ನು ಭೇಟಿ ಮಾಡಿದ ಆದಿತ್ಯನಾಥ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದು, ಹತ್ಯೆ ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸುವುದು ಸೇರಿದಂತೆ ಕುಟುಂಬದ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಂಡಿದ್ದಾರೆ. ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ಬಳಿಕ ತಮ್ಮ ಧೈರ್ಯ ಹೆಚ್ಚಿದ್ದು, ಬಿಜೆಪಿ ಬಗೆಗಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ ಎಂದು ಕಲ್ಪನಾ ತಿವಾರಿ ಹೇಳಿಕೆ ನೀಡಿದ್ದರು.

ಘಟನೆಯ ಬಳಿಕ ಸೃಷ್ಟಿಯಾದ ಇರುಸು ಮುರಿಸಿನ ವಾತಾವರಣದಿಂದ ಹೊರಬರಲು ಬಿಜೆಪಿಗೆ ಈ ಹೇಳಿಕೆ ನೆರವಾಗಿದ್ದರೂ, ಈ ಘಟನೆ ಆದಿತ್ಯನಾಥ್ ಅವರಿಗೆ ರಾಜಕೀಯವಾಗಿ ಹಾನಿ ಮಾಡಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಮತ. ಇದು ಪ್ರತಿಸ್ಪರ್ಧಿಗಳಿಗೆ ಲಾಭ ತರದಿರಬಹುದು. ಅದರಲ್ಲೂ ಮುಖ್ಯವಾಗಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಈ ಘಟನೆ ವಿಚಾರದಲ್ಲಿ ಬೂಟಾಟಿಕೆ ಪ್ರದರ್ಶಿಸಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಸಂತ್ರಸ್ತರ ಕುಟುಂಬಕ್ಕೆ ಐದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಅಖಿಲೇಶ್ ಯಾದವ್ ಸೋಮವಾರ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ. ಈ ಆಗ್ರಹ ಸಹಜವಾಗಿಯೇ ಮುಸ್ಲಿಮರನ್ನು ಕೆಣಕಿದೆ. ಅಮಾಯಕ ಮುಸ್ಲಿಮರ ಹತ್ಯೆ ವಿಚಾರದಲ್ಲಿ ಅದರಲ್ಲೂ ಮುಖ್ಯವಾಗಿ ಸೆಪ್ಟೆಂಬರ್ 20ರಂದು ಆಲಿಗಢದಲ್ಲಿ ಮುಸ್ತಕೀಮ್ ಮತ್ತು ನೌಶಾದ್ ಅವರನ್ನು ಪೊಲೀಸರು ಹತ್ಯೆ ಮಾಡಿದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಹೇಗೆ ಮೌನ ವಹಿಸಿದ್ದಾರೆ ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ದೇವಾಲಯದ ಅರ್ಚಕ ರೂಪ್ ಸಿಂಗ್ ಅವರ ಹತ್ಯೆಯಲ್ಲಿ ಇಬ್ಬರು ಯುವಕರು ಶಾಮೀಲಾಗಿದ್ದಾರೆ ಎನ್ನುವುದು ಪೊಲೀಸರ ಆರೋಪ. ಆದರೆ ರಿಹಾಯ್ ಮಂಚ್ ಹೇಳುವಂತೆ, ಇವರಿಬ್ಬರನ್ನು ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿಸಿ, ನಕಲಿ ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಲಾಗಿದೆ. ಮೃತ ಯುವಕರಿಬ್ಬರು ಅಮಾಯಕರು ಎಂದು ರೂಪ್ ಸಿಂಗ್ ಅವರ ಸಹೋದರ ಹೇಳಿರುವ ಸಾಕ್ಷಿಯನ್ನು ರಿಹಾಯ್ ಮಂಚ್ ಉಲ್ಲೇಖಿಸಿದೆ.

ಅಖಿಲೇಶ್ ಯಾದವ್, ತಿವಾರಿ ಕುಟುಂಬವನ್ನು ಭೇಟಿ ಮಾಡಿರುವುದು ಕೆಲ ಮುಸ್ಲಿಮರ ಅಸಹನೆಗೂ ಕಾರಣವಾಗಿದೆ. ತಿವಾರಿ ಸಾವಿನ ರಾಜಕೀಯ ಲಾಭ ಪಡೆಯಲು ಯಾದವ್ ಯತ್ನಿಸುತ್ತಿದ್ದು, ಪಕ್ಷದ ಪ್ರಮುಖ ವೋಟ್‍ ಬ್ಯಾಂಕ್ ಎನಿಸಿರುವ ಅಲ್ಪಸಂಖ್ಯಾತರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಖಿಲೇಶ್ "ಮೃದು ಹಿಂದುತ್ವ ರಾಜಕೀಯ"ದ ಮೊರೆ ಹೋಗಿದ್ದಾರೆ ಎನ್ನುವುದು ಮತ್ತೆ ಕೆಲವರ ಆರೋಪ. ಹಿಂದೂ ದೇವರು ವಿಷ್ಣುವಿನ ಹೆಸರಲ್ಲಿ ನಗರವನ್ನು ಅಭಿವೃದ್ಧಿಪಡಿಸುವುದಾಗಿ ಅವರು ನೀಡಿದ ಭರವಸೆ, ಪೃಥ್ವಿರಾಜ್ ಚವ್ಹಾಣ್ ಮೃತದೇಹದ ಪಳೆಯುಳಿಕೆಗಳನ್ನು ಅಫ್ಘಾನಿಸ್ತಾನದಿಂದ ತರುವ ಬಗ್ಗೆ ನೀಡಿದ ಆಶ್ವಾಸನೆ ಹಾಗೂ ರಾಜ್ಯಾದ್ಯಂತ ಚವ್ಹಾಣ್ ಪ್ರತಿಮೆಗಳನ್ನು ಸ್ಥಾಪಿಸುವ ಕುರಿತ ಹೇಳಿಕೆಗಳನ್ನು ಇದಕ್ಕೆ ಪುರಾವೆಯಾಗಿ ಉಲ್ಲೇಖಿಸುತ್ತಾರೆ. ಈ ಮೂಲಕ ಸಮಾಜವಾದಿ ಪಕ್ಷದ ಮುಖ್ಯಸ್ಥ "ಮುಸ್ಲಿಮರ ಪರ" ಎಂಬ ಇಮೇಜ್ ಅಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.

ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ 2013ರಲ್ಲಿ ಸಂಭವಿಸಿದ ಮುಝಾಫರ್‍ನಗರ ಹಿಂಸಾಚಾರ ಮತ್ತು 2015ರಲ್ಲಿ ಮುಹಮ್ಮದ್ ಅಖ್ಲಾಕ್ ರನ್ನು ಗೋರಕ್ಷಕರು ಹತ್ಯೆ ಮಾಡಿದ ಪ್ರಕರಣವನ್ನು ಯಾದವ್ ನಿಭಾಯಿಸಿದ ಬಗೆಯನ್ನು ಉರ್ದು ದೈನಿಕ ‘ವರಿಸ್ ಇ ಅವಧ್‍’ನ ಸಂಪಾದಕ ಆಸಿಫ್ ಬರ್ನೆ ನೆನಪಿಸಿದ್ದಾರೆ. "ಇದನ್ನು ಮುಸ್ಲಿಮರು ಮರೆತಿಲ್ಲ" ಎಂದು ಬರ್ನೆ ಹೇಳಿದ್ದಾರೆ. "ಮುಸ್ಲಿಂ ಸಮುದಾಯ ಅವರ ರಾಜಕೀಯ ವೈಖರಿಯ ಬಗ್ಗೆ ವ್ಯಗ್ರವಾಗಿದೆ. ಸದ್ಯಕ್ಕೆ ದೇಶದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ. ದೇವಸ್ಥಾನಗಳ ಬಗ್ಗೆ ಮಾತನಾಡುತ್ತಿದ್ದವರು ಮಸೀದಿಗಳಿಗೆ ಭೇಟಿ ನೀಡುತ್ತಿದ್ದಾರೆ. ಮಸೀದಿಗಳ ಬಗ್ಗೆ ಮಾತನಾಡುತ್ತಿದ್ದವರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಗುಂಪಿಗೆ ಅಖಿಲೇಶ್ ಅವರೂ ಸೇರಿಕೊಂಡಿರುವುದು ಖೇದಕರ" ಎಂದು ಬಣ್ಣಿಸಿದ್ದಾರೆ.

ತಿವಾರಿ ಹತ್ಯೆ ಬಗ್ಗೆ ಉಲ್ಲೇಖಿಸಿ, "ಪ್ರತಿಯೊಬ್ಬರೂ ಬ್ರಾಹ್ಮಣ ಸಮುದಾಯವನ್ನು ಬೆಂಬಿಸುತ್ತಿದ್ದಾರೆ. ಮುಸ್ಲಿಂ ಹಾಗೂ ದಲಿತರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ನಮ್ಮ ಯುದ್ಧದಲ್ಲಿ ನಾವೇ ಹೋರಾಡಬೇಕು" ಎಂದು ಆಸಿಫ್ ಅಭಿಪ್ರಾಯಪಟ್ಟಿದ್ದಾರೆ.

"ಇಷ್ಟಾಗಿಯೂ ಉತ್ತರ ಪ್ರದೇಶದ ಮುಸ್ಲಿಮರು ಸೀಮಿತ ಆಯ್ಕೆ ಹೊಂದಿದ್ದು, ಸಮಾಜವಾದಿ ಪಕ್ಷವನ್ನೇ ಬೆಂಬಲಿಸಬೇಕಿದೆ. ಸದ್ಯದ ಆದ್ಯತೆ ಬಿಜೆಪಿಯನ್ನು ತಡೆಯುವುದು. ಈ ನಿಟ್ಟಿನಲ್ಲಿ ಸಮಾಜವಾದಿ ಪಕ್ಷವನ್ನು ತಾವು ಬೆಂಬಲಿಸಬೇಕು ಎನ್ನುವುದು ಮುಸ್ಲಿಮರಿಗೆ ಗೊತ್ತಿದೆ. ಕಾಂಗ್ರೆಸ್ ಕೂಡಾ ಒಂದು ಆಯ್ಕೆಯಾಗಿದ್ದರೂ, ಅವರು ಮಹಾಮೈತ್ರಿಯಲ್ಲಿ ಸೇರುತ್ತಾರೆಯೇ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕು" ಎಂದು ವಿವರಿಸಿದ್ದಾರೆ

ಮಬ್ಬಾದ ಒಲವು

ಇದೇ ಅಭಿಪ್ರಾಯವನ್ನು ರಿಹಾಯ್ ಮಂಚ್‍ನ ಪ್ರಧಾನ ಕಾರ್ಯದರ್ಶಿ ರಾಜೀವ್ ಯಾದವ್ ಕೂಡಾ ವ್ಯಕ್ತಪಡಿಸಿದ್ದಾರೆ. ಯುವ ಮುಸ್ಲಿಮರು ಸಮಾಜವಾದಿ ಪಕ್ಷದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಆದಾಗ್ಯೂ ಅವರಿಗೆ ತಮ್ಮ ಸಿಟ್ಟನ್ನು ಅಭಿವ್ಯಕ್ತಪಡಿಸಲು ಯಾವುದೇ ರಾಜಕೀಯ ವೇದಿಕೆಗಳಿಲ್ಲ ಎನ್ನುವುದು ಅವರ ಅಭಿಪ್ರಾಯ. ಆದ್ದರಿಂದ ಫೇಸ್‍ಬುಕ್, ಟ್ವಿಟ್ಟರ್ ಮತ್ತು ವಾಟ್ಸಪ್ ಬಳಸುವುದಷ್ಟೇ ತಮ್ಮ ಅಭಿಪ್ರಾಯ ಹೊರಹಾಕಲು ಅವರಿಗೆ ಇರುವ ವೇದಿಕೆ ಎಂದು ಹೇಳಿದ್ದಾರೆ.

ಮುಸ್ಲಿಮರಲ್ಲಿ ಅಖಿಲೇಶ್ ಯಾದವ್ ಬಗೆಗಿನ ಒಲವು ನಿಧಾನವಾಗಿ ಮಬ್ಬಾಗುತ್ತಿದೆ ಎನ್ನುವುದು ಅವರ ವಾದ. "ಯಾದವ್ ಬಗ್ಗೆ ಅವರು ತೀರಾ ಟೀಕಾತ್ಮಕವಾಗಿದ್ದಾರೆ" ಎಂದು ಯಾದವ್ ಸ್ಪಷ್ಟಪಡಿಸುತ್ತಾರೆ. "ಮುಸ್ಲಿಮರು ಅವರ ಕಚೇರಿ ಅಥವಾ ನಿವಾಸಕ್ಕೆ ಭೇಟಿ ನೀಡಿ ಫೋಟೊ ತೆಗೆಸಿಕೊಳ್ಳಲು ಹಾತೊರೆಯುವ ದಿನಗಳು ಕಳೆದುಹೋಗಿವೆ. ಆದರೆ ಬಿಜೆಪಿ ದೊಡ್ಡ ಅಪಾಯ; ಅದನ್ನು ಮೊದಲು ನಿಭಾಯಿಸಬೇಕು ಎನ್ನುವ ಅರಿವು ಮುಸ್ಲಿಮರಿಗಿದೆ. ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎನ್ನುವ ವಾಸ್ತವದ ಅರಿವು ಇದೆ" ಎಂದು ವಿಶ್ಲೇಷಿಸಿದ್ದಾರೆ.

ಇಷ್ಟೆಲ್ಲ ದೋಷಗಳ ನಡುವೆಯೂ ಅಖಿಲೇಶ್ ಯಾದವ್ ಮುಸ್ಲಿಮರಿಗೆ ಇರುವ ಉತ್ತಮ ಆಯ್ಕೆ ಎನ್ನುವುದು ಕೆಲ ವಿಶ್ಲೇಷಕರ ಅಭಿಪ್ರಾಯ. ಬಿಜೆಪಿ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿರುವ ಏಕೈಕ ಪಕ್ಷ ಸಮಾಜವಾದಿ ಪಕ್ಷ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅಫ್ತಾಬ್ ಅಹ್ಮದ್ ಪ್ರತಿಪಾದಿಸುತ್ತಾರೆ. "ಪದೇ ಪದೇ ತಮ್ಮ ನಿಲುವನ್ನು ಬದಲಾಯಿಸುವ ಕಾರಣದಿಂದ ಮಾಯಾವತಿಯನ್ನು ನಂಬುವ ಸ್ಥಿತಿಯಲ್ಲಿ ಮುಸ್ಲಿಮರು ಇಲ್ಲ. ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳದಿರಲು ಅವರು ನಿರ್ಧರಿಸಿರುವುದು ಅವರ ಬದಲಾಗುತ್ತಿರುವ ರಾಜಕೀಯ ನಿಲುವಿಗೆ ಉದಾಹರಣೆ" ಎಂದು ಅವರು ಹೇಳುತ್ತಾರೆ.

ಸಾರ್ವಜನಿಕ ನೆನಪು ಅಲ್ಪಾಯುಷಿ. ಜನ ಈ ಘಟನೆಯನ್ನು ಶೀಘ್ರವಾಗಿ ಮರೆಯುತ್ತಾರೆ ಎನ್ನುವುದು ಅಹ್ಮದ್ ಅವರ ವಾದ. ಈ ಒಂದು ಘಟನೆಯಿಂದ ಅಖಿಲೇಶ್ ಯಾದವ್ ಅವರ ಇಮೇಜ್ ಮುಸ್ಲಿಂ ಸಮುದಾಯದಲ್ಲಿ ಹಾಳಾಗದು. ಅಖಿಲೇಶ್ ದೂರದೃಷ್ಟಿ ಹೊಂದಿರುವ ಯುವ ಆಧುನಿಕ ನಾಯಕ ಎಂಬ ಅಭಿಪ್ರಾಯ ಇನ್ನೂ ಮುಸ್ಲಿಮರಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಮೃದು ಹಿಂದುತ್ವ ರಾಜಕೀಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, "ಇಸ್ ಹಮಮ್ ಮೇ ಸಬ್ ನಂಗೇ ಹೈ" ಎಲ್ಲರೂ ಒಂದೇ ದೋಣಿಯಲ್ಲಿ ತೇಲುತ್ತಿದ್ದಾರೆ.

ಒಂದು ಘಟನೆಯಿಂದ ಅಖಿಲೇಶ್ ಯಾದವ್ ಬಗೆಗೆ ಮುಸ್ಲಿಂ ಸಮುದಾಯ ಹೊಂದಿರುವ ಮನೋಭಾವ ಬದಲಾಗದು ಎನ್ನುವುದು ಅಲೀಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನ ಬೋಧಕ ಮಿರ್ಜಾ ಅಸ್ಮರ್ ಬೇಗ್ ಅವರ ಸ್ಪಷ್ಟ ಅನಿಸಿಕೆ. "ರಾಜಕಾರಣಿಗಳು ಬಳಹಷ್ಟು ಸೂಕ್ಷ್ಮಮತಿಗಳಾಗಿದ್ದು, ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಖು ಎನ್ನುವುದು ಅವರಿಗೆ ತಿಳಿದಿದೆ. ಚುನಾವಣೆ ಸಂದರ್ಭದಲ್ಲಿ ಜನ ಅವರ ಮೇಲಿನ ವಿಶ್ವಾಸವನ್ನು ದೃಢಪಡಿಸುತ್ತಾರೆ ಎನ್ನುವ ನಂಬಿಕೆ ನನಗಿದೆ" ಎಂದು ಅವರು ಹೇಳುತ್ತಾರೆ.

ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಮುಸ್ಲಿಮರಲ್ಲಿ ಅಸಮಾಧಾನ ಹೆಚ್ಚುತ್ತಿದ್ದರೂ, ಪಕ್ಷ ಅವರ ಗ್ರಹಿಕೆಯನ್ನು ಬದಲಿಸುವ ಪ್ರಯತ್ನ ಮಾಡುತ್ತಿದೆ. ಅವರ ವಿಶ್ವಾಸವನ್ನು ಮರಳಿ ಪಡೆಯಲು ಎಲ್ಲ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ. "ನನ್ನನ್ನು ನಂಬಿ; ನಾವು ಬಿಜೆಪಿಗೆ ಗಂಭೀರ ಸವಾಲು ಒಡ್ಡಬೇಕಾದರೆ, ಮುಸ್ಲಿಮರ ನೆರವು ನಮಗೆ ಬೇಕು" ಎಂದು ಅವರು ಸ್ಪಷ್ಟಪಡಿಸುತ್ತಾರೆ.

Writer - ಆಕಾಶ್ ಬಿಷ್ಟ್, scroll.in

contributor

Editor - ಆಕಾಶ್ ಬಿಷ್ಟ್, scroll.in

contributor

Similar News