ಅಮೆರಿಕ: ವಿದೇಶಿ ಸಲಿಂಗ ಸಂಗಾತಿಗಳಿಗೆ ಕುಟುಂಬ ವೀಸಾ ಇಲ್ಲ
Update: 2018-10-04 22:30 IST
ವಾಶಿಂಗ್ಟನ್, ಅ. 4: ವಿದೇಶಿ ರಾಜತಾಂತ್ರಿಕರ ಮತ್ತು ಅಮೆರಿಕದಲ್ಲಿ ಸೇವೆ ಸಲ್ಲಿಸುವ ಅಂತಾರಾಷ್ಟ್ರೀಯ ಸಂಸ್ಥೆಗಳ ಸಿಬ್ಬಂದಿಯ ಸಲಿಂಗಿ ಸಂಗಾತಿಗಳಿಗೆ ಕುಟುಂಬ ವೀಸಾಗಳನ್ನು ನೀಡುವುದನ್ನು ಅಮೆರಿಕ ನಿಲ್ಲಿಸಿದೆ.
ಈಗಾಗಲೇ ಅಮೆರಿಕದಲ್ಲಿರುವವರು ಡಿಸೆಂಬರ್ 31ರೊಳಗೆ ಮದುವೆಯಾದ ಪುರಾವೆಗಳನ್ನು ಸಲ್ಲಿಸಬೇಕು. ಕೆಲವು ದೇಶಗಳು ಸಲಿಂಗ ವಿವಾಹಕ್ಕೆ ಅನುಮತಿ ನೀಡುವುದಿಲ್ಲವಾದುದರಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ವಿತರಿಸಲಾದ ಅಮೆರಿಕ ಟಿಪ್ಪಣಿ ತಿಳಿಸಿದೆ.
‘‘2018 ಅಕ್ಟೋಬರ್ 1ರಿಂದ ಅನ್ವಯವಾಗುವಂತೆ, ವಿಶ್ವಸಂಸ್ಥೆಯ ಹೊಸದಾಗಿ ನೇಮಿತ ಅಧಿಕಾರಿಗಳೊಂದಿಗೆ ಬರುವ ಅಥವಾ ಅವರನ್ನು ಕೂಡಿಕೊಳ್ಳಲು ಬರುವ ಸಲಿಂಗಿ ಸಂಗಾತಿಗಳು, ಜಿ-4 ವಿಸಾ ಪಡೆಯುವುದಕ್ಕಾಗಿ ವಿವಾಹವಾದ ದಾಖಲೆಯನ್ನು ನೀಡಬೇಕು’’ ಎಂದು ಅಮೆರಿಕದ ಟಿಪ್ಪಣಿ ತಿಳಿಸಿದೆ.
ಪ್ರಸಕ್ತ ಅಮೆರಿಕದಲ್ಲಿರುವ ಇಂಥ 105 ಜೋಡಿಗಳಿಗೆ ನೂತನ ನಿಯಮಗಳು ಅನ್ವಯವಾಗುತ್ತವೆ.