ಕಪ್ಪೆಯಂತೆ ವಟರುಗುಟ್ಟುತ್ತಿರುವ ಆರೆಸ್ಸೆಸ್ ವರಿಷ್ಠ: ಕಾಂಗ್ರೆಸ್

Update: 2018-10-04 17:08 GMT

ಹೊಸದಿಲ್ಲಿ, ಅ. 4: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ಗುರುವಾರ ಮಳೆಗಾಲದ ಕಪ್ಪೆಯ ವಟರುಗುಟ್ಟುವಿಕೆಗೆ ಹೋಲಿಸಿದೆ ಹಾಗೂ ಪ್ರತಿ ಚುನಾವಣೆ ಬಳಿಕ ರಾಮನನ್ನು ಆರೆಸ್ಸೆಸ್ ಹಾಗೂ ಬಿಜೆಪಿ ವನವಾಸಕ್ಕೆ ಕಳುಹಿಸುತ್ತಿದೆ ಎಂದು ಆರೋಪಿಸಿದೆ.

ಬಿಜೆಪಿ ಹಾಗೂ ಆರೆಸ್ಸೆಸ್ ಕಲಿಯುಗದ ಕೈಕೆಯಂತೆ. ಪ್ರತಿ ಚುನಾವಣೆಯ ನಾಲ್ಕು ತಿಂಗಳು ಮೊದಲು ರಾಮನನ್ನು ನೆನಪಿಸಿಕೊಳ್ಳುತ್ತದೆ. ಅನಂತರ ವನವಾಸಕ್ಕೆ ಕಳುಹಿಸುತ್ತದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಮಳೆಗಾಲ ಹಾಗೂ ಚುನಾವಣೆ ಸಂದರ್ಭ ಅಸಂಖ್ಯಾತ ಕಪ್ಪೆಗಳು ವಟರುಗುಟ್ಟುತ್ತವೆ. ಆದರೆ, ಪ್ರತಿ ಧ್ವನಿ ಕೂಡ ವಾಸ್ತವವಾಗುವುದಿಲ್ಲ. ರಾಮ ಎಲ್ಲೆಲ್ಲಿಯೂ ಇದ್ದಾನೆ ಎಂದು ಅವರು ಹೇಳಿದರು. ಸತ್ಯಯುಗದಲ್ಲಿ ಕೈಕೆ ರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದಳು. ಕಲಿಯುಗದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ರಾಮನನ್ನು 30 ವರ್ಷ ವನವಾಸಕ್ಕೆ ಕಳುಹಿಸುತ್ತಿದೆ. ಪ್ರತಿ ಚುನಾವಣೆ ಬಳಿಕ ಅದು ರಾಮನನ್ನು ವನವಾಸಕ್ಕೆ ಕಳುಹಿಸುತ್ತಿದೆ. ಚುನಾವಣೆಗಿಂತ ನಾಲ್ಕು ತಿಂಗಳು ಮುನ್ನ ಅದಕ್ಕೆ ರಾಮನ ನೆನಪಾಗುತ್ತಿದೆ. ಮಾತಿನಲ್ಲಿ ರಾಮನಿದ್ದಾನೆ, ಆದರೆ, ಚಿಂತನೆಯಲ್ಲಿ ನಾಥುರಾಮನಿದ್ದಾನೆ ಎಂದು ಸುರ್ಜೇವಾಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News