ಕೆನಡ ನ್ಯಾಯಾಲಯದಲ್ಲಿ ಹಿಜಾಬ್‌ಗೆ ಅವಕಾಶ
ಮಾಂಟ್ರಿಯಲ್ (ಕೆನಡ), ಅ. 4: ಹಿಜಾಬ್ ಧರಿಸಿದ ಮಹಿಳೆಯರಿಂದ ಸಾಕ್ಷ ಸ್ವೀಕರಿಸಲು ನ್ಯಾಯಾಧೀಶರು ನಿರಾಕರಿಸುವಂತಿಲ್ಲ ಎಂದು ಕೆನಡದ ನ್ಯಾಯಾಲಯವೊಂದು ಬುಧವಾರ ಹೇಳಿದೆ.
ನಾಗರಿಕರ ‘‘ಧಾರ್ಮಿಕ ನಂಬಿಕೆ ಪ್ರಾಮಾಣಿಕವಾಗಿರುವವರೆಗೆ’’ ಅವರು ನ್ಯಾಯಾಲಯದಲ್ಲಿ ಯಾವುದೇ ಧಾರ್ಮಿಕ ಬಟ್ಟೆಯನ್ನು ಧರಿಸಬಹುದು ಹಾಗೂ ಆ ಮೂಲಕ ಅವರು ಇನ್ನೊಂದು ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರುವುದಿಲ್ಲ ಎಂದು ಕ್ಯೂಬೆಕ್ ಹೈಕೋರ್ಟ್ ಸರ್ವಾನುಮತದ ತೀರ್ಪಿನಲ್ಲಿ ಹೇಳಿದೆ.
ಮಾಂಟ್ರಿಯಲ್ ನಿವಾಸಿ ರನಿಯಾ ಅಲ್ ಅಲ್ಲೌಲ್‌ರನ್ನು ಹಿಜಾಬ್ ಧರಿಸಿರುವುದಕ್ಕಾಗಿ 2015ರಲ್ಲಿ ನ್ಯಾಯಾಲಯ ಕೋಣೆಯಿಂದ ಹೊರಹಾಕಲಾಗಿತ್ತು.
ಅಂದು ತೀರ್ಪು ನೀಡಿದ್ದ ಕ್ಯೂಬೆಕ್ ನ್ಯಾಯಾಲಯದ ನ್ಯಾಯಾಧೀಶೆ ಇಲಿಯಾನಾ ಮರೆಂಗೊ, ಪ್ರತಿಯೊಬ್ಬರೂ ನ್ಯಾಯಾಲಯದಲ್ಲಿ ‘ಸರಿಯಾದ ಕ್ರಮದಲ್ಲಿ ಬಟ್ಟೆ ಧರಿಸಬೇಕು’ ಎಂದಿದ್ದರು ಹಾಗೂ ಹಿಜಾಬನ್ನು ಅವರು ಹ್ಯಾಟ್ ಅಥವಾ ಶೋಕಿ ಕನ್ನಡಕಗಳಿಗೆ ಹೋಲಿಸಿದ್ದರು.
ಆದರೆ, ರನಿಯಾ ಅಲ್ ಅಲ್ಲೌಲ್‌ರ ‘ಧಾರ್ಮಿಕ ಅಭಿವ್ಯಕ್ತಿ’ ಹಕ್ಕನ್ನು ನ್ಯಾಯಾಧೀಶೆ ಮರೆಂಗೊ ಗಣನೆಗೆ ತೆಗೆದುಕೊಂಡಿಲ್ಲ ಎಂಬುದಾಗಿ ಎಲ್ಲ ಮೂವರು ಮೇಲ್ಮನವಿ ನ್ಯಾಯಾಧೀಶರು ಅಭಿಪ್ರಾಯಪಟ್ಟರು.