ಬಿಬಿಎಂಪಿ ವಾಹನಗಳ ಅಸ್ತವ್ಯಸ್ತ ನಿಲುಗಡೆ

Update: 2018-10-04 18:31 GMT

ಮಾನ್ಯರೇ,

ನಗರದ ಬಿಬಿಎಂಪಿಯ ನೂತನ ಮೇಯರ್ ಆಗಿ ಅಧಿಕಾರ ಸ್ವೀಕಾರ ಮಾಡಿರುವ ಗಂಗಾಂಬಿಕೆಯವರು ಶನಿವಾರ ಸಿಟಿ ಮಾರ್ಕೆಟಿಗೆ ಭೇಟಿ ನೀಡಿ ಸ್ವಚ್ಛತೆ ಕಾಪಾಡದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬಹುಶಃ ಇದುವರೆಗೆ ಯಾವ ಮೇಯರ್ ಕೂಡ ಸಿಟಿ ಮಾರ್ಕೆಟಿಗೆ ಹೋಗಿ ಇಂತಹ ಎಚ್ಚರಿಕೆ ನೀಡಿರಲಾರರು. ನಗರದಲ್ಲಿ ಕಸ ವಿಲೇವಾರಿ ಮಾಡುವುದು ಬಹು ದೊಡ್ಡ ಕೆಲಸವಲ್ಲದೆ, ಹೊರೆಯೂ ಹೌದು. ನೂತನ ಮೇಯರ್ ಸ್ವಚ್ಛತೆಯ ಬಗ್ಗೆ ಎಚ್ಚರಿಕೆ ನೀಡುವುದರ ಜೊತೆಗೆ ನಗರದ ಟ್ರಾಫಿಕ್ ಸಮಸ್ಯೆ ನಿವಾರಿಸಲೂ ಕೈ ಜೋಡಿಸಬೇಕಾಗಿದೆ. ಕಸ ವಿಲೇವಾರಿಯ ಬಿಬಿಎಂಪಿ ಲಾರಿಗಳು ಮುಖ್ಯರಸ್ತೆಗಳ ಪಕ್ಕದಲ್ಲೇ ನಿಲ್ಲಿಸುವುದರಿಂದ, ದಿನನಿತ್ಯ ಓಡಾಡುವವರಿಗೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯ ಹಿಂಬದಿಯಲ್ಲಿರುವ ಬೆಸ್ಕಾಂ ಕಚೇರಿಯ ಬಳಿ ಸಾಲು ಸಾಲಾಗಿ ಬಿಬಿಎಂಪಿಯ ಲಾರಿಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಬಿನ್ನಿಪೇಟೆಯ ಮುಖ್ಯರಸ್ತೆಯಲ್ಲಿ, ಚಾಮರಾಜ ಪೇಟೆಯ ಹಲವು ಮುಖ್ಯರಸ್ತೆಗಳಲ್ಲಿ ಈ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಅನೇಕ ವಾಹನ ಸವಾರರು ಸಾಹಸಮಾಡಿ ಚಲಿಸಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಬಿಬಿಎಂಪಿ ಮೇಯರ್, ಇಲಾಖೆಯ ಆಯುಕ್ತರು ಮತ್ತು ಅಧಿಕಾರಿಗಳು ಸರಕಾರದಿಂದ ಸೂಕ್ತ ಜಾಗವನ್ನು ನಿಗದಿಪಡಿಸಿ, ಕಸ ವಿಲೇವಾರಿಯ ಲಾರಿಗಳನ್ನು ಮತ್ತು ವಾಹನಗಳನ್ನು ನಿಲ್ಲಿಸಬೇಕು. ನಗರದಲ್ಲಿ ಅನೇಕ ಸರಕಾರಿ ಜಾಗಗಳಿವೆ. ಅವುಗಳನ್ನು ಉಪಯೋಗಿಸಿಕೊಂಡು ಬಿಬಿಎಂಪಿ ವಾಹನಗಳ ನಿಲುಗಡೆಗೆ ಆದಷ್ಟು ಬೇಗ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು ಇದರಿಂದ ಟ್ರಾಫಿಕ್ ಸಮಸ್ಯೆ ನಿವಾರಣೆಯ ಜೊತೆಗೆ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ಕೂಡ ತಡೆಗಟ್ಟಬಹುದು.

Writer - -ಶಿವಕುಮಾರ ಎಂ., ಬೆಂಗಳೂರು

contributor

Editor - -ಶಿವಕುಮಾರ ಎಂ., ಬೆಂಗಳೂರು

contributor

Similar News