ಸಾಮಾನ್ಯ ಉಪ್ಪು ನೀಡುವ ಆರೋಗ್ಯಭಾಗ್ಯಗಳು ನಿಮಗೆ ಗೊತ್ತೇ....?

Update: 2018-10-05 10:43 GMT

ದ್ರವ ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ನರಗಳು ಹಾಗೂ ಸ್ನಾಯುಗಳು ಸುಗಮವಾಗಿ ಕಾರ್ಯ ನಿರ್ವಹಿಸಲು ನಮ್ಮ ಶರೀರಕ್ಕೆ ಉಪ್ಪು ಅತ್ಯಗತ್ಯವಾಗಿದೆ. ಅಲ್ಲದೆ ನಾವು ಸೇವಿಸುವ ಆಹಾರಕ್ಕೆ ರುಚಿ ನೀಡುವಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪಿಲ್ಲದ ಊಟವನ್ನು ಮಾಡುವುದು ಸಾಮಾನ್ಯರಿಗೆ ಕಲ್ಪಿಸಿಕೊಳ್ಳಲೂ ಅಸಾಧ್ಯ.

ಉಪ್ಪು ತೂಕದ ಲೆಕ್ಕದಲ್ಲಿ ಶೇ.40ರಷ್ಟು ಸೋಡಿಯಂ ಮತ್ತು ಶೇ.60ರಷ್ಟು ಕ್ಲೋರೈಡ್‌ನ್ನು ಒಳಗೊಂಡಿರುತ್ತದೆ. ಜೊತೆಗೆ ಪೊಟ್ಯಾಷಿಯಂ,ಕಬ್ಬಿಣ,ಸತುವು ಮತ್ತು ಕ್ಯಾಲ್ಸಿಯಂ ಕೂಡ ಅದರಲ್ಲಿರುತ್ತವೆ.

ನಾವು ದಿನವೊಂದಕ್ಕೆ ಆರು ಗ್ರಾಮ್‌ಗಿಂತ ಅಧಿಕ ಉಪ್ಪನ್ನು ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ. ಶರೀರದ ಚಯಾಪಚಯ ಕಾರ್ಯ ಉತ್ತಮವಾಗಿ ನಡೆಯಲು ಉಪ್ಪು ಮತ್ತು ನೀರಿನ ಸೂಕ್ತ ಅನುಪಾತವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಉಪ್ಪಿನ ಕೆಲವು ಪ್ರಮುಖ ಆರೋಗ್ಯಲಾಭಗಳು ಹೀಗಿವೆ....

►ಮಧುಮೇಹ ನಿರ್ವಹಣೆಯಲ್ಲಿ ನೆರವಾಗುತ್ತದೆ

ಶರೀರವು ತನ್ನ ಕ್ಷಮತೆಯನ್ನು ಕಾಯ್ದುಕೊಳ್ಳಲು ಇನ್ಸುಲಿನ್ ಆರೋಗ್ಯಕರ ಮಟ್ಟದಲ್ಲಿರಬೇಕಾಗುತ್ತದೆ. ಕಡಿಮೆ ಉಪ್ಪನ್ನು ಹೊಂದಿರುವ ಆಹಾರವನ್ನು ಪ್ರತಿದಿನ ಸೇವಿಸಿದರೆ ಇನ್ಸುಲಿನ್‌ಗೆ ಶರೀರದ ಸಂವೇದನೆಯು ಕಡಿಮೆಯಾಗುತ್ತದೆ. ಇದು ಗ್ಲುಕೋಸ್ ಅನ್ನು ಚಯಾಪಚಯಗೊಳಿಸುವ ಶರೀರದ ಸಾಮರ್ಥ್ಯವನ್ನು ಕುಂದಿಸುತ್ತದೆ ಮತ್ತು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ. ಹೀಗಾಗಿ ಕುಟುಂಬದಲ್ಲಿ ಟೈಪ್ 2 ಮಧುಮೇಹದ ಇತಿಹಾಸವುಳ್ಳವರು ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ಉಪ್ಪು ಸೇವಿಸುವುದು ಅಗತ್ಯವಾಗುತ್ತದೆ.

►ಬಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ

ಬ್ಯಾಕ್ಟೀರಿಯಾ ಸೋಂಕುಗಳಿಂದ ವಸಡುಗಳಲ್ಲಿ ಹುಣ್ಣಾಗಿದ್ದರೆ ನೈಸಗಿಕ ಮನೆಮದ್ದಾಗಿ ಬೆಚ್ಚಗಿನ ಉಪ್ಪುನೀರಿನಿಂದ ಬಾಯಿ ಮುಕ್ಕಳಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಇದು ತಕ್ಷಣ ಪರಿಣಾಮವನ್ನು ನೀಡುತ್ತದೆ. ಉಪ್ಪುನೀರು ಹುಣ್ಣುಗಳನ್ನು ಶಮನಗೊಳಿಸಿ ವಸಡುಗಳ ಊತವನ್ನು ಕಡಿಮೆ ಮಾಡುತ್ತದೆ. ಅರ್ಧ ಚಮಚ ಉಪ್ಪು ಮತ್ತು ಬೇಕಿಂಗ್ ಸೋಡಾವನ್ನು ಒಂದು ಕಪ್ ಉಗುರು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಪ್ರತಿದಿನ ಬಾಯಿ ಮುಕ್ಕಳಿಸಿದರೆ ಹಲ್ಲುಗಳು ಸ್ವಚ್ಛಗೊಳ್ಳುತ್ತವೆ. ಹಲ್ಲುಗಳನ್ನು ಬಿಳಿಯಾಗಿಸುವಲ್ಲಿ ಮತ್ತು ವಸಡುಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಈ ಮಿಶ್ರಣ ಅತ್ಯಂತ ಪರಿಣಾಮಕಾರಿಯಾಗಿದೆ.

►ಅಯೊಡಿನ್ ಕೊರತೆಯ ವಿರುದ್ಧ ಹೋರಾಡುತ್ತದೆ

ಅಯೊಡೈಸ್ಡ್ ಉಪ್ಪು ಅಯೊಡಿನ್‌ನ ಅತ್ಯಂತ ಸಾಮಾನ್ಯ ಮೂಲಗಳಲ್ಲಿ ಒಂದಾಗಿದೆ. ಥೆೃರಾಯ್ಡು ಹಾರ್ಮೋನ್ ಉತ್ಪತ್ತಿಯಾಗಲು ಶರೀರಕ್ಕೆ ಅಯೊಡಿನ್ ಅಗತ್ಯವಾಗಿದೆ. ನಮ್ಮ ಶರೀರವು ನೈಸರ್ಗಿಕವಾಗಿ ಅಯೊಡಿನ್ ಅನ್ನು ಉತ್ಪಾದಿಸುವುದಿಲ್ಲ,ಹೀಗಾಗಿ ಉಪ್ಪಿನ ಮೂಲಕ ಅಯೊಡಿನ್ ಸೇವನೆ ಮುಖ್ಯವಾಗಿದೆ. ಶರೀರಕ್ಕೆ ಸಾಕಷ್ಟು ಅಯೊಡಿನ್ ಪೂರೈಕೆಯಾಗದಿದ್ದರೆ ಶರೀರದ ಥೈರಾಯ್ಡೆ ಹಾರ್ಮೋನ್ ಬೇಡಿಕೆಯನ್ನು ಪೂರೈಸಲು ಥೈರಾಯ್ಡೆ ಗ್ರಂಥಿಯು ದೊಡ್ಡದಾಗುತ್ತದೆ ಮತ್ತು ಹೈಪೊಥೈರಾಯ್ಡಿಸಮ್‌ನಂತಹ ಸಮಸ್ಯೆಗಳನ್ನುಂಟು ಮಾಡುತ್ತದೆ.

► ಹೃದಯ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ

 ಶರೀರದ ರಕ್ತದೊತ್ತಡ ಮಟ್ಟವನ್ನು ನಿರ್ಧರಿಸುವಲ್ಲಿ ಸಾಮಾನ್ಯ ಉಪ್ಪು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ರಕ್ತದೊತ್ತಡ ಮಟ್ಟವು ಹೃದಯಾಘಾತಗಳು ಮತ್ತು ಪಾರ್ಶ್ವವಾಯುವಿಗೆ ಸಂಬಂಧಿಸಿದ ಹೃದಯ ರಕ್ತನಾಳಗಳ ಆರೋಗ್ಯದ ಮೇಲೆ ಪರಿಣಾಮವನ್ನು ಹೊಂದಿರುತ್ತದೆ. ಕಡಿಮೆ ರಕ್ತದೊತ್ತಡವಿದ್ದರೆ ಹೆಚ್ಚು ಉಪ್ಪನ್ನು ಸೇವಿಸುವ ಮೂಲಕ ಚಿಕಿತ್ಸೆ ನೀಡಬಹುದಾಗಿದೆ. ಉಪ್ಪು ರಕ್ತನಾಳಗಳಲ್ಲಿ ಪ್ರವಹಿಸುವ ರಕ್ತದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇದೇ ಕಾರಣದಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿದ್ದವರು ಉಪ್ಪಿನ ಸೇವನೆಗೆ ಮಿತಿ ಹಾಕಿಕೊಳ್ಳಬೇಕಾಗುತ್ತದೆ.

►ಸ್ನಾಯು ಸೆಳೆತಗಳನ್ನು ತಡೆಯುತ್ತದೆ

ವ್ಯಾಯಾಮ,ಔಷಧಿಗಳ ಸೇವನೆ ಅಥವಾ ಮದ್ಯಪಾನ ಸ್ನಾಯು ಸೆಳೆತಕ್ಕೆ ಕಾರಣವಾಗುತ್ತವೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉಪ್ಪನ್ನು ಒಳಗೊಂಡಿರುವ ದ್ರವಗಳನ್ನು ಸೇವಿಸುವ ಮೂಲಕ ತಕ್ಷಣ ಪರಿಹಾರವನ್ನು ಪಡೆಯಬಹುದಾಗಿದೆ. ಸ್ನಾಯುಗಳ ಸೂಕ್ತ ಕಾರ್ಯನಿರ್ವಹಣೆಯು ಪೊಟ್ಯಾಷಿಯಂ ಲಭ್ಯತೆಯನ್ನು ಅವಲಂಬಿಸಿರುತ್ತದೆ. ಸಮುದ್ರ ಉಪ್ಪು ಈ ಖನಿಜವನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿರುತ್ತದೆ. ಆದ್ದರಿಂದ ಉಪ್ಪಿನ ಸೇವನೆಯು ಸ್ನಾಯು ಸಂಕುಚನಗಳು ಮತ್ತು ಸೆಳೆತಗಳನ್ನು ದೂರವಿಡುತ್ತದೆ.

►ನಿದ್ರೆಗೆ ಸಹಕಾರಿ

ನಾವು ನಿದ್ರಿಸಿರುವಾಗ ಬಾಯಿಯಿಂದ ಜೊಲ್ಲು ಹರಿಯುತ್ತಿದ್ದರೆ ಅದು ಶರೀರದಲ್ಲಿ ಉಪ್ಪಿನ ಕೊರತೆಯನ್ನು ಸೂಚಿಸುತ್ತದೆ. ಉಪ್ಪಿನ ಕೊರತೆಯು ಶರೀರದಲ್ಲಿ ನೀರು ಕಡಿಮೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಆದ್ದರಿಂದ ಈ ಕೊರತೆಯನ್ನು ನೀಗಿಸಲು ಜೊಲ್ಲು ಗ್ರಂಥಿಗಳು ಹೆಚ್ಚು ಜೊಲ್ಲನ್ನು ಉತ್ಪತ್ತಿ ಮಾಡುತ್ತವೆ. ಹೀಗಾಗಿ ನಾವು ಮಲಗುವ ಮುನ್ನ ಉಪ್ಪನ್ನು ಒಳಗೊಂಡಿರುವ ದ್ರವಗಳನ್ನು ಸೇವಿಸಬೇಕು ಎನ್ನುವುದು ವೈದ್ಯಕೀಯ ಸಲಹೆಯಾಗಿದೆ. ಇದು ಅಧಿಕ ಜೊಲ್ಲು ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಸಮುದ್ರದ ಉಪ್ಪು ಖಿನ್ನತೆಯ ಚಿಕಿತ್ಸೆಯೊಂದಿಗೂ ಗುರುತಿಸಿಕೊಂಡಿದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಅದು ಸೆರೊಟೋನಿನ್ ಮತ್ತು ಮೆಲಾಟೋನಿನ್‌ನಂತಹ ಹಾರ್ಮೋನ್‌ಗಳು ಸ್ರವಿಸುವಂತೆ ಮಾಡುತ್ತದೆ ಮತ್ತು ಈ ಹಾರ್ಮೋನ್‌ಗಳು ಒತ್ತಡವನ್ನು ನಿಭಾಯಿಸುವಲ್ಲಿ ನೆರವಾಗುತ್ತವೆ. ತನ್ಮೂಲಕ ಮನಸ್ಸಿಗೆ ನೆಮ್ಮದಿಯನ್ನುಂಟು ಮಾಡಿ ರಾತ್ರಿ ಒಳ್ಳೆಯ ನಿದ್ರೆ ಬರುವಂತೆ ಮಾಡುತ್ತವೆ.

► ನಿರ್ಜಲೀಕರಣವನ್ನು ತಡೆಯುತ್ತದೆ

ಉಪ್ಪಿನ ಸೇವನೆಯು ಶರೀರದಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ವಿವಿಧ ಅಂಗಗಳು ಸುಗಮವಾಗಿ ಕಾರ್ಯಾಚರಿಸುವಂತಾಗಲು ಇಲೆಕ್ಟ್ರೋಲೈಟ್ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಕಠಿಣ ಶ್ರಮದ ಕೆಲಸಗಳನ್ನು ಮಾಡುವವರಲ್ಲಿ ಅತಿಯಾದ ಬೆವರುವಿಕೆ ಉಂಟಾಗುತ್ತದೆ ಮತ್ತು ಈ ಬೆವರಿನ ಮೂಲಕ ಉಂಟಾಗುವ ನೀರು ಮತ್ತು ಉಪ್ಪಿನ ಕೊರತೆಯನ್ನು ನೀಗಿಸಿಕೊಳ್ಳುವುದು ಅವರಿಗೆ ಮುಖ್ಯವಾಗಿದೆ.

►ಇಲೆಕ್ಟ್ರೋಲೈಟ್ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ

 ರಕ್ತದಲ್ಲಿಯ ಇಲೆಕ್ಟ್ರೋಲೈಟ್‌ಗಳಾದ ಸೋಡಿಯಂ,ಕ್ಲೋರೈಡ್,ಪೊಟ್ಯಾಷಿಯಂ ಮತ್ತು ಬೈಕಾರ್ಬೊನೇಟ್ ನರಗಳು ಮತ್ತು ಸ್ನಾಯುಗಳ ಕಾರ್ಯ ನಿರ್ವಹಣೆಯಲ್ಲಿ ನೆರವಾಗುತ್ತವೆ. ಶರೀರದಲ್ಲಿ ನೀರಿನ ಸಮತೋಲನ ಮತ್ತು ಆ್ಯಸಿಡ್ ಬೇಸ್ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿಯೂ ಇವು ನೆರವಾಗುತ್ತವೆ.

ಅತಿಯಾಗಿ ಬೆವರಿದ ಬಳಿಕ ಹೆಚ್ಚುವರಿ ಉಪ್ಪು ಸೇರಿರುವ ಆಹಾರ ಸೇವನೆಯು ಇಲೆಕ್ಟ್ರೋಲೈಟ್ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಉಪ್ಪು ಶರೀರದಲ್ಲಿ ದ್ರವವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ ಮತ್ತು ಶರೀರದ ಜಲೀಕರಣವನ್ನು ಕಾಯ್ದುಕೊಳ್ಳುತ್ತದೆ ಎನ್ನುವುದು ಇದಕ್ಕೆ ಕಾರಣವಾಗಿದೆ. ಬೆವರು ಸೋಡಿಯಂ ಮತ್ತು ಕ್ಲೋರೈಡ್‌ಗಳ ಅಧಿಕ ನಷ್ಟವನ್ನುಂಟು ಮಾಡುತ್ತದೆ ಎನ್ನುವುದೂ ಸಂಶೋಧನೆಯಿಂದ ಸಾಬೀತಾಗಿದೆ.

►ಜೀರ್ಣಕ್ರಿಯೆಗೆ ನೆರವಾಗುತ್ತದೆ

ಶರೀರದಲ್ಲಿ ಜೀರ್ಣ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಯಲ್ಲಿ ಉಪ್ಪು ಪ್ರಮುಖ ಪಾತ್ರವನ್ನು ಹೊಂದಿದೆ. ಅದು ನಿಮ್ಮ ರುಚಿಮೊಗ್ಗುಗಳು ಆಹಾರದ ರುಚಿಯನ್ನು ಅನುಭವಿಸುವಂತೆ ಮಾಡುವ ಜೊತೆಗೆ ಆಹಾರದ ವಿಭಜನೆಯಲ್ಲಿಯೂ ನೆರವಾಗುತ್ತದೆ. ಪಚನ ಕ್ರಿಯೆಯಲ್ಲಿ ಪ್ರಮುಖವಾಗಿರುವ ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪಾದಿಸುವಲ್ಲಿ ಉಪ್ಪಿನ ಹೊಣೆಗಾರಿಕೆಯಿದೆ.

►ಉಷ್ಣಾಘಾತವನ್ನು ತಡೆಯುತ್ತದೆ

ಶರೀರದ ತಾಪಮಾನ ನಿಯಂತ್ರಣ ವ್ಯವಸ್ಥೆ ಕಡಿಮೆಯಾದಾಗ ಬಿಸಿಲಿನ ಆಘಾತವುಂಟಾಗುತ್ತದೆ. ಸುತ್ತಲಿನ ವಾತಾವರಣದಲ್ಲಿ ಅತಿಯಾದ ಉಷ್ಣತೆ ಅಥವಾ ಸೂರ್ಯನ ಬಿಸಿಲಿಗೆ ಹೆಚ್ಚು ಅವಧಿಗೆ ಒಡ್ಡಿಕೊಂಡಿದ್ದರೆ ಉಷ್ಣಾಘಾತವನ್ನುಂಟು ಮಾಡುತ್ತದೆ. ಇದು ಉಂಟಾದಾಗ ಉಷ್ಣತೆಯನ್ನು ಸೂಕ್ತವಾಗಿ ಬಿಡುಗಡೆಗೊಳಿಸಲು ಶರೀರಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಸಹಜ ತಾಪಮಾನವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಶರೀರದ ಉಷ್ಣತೆ ಅತ್ಯಂತ ಹೆಚ್ಚಿನ ಮಟ್ಟಕ್ಕೇರುತ್ತದೆ. ಉಷ್ಣಾಘಾತವು ಆಂತರಿಕ ಅಂಗಾಂಗಗಳಿಗೆ ಅಪಾಯಕಾರಿಯಾಗಬಹುದು. ಇದನ್ನು ತಡೆಯಲು ಶರೀರವು ಬೆವರನ್ನು ಉತ್ಪಾದಿಸುವ ಮೂಲಕ ಸ್ವಯಂ ತಂಪುಗೊಳ್ಳಲು ಆರಂಭಿಸುತ್ತದೆ. ಇದರಿಂದ ಶರೀರದಲ್ಲಿ ಹೆಚ್ಚಿನ ನೀರು ಮತ್ತು ಉಪ್ಪು ನಷ್ಟವಾಗುತ್ತವೆ. ಯಥೇಚ್ಛ ನೀರು ಮತ್ತು ಸಾಕಷ್ಟು ಉಪ್ಪಿನ ಸೇವನೆಯಿಂದ ಇಲೆಕ್ಟ್ರೋಲೈಟ್ ಸಮತೋಲನ ಕಾಯ್ದುಕೊಳ್ಳಲು ಮತ್ತು ತನ್ಮೂಲಕ ಉಷ್ಣಾಘಾತವನ್ನು ತಡೆಯಲು ನೆರವಾಗುತ್ತದೆ. ಅಲ್ಲದೆ ಆಗಷ್ಟೇ ಉಷ್ಣಾಘಾತಕ್ಕೊಳಗಾದ ವ್ಯಕ್ತಿಗೆ ಸಕ್ಕರೆ ಮತ್ತು ಉಪ್ಪು ಬೆರೆತ ದ್ರವವನ್ನು ಕುಡಿಸುವುದರಿಂದ ಆತ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News