ಕಥುವಾ ಅತ್ಯಾಚಾರ, ಹತ್ಯೆ ಪ್ರಕರಣ : ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾದ ಅಪೀಲನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2018-10-05 10:56 GMT

ಹೊಸದಿಲ್ಲಿ, ಅ. 5: ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರರಣದ ಇಬ್ಬರು ಆರೋಪಿಗಳು ಘಟನೆಯ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅಪೀಲನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.  ಈಗಾಗಲೇ ನಡೆಸಲಾದ ಈ ಪ್ರಕರಣದ ತನಿಖೆ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಆರೋಪಿಸಿ ಮರು ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಇನ್ನೊಂದು ಅಪೀಲನ್ನೂ ನ್ಯಾಯಾಲಯ ಬದಿಗೆ ತಳ್ಳಿದೆ.

ಜಸ್ಟಿಸ್ ಯು ಯು ಲಲಿತ್ ಹಾಗೂ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಪ್ರಕರಣದ ಪ್ರಮುಖ ಆರೋಪಿಯ ಪುತ್ರ ಸಲ್ಲಿಸಿದ್ದ ಅಪೀಲನ್ನು ತಳ್ಳಿ ಹಾಕಿ  ಈಗ ನಡೆಯುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ನಡೆಸಿ ಮರು ತನಿಖೆಗೆ ಆದೇಶಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ.

ಪ್ರಕರಣದ ತನಿಖಾ ತಂಡವನ್ನು ಮೂರು ಬಾರಿ ಬದಲಾಯಿಸಲಾಗಿದೆ ಹಾಗೂ ಈ ಪ್ರಕರಣದ ತನಿಖೆ ನಡೆಸಿದ ಕೆಲ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳ ವಿರುದ್ಧವೇ ಕೆಲವು ಪ್ರಕರಣಗಳಿವೆ ಎಂದು  ಅಪೀಲುದಾರರು ವಾದಿಸಿದ್ದರು.

ತನಿಖೆಯ ಬಗ್ಗೆ ಏನಾದರೂ ಆಕ್ಷೇಪಗಳಿದ್ದರೂ ಈಗಾಗಲೇ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದಲ್ಲಿ ಅದನ್ನು ಎತ್ತಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜನವರಿ 10ರಂದು ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಿಂದ ನಾಪತ್ತೆಯಾಗಿದ್ದ ಎಂಟು ವರ್ಷದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಾಲಕಿ ನಂತರ ಶವವಾಗಿ ಪತ್ತೆಯಾಗಿದ್ದಳು. ಆಕೆಗೆ ಅಮಲು ಪದಾರ್ಥ ನೀಡಿ, ಸಾಮೂಹಿಕ ಅತ್ಯಾಚಾರಗೈದು ಬರ್ಬರವಾಗಿ ಆಕೆಯನ್ನು ಕೊಲೆಗೈಯ್ಯಲಾಗಿತ್ತು ಎಂದು ನಂತರ ತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News