ಹೆಚ್ಚಿನ ಬಾಗಿಲ ಹಿಡಿಕೆಗಳು ಹಿತ್ತಾಳೆಯದ್ದೇ ಆಗಿರುತ್ತವೆ, ಏಕೆ......?

Update: 2018-10-05 11:36 GMT

ಡೋರ್ ನಾಬ್ ಅಥವಾ ಬಾಗಿಲ ಹಿಡಿಕೆಗಳು ವಿವಿಧ ಆಕಾರಗಳಲ್ಲಿ, ಫಿನಿಷ್‌ಗಳಲ್ಲಿ ಮತ್ತು ಶೈಲಿಗಳಲ್ಲಿ ದೊರೆಯುತ್ತವೆ. ಇವೆಲ್ಲ ಹೆಚ್ಚಾಗಿ ಗ್ರಾಹಕರ ಮನ ಮೆಚ್ಚಿಸುವ ಅಂಶಗಳಾಗಿವೆ. ಆದರೆ ಹಿತ್ತಾಳೆ, ಕ್ರೋಮ್, ಪ್ಲಾಸ್ಟಿಕ್ ಅಥವಾ ಸ್ಟೇಯ್ನಿಲೆಸ್ ಸ್ಟೀಲ್ ಬಾಗಿಲ ಹಿಡಿಕೆಗಳು ನಿಮ್ಮ ಮುಂದಿದ್ದಾಗ ಆಯ್ಕೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಹೊಂದಿರಬಹುದು.

ಇದಕ್ಕೆ ಕಾರಣವಿದೆ, ತಾಮ್ರ ಮತ್ತು ಅದರ ಮಿಶ್ರಧಾತುಗಳು ಸ್ವಯಂ ಕೀಟನಾಶಕಗಳಾಗಿವೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಮಾಲ್‌ಗಳಲ್ಲಿಯ ಶಾಪಿಂಗ್ ಕಾರ್ಟ್‌ನಿಂದ ಹಿಡಿದು ಜಿಮ್‌ನಲ್ಲಿಯ ಬೆವರಿಳಿಸು ಸಾಧನಗಳವರೆಗೂ ನಾವು ಆಗಾಗ್ಗೆ ಸ್ಪರ್ಶಿಸುವ ಮೇಲ್ಮೈಗಳು ಬ್ಯಾಕ್ಟೀರಿಯಾಗಳ ವಾಸಸ್ಥಾನಗಳಾಗಿರುತ್ತವೆ. ಈ ಮಾತು ಡೋರ್ ನಾಬ್‌ಗಳಿಗೂ ಅನ್ವಯಿಸುತ್ತದೆ. ಆದರೆ ಈ ಡೋರ್ ನಾಬ್‌ಗಳು ಹಿತ್ತಾಳೆಯಿಂದ ತಯಾರಾಗಿದ್ದರೆ ರಾಸಾಯನಿಕ ಕ್ರಿಯೆಯು ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ.

ಹಿತ್ತಾಳೆಯಲ್ಲಿರುವ ಮೆಟಲ್ ಅಯಾನ್‌ಗಳು ಜೀವಂತ ಕೋಶಗಳು ಮತ್ತು ಬ್ಯಾಕ್ಟೀರಿಯಾಗಳ ಮೇಲೆ ಮಾರಣಾಂತಿಕ ಪರಿಣಾಮವನ್ನುಂಟು ಮಾಡುತ್ತವೆ ಮತ್ತು ಇದನ್ನು ‘ಒಲಿಗೊಡೈನಾಮಿಕ್ ಎಫೆಕ್ಟ್’ ಎಂದು ಕರೆಯಲಾಗುತ್ತದೆ. ಇದೇ ಕಾರಣದಿಂದ ಹಿತ್ತಾಳೆಯ ಡೋರ್ ನಾಬ್‌ನ್ನು ತಿರುಗಿಸುವ ಕೈಗಳಿಂದ ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತವೆ.

1846ರ ಸುಮಾರಿಗೆ ಲೋಹದ ಡೋರ್ ನಾಬ್‌ಗಳು ಮೊದಲ ಬಾರಿಗೆ ಸೃಷ್ಟಿಯಾಗಿದ್ದು, ತಯಾರಕರು ಅವುಗಳ ತಯಾರಿಗೆ ಹಿತ್ತಾಳೆಯನ್ನು ಬಳಸಲು ಆರಂಭಿಸಿದಾಗ ಅವರಿಗೆ ಈ ಲೋಹದ ಈ ವಿಶಿಷ್ಟ ಗುಣ ಗೊತ್ತಿರಲಿಲ್ಲ. ಹಿತ್ತಾಳೆಯು ಬಾಳಿಕೆ ಬರುತ್ತದೆ ಮತ್ತು ತುಕ್ಕು ಹಿಡಿಯುವುದಿಲ್ಲ ಎಂಬ ಅಂಶವು ಅವರನ್ನು ಆಕರ್ಷಿಸಿತ್ತು. ಇಂದಿಗೂ ಡೋರ್ ನಾಬ್‌ಗಳ ತಯಾರಿಕೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಕೆಯಾಗುವ ಲೋಹ ಹಿತ್ತಾಳೆಯೇ ಆಗಿದ್ದರೂ,ಸ್ಟೇಯ್ನಾಲೆಸ್ ಸ್ಟೀಲ್ ಮತ್ತು ಪ್ಲಾಸ್ಟಿಕ್ ಡೋರ್‌ನಾಬ್‌ಗಳು ಅಗ್ಗದ ದರಗಳಿಂದಾಗಿ ಜನಪ್ರಿಯಗೊಳ್ಳುತ್ತಿವೆ. ಆದರೆ ಅವು ಹಿತ್ತಾಳೆಯಂತೆ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಿಲ್ಲ.

 ಸ್ಟೇಯ್ನಲೆಸ್ ಸ್ಟೀಲ್‌ನ ಮೇಲ್ಮೈ ಮೇಲೆ ಈ ಬ್ಯಾಕ್ಟೀರಿಯಾಗಳು ವಾರಗಳ ಕಾಲ ಉಳಿದುಕೊಳ್ಳಬಲ್ಲವು,ಆದರೆ ತಾಮ್ರದ ಮೇಲ್ಮೈನಲ್ಲಿ ನಿಮಿಷಗಳಲ್ಲಿ ಅವು ಸಾಯುತ್ತವೆ. ನಾವಿಂದು ಈ ಸ್ಟೇಯ್ನಾಲೆಸ್ ಸ್ಟೀಲ್ ಮತ್ತು ಪ್ಲಾಸ್ಟಿಕ್‌ನ ಹೊಸಯುಗದಲ್ಲಿ ಬದುಕುತ್ತಿದ್ದೇವೆ,ಆದರೆ ಇದರ ಬದಲಾಗಿ ಹಿತ್ತಾಳೆ ಹೆಚ್ಚಾಗಿ ಬಳಕೆಯಾಗುತ್ತಿದ್ದ ಹಿಂದಿನ ಕಾಲಕ್ಕೆ ನಾವು ಮರಳಬೇಕಿದೆ ಎಂದು ಬ್ರಿಟನ್‌ನ ಸೌಥ್‌ಹ್ಯಾಂಪ್ಟನ್ ವಿವಿಯ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಪ್ರೊ.ಬಿಲ್ ಕೀವಿಲ್ ಅವರು ಜರ್ನಲ್ ‘ಮಾಲೆಕ್ಯೂಲರ್ ಜೆನೆಟಿಕ್ಸ್ ಆಫ್ ಬ್ಯಾಕ್ಟೀರಿಯಾ’ದಲ್ಲಿ ಪ್ರಕಟವಾಗಿರುವ ತನ್ನ ತಂಡದ ಸಂಶೋಧನಾ ವರದಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News