ದಿಲ್ಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಲು ಸುಪ್ರೀಂ ನಕಾರ

Update: 2018-10-05 14:09 GMT

ಹೊಸದಿಲ್ಲಿ, ಅ.5: ದಿಲ್ಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಬೇಕೆಂದು ಕೋರಿ ಹಾಕಲಿದ್ದ ಅರ್ಜಿಯನ್ನು ಶುಕ್ರವಾರ ತಿರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯ, ಹಿಂದಿನ ಸಂವಿಧಾನ ಪೀಠದ ತೀರ್ಪಿನ ಹಿನ್ನೆಲೆಯಲ್ಲಿ ಈ ಅರ್ಜಿ ಫಲದಾಯಕವಲ್ಲ ಎಂದು ತಿಳಿಸಿದೆ.

ದಿಲ್ಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಈ ಹಿಂದೆ ಸಂವಿಧಾನ ಪೀಠವು ತೀರ್ಪು ನೀಡಿತ್ತು. ನ್ಯಾಯಾಧೀಶ ಮದನ್ ಬಿ.ಲೊಕುರ್, ಎಸ್.ಅಬ್ದುಲ್ ನಝೀರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಾಯಿತು. ಈ ವೇಳೆ ಜುಲೈ 4ರಂದು ಐದು ಸದಸ್ಯರ ಸಂವಿಧಾನ ಪೀಠ ನೀಡಿದ್ದ ತೀರ್ಪನ್ನು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

ದಿಲ್ಲಿಯ ಸಾಂವಿಧಾನಿಕ ವ್ಯವಸ್ಥೆಯು ಆಡಳಿತದಲ್ಲಿ ಅವ್ಯವಸ್ಥೆ ಉಂಟಾಗಲು ಪ್ರಮುಖ ಕಾರಣವಾಗಿದೆ. ಇದರ ಫಲವಾಗಿ ವಾಯು ಮಾಲಿನ್ಯ, ಟ್ರಾಫಿಕ್ ಜಾಮ್, ಚರಂಡಿ ಸಮಸ್ಯೆ, ಅನಧಿಕೃತ ಕಟ್ಟಗಳು ಮುಂತಾದ ಸಮಸ್ಯೆಗಳು ತಲೆದೋರಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ದಿಲ್ಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡುವುದರಿಂದ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಅರ್ಜಿದಾರರು ತಿಳಿಸಿದ್ದರು.

 ದಿಲ್ಲಿಯಲ್ಲಿ ಸಾರ್ವಜನಿಕ ವ್ಯವಸ್ಥೆ, ಪೊಲೀಸ್ ಮತ್ತು ಜಮೀನು ಈ ಮೂರು ವಿಷಯಗಳ ಹೊರತಾಗಿ ಉಳಿದೆಲ್ಲ ವಿಷಯಗಳಲ್ಲಿ ಶಾಸನ ನಡೆಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ದಿಲ್ಲಿ ಸರಕಾರ ಹೊಂದಿದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಈ ವಿಷಯದಲ್ಲಿ ರಾಜ್ಯಪಾಲರು ಏಕಾಂಗಿಯಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ. ಅವರು ಕೇಂದ್ರ ಸರಕಾರದ ಸಲಹೆ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News