ಕೇರಳದಲ್ಲಿ ಹೈ ಅಲರ್ಟ್: ಇಡುಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ

Update: 2018-10-05 15:53 GMT

ಹೊಸದಿಲ್ಲಿ, ಅ. 5: ತಮಿಳುನಾಡು ಹಾಗೂ ಸಮೀಪದ ಪುದುಚೇರಿಯಲ್ಲಿ ಎರಡನೇ ದಿನವಾದ ಶುಕ್ರವಾರ ಕೂಡ ಮಳೆ ಸುರಿಯುತ್ತಿರುವುದು ಮುಂದುವರಿದಿದೆ. ಅರೇಬಿಯನ್ ಸಮುದ್ರದಲ್ಲಿ ನಿಮ್ನ ಒತ್ತಡದ ಹಿನ್ನೆಲೆಯಲ್ಲಿ ಕೇರಳದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಕೇರಳದಲ್ಲಿ ಇಡುಕ್ಕಿ ಅಣೆಕಟ್ಟು ಸೇರಿದಂತೆ ಹಲವು ಅಣೆಕಟ್ಟುಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಡುಕ್ಕಿ ಚೆರುಥೋನಿ ಅಣೆಕಟ್ಟಿನ ಒಂದು ಬಾಗಿಲನ್ನು ಶುಕ್ರವಾರ ಸಂಜೆ 4 ಗಂಟೆಗೆ ತೆರೆಯಲಾಗಿದೆ. ಗುರುವಾರ ರಾತ್ರಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದುದರಿಂದ 50 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ರವಿವಾರ ಭಾರೀ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಇಡುಕ್ಕಿ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ. ಪುದುಚೇರಿಯಲ್ಲಿ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಇಲ್ಲಿ 9.5 ಸಿ.ಎಂ. ಮಳೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News