ಭೀಮಾ ಕೋರೆಗಾಂವ್ ಪ್ರಕರಣ: ಮಾನವ ಹಕ್ಕುಗಳ ಸಮರ್ಥಕರನ್ನು ಅಪರಾಧಿ ಮಾಡಬೇಡಿ

Update: 2018-10-05 17:31 GMT

ಹೊಸದಿಲ್ಲಿ, ಅ. 5: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿರುವ ಬಗ್ಗೆ ಶುಕ್ರವಾರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ತಜ್ಞರು, ಮಾನವ ಹಕ್ಕು ಹೋರಾಟಗಾರರ ಪ್ರಕರಣಗಳನ್ನು ‘ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ತ್ವರಿತ ವಿಚಾರಣೆ ನಡೆಸಲಾಗುವುದು’ ಎಂದು ಭಾರತ ಭರವಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

 ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಜೂನ್‌ನಿಂದ 10 ಮಂದಿ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲಾಗಿತ್ತು. ಇವರಲ್ಲಿ ಐವರು ಕಾರಾಗೃಹದಲ್ಲಿ, ನಾಲ್ವರು ಗೃಹ ಬಂಧನದಲ್ಲಿ ಇದ್ದಾರೆ. ಒಬ್ಬರನ್ನು ಬಿಡುಗಡೆ ಮಾಡಲಾಗಿದೆ. ಕಾನೂನಿನಲ್ಲಿ ‘ಕಾನೂನು ಬಾಹಿರ ಚಟುವಟಿಕೆಗಳು’ ಹಾಗೂ ‘ಉಗ್ರ ಸಂಘಟನೆಗಳ ಸದಸ್ಯತ್ವ’ವನ್ನು ಅಸ್ಪಷ್ಟವಾಗಿ ವ್ಯಾಖ್ಯಾನಿಸುವುದಾದರೆ, ರಾಜ್ಯ ಏಜೆನ್ಸಿಗಳಿಗೆ ನೀಡುವ ವಿವೇಚನೆಯ ಅಧಿಕಾರ ನ್ಯಾಯಾಂಗ ದೃಷ್ಟಿಕೋನವನ್ನು ದುರ್ಬಲಗೊಳಿಸುತ್ತದೆ ಹಾಗೂ ಪೌರ ಸ್ವಾತಂತ್ರವನ್ನು ಕಡಿತಗೊಳಿಸುತ್ತದೆ ಎಂದು ಮಾನವ ಹಕ್ಕುಗಳ ತಜ್ಞರು ಹೇಳಿದ್ದಾರೆ.

ಜನವರಿ 1ರಂದು ಪುಣೆಯ ಸಮೀಪದ ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆಯ ಭಾಗವಾಗಿ ಜೂನ್ 6ರಂದು ಮಾನವ ಹಕ್ಕು ಹೋರಾಟಗಾರರಾದ ಸೋಮ ಸೇನ್, ಸುರೇಂದ್ರ ಗಾಡ್ಲಿಂಗ್, ಮಹೇಶ್ ರಾವತ್, ರೋನಾ ವಿಲ್ಸನ್ ಹಾಗೂ ಸುಧೀರ್ ಧವಾನೆ ಅವರನ್ನು ಪೊಲೀಸರು ಪುಣೆಯಿಂದ ಬಂಧಿಸಿದ್ದರು. ಆಗಸ್ಟ್ 28ರಂದು ಪೊಲೀಸರು ಮಾನವ ಹಕ್ಕು ಹೋರಾಟಗಾರರಾದ ಸುಧಾ ಭಾರದ್ವಾಜ್, ಗೌತಮ್ ನವ್ಲಾಖಾ, ವೆರ್ನನ್ ಗೊನ್ಸಾಲ್ವೆಸ್, ಅರುಣ್ ಫಿರೇರಾ ಹಾಗೂ ವರವರ ರಾವ್ ಅವರನ್ನು ಬಂಧಿಸಿದ್ದರು. ನವ್ಲಾಖಾ ಅವರನ್ನು ವಶಕ್ಕೆ ತೆಗೆದುಕೊಂಡಿರುವುದು ಅಸಮರ್ಥನೀಯ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಹೇಳಿತ್ತು. ಅನಂತರ ಅವರ ಗೃಹ ಬಂಧನ ಅಂತ್ಯಗೊಂಡಿತ್ತು.

ಆದರೆ, ಈ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಭಾರತದ ದಲಿತರು, ಬಡವರು, ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಸಮರ್ಥಿಸಿಕೊಳ್ಳುವ ಮಾನವ ಹಕ್ಕುಗಳ ಹೋರಾಟಗಾರರ ಮೌನವನ್ನೇ ಬಳಸಿಕೊಂಡು ಭೀಮಾ ಕೋರೆಗಾಂವ್ ಸ್ಮರಣ ದಿನಾಚರಣೆಯೊಂದಿಗೆ ಸಂಬಂಧ ಹೊಂದಿರುವುದಕ್ಕಾಗಿ ಭಯೋತ್ಪಾದನೆ ಆರೋಪ ಹೊರಿಸಿರುವುದು ನಮಗೆ ಕಳವಳ ಉಂಟು ಮಾಡಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧ ಆರೋಪ ಹಾಗೂ 9 ಮಂದಿಯನ್ನು ವಶದಲ್ಲಿ ಇರಿಸಿರುವುದು ನಮಗೆ ಆತಂಕ ಉಂಟು ಮಾಡಿದೆ. ಅಂಚಿಗೆ ತಳ್ಳಲ್ಪಟ್ಟ, ಅಲ್ಪಸಂಖ್ಯಾತ, ರಾಜಕೀಯ ಕೈದಿ, ಮಹಿಳೆಯರು ಸೇರಿದಂತೆ ಹಲವರ ಮಾನವ ಹಕ್ಕುಗಳನ್ನು ಶಾಂತಿಯುತವಾಗಿ ಸಮರ್ಥಿಸಿಕೊಳ್ಳುವುದರಲ್ಲಿ ಇವರೆಲ್ಲರೂ ಸಕ್ರಿಯರಾಗಿದ್ದಾರೆ. ಆದುದರಿಂದ ಇವರ ಬಂಧನ ಮಾನವ ಹಕ್ಕು ಹೋರಾಟದೊಂದಿಗೆ ನೇರ ಸಂಬಂಧ ಇದೆ ಎಂದು ತಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News