​ಪತ್ನಿ ಹತ್ಯೆ ಆರೋಪ: ಟಿವಿ ಮಾಜಿ ನಿರೂಪಕ ಇಲ್ಯಾಸಿ ದೋಷಮುಕ್ತ

Update: 2018-10-06 04:33 GMT

ಹೊಸದಿಲ್ಲಿ, ಅ.6: ಖ್ಯಾತ ಟಿವಿ ನಿರೂಪಕ ಸುಹೈಬ್ ಇಲ್ಯಾಸಿ ಅವರಿಗೆ ಪತ್ನಿಯ ಹತ್ಯೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿದ ಹತ್ತೇ ತಿಂಗಳಲ್ಲಿ, ಅವರನ್ನು ದೋಷಮುಕ್ತಗೊಳಿಸಿ, ದಿಲ್ಲಿ ಹೈಕೋರ್ಟ್ ತೀರ್ಪು ನೀಡಿದೆ.

ವಿಚಾರಣಾ ನ್ಯಾಯಾಲಯ, ಶಂಕೆ ಮತ್ತು ಕಲ್ಪನೆಯ ಆಧಾರದಲ್ಲಿ ಇಲ್ಯಾಸಿಗೆ ಶಿಕ್ಷೆ ವಿಧಿಸಲಾಗಿದೆಯೇ ವಿನಃ ಸೂಕ್ತ ಪುರಾವೆಯ ಆಧಾರದಲ್ಲಿ ಶಿಕ್ಷೆ ವಿಧಿಸಿಲ್ಲ ಎಂದು ಕೆಳ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ತಳ್ಳಿಹಾಕಿದೆ.

ವಿಚಾರಣಾ ನ್ಯಾಯಾಲಯವು ಇಲ್ಯಾಸಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಹೈಕೋರ್ಟ್, ವೈದ್ಯಕೀಯ ಪುರಾವೆ ಮತ್ತು ಸಾಕ್ಷಿಗಳನ್ನು ಪರಿಗಣಿಸಿ, ಖುಲಾಸೆಗೊಳಿಸುವ ನಿರ್ಧಾರಕ್ಕೆ ಬಂದಿದೆ. ಇಲ್ಯಾಸಿಯ ಪತ್ನಿ ಅಂಜು 2000ನೇ ಇಸವಿಯ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್.ಮುರಳೀಧರ್ ಮತ್ತು ವಿನೋದ್ ಗೋಯಲ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ. ವಿಚಾರಣಾ ನ್ಯಾಯಾಲಯ, ಇಲ್ಯಾಸಿ ಪತ್ನಿಯ ಕುಟುಂಬದ ಸದಸ್ಯರು ನೀಡಿದ ಸಾಕ್ಷ್ಯವನ್ನು ನಂಬದೇ ದೌರ್ಜನ್ಯ ಮತ್ತು ವರದಕ್ಷಿಣೆ ಸಾವು ಪ್ರಕರಣದಿಂದ ಆರೋಪಿಯನ್ನು ಮುಕ್ತಗೊಳಿಸಿತ್ತು. ಇದನ್ನು ಸರ್ಕಾರ ಪ್ರಶ್ನಿಸುವಂತಿಲ್ಲ ಎಂದೂ ವಿಚಾರಣಾ ನ್ಯಾಯಾಲಯ ಹೇಳಿದ್ದನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

"ವೈದ್ಯಕೀಯ ಮತ್ತು ವಿಧಿವಿಜ್ಞಾನ ವಿಭಾಗದ ಪುರಾವೆಗಳಿಂದ ತಿಳಿದುಬರುವಂತೆ ಅಡುಗೆಮನೆಯ ಚಾಕು ಇರಿತದಿಂದ ಆದ ಗಾಯದಿಂದ ಸಾವು ಸಂಭವಿಸಿದೆ. ಆ ಚಾಕು ಮನೆಯಲ್ಲಿ ಪತ್ತೆಯಾಗಿತ್ತು. ಘಟನೆಗೆ ಎರಡು ಗಂಟೆ ಮುನ್ನ ಆಕೆ ಲವಲವಿಕೆಯಿಂದ ಇದ್ದಳು ಎಂಬ ಏಕೈಕ ಕಾರಣದಿಂದ, ಇಲ್ಯಾಸಿ ಜತೆ ಜಗಳವಾಡಿ ಆಕೆ ಸ್ವತಃ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಲಾರಳು ಎಂಬ ತೀರ್ಮಾನಕ್ಕೆ ಬರುವಂತಿಲ್ಲ" ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇಲ್ಯಾಸಿಗೆ 2017ರ ಡಿಸೆಂಬರ್ 20ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2000ನೇ ಇಸವಿಯ ಜನವರಿ 10ರಂದು 29 ವರ್ಷದ ಅಂಜು ಇಲ್ಯಾಸಿಯನ್ನು ಚೂರಿ ಇರಿತದ ಗಾಯಕ್ಕಾಗಿ ಪೂರ್ವ ದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವವಾಗಿದ್ದ ಆಕೆ ಮೃತಪಟ್ಟಿದ್ದಳು. ಮಾತಿನ ಚಕಮಕಿ ಬಳಿಕ ಅಕೆ ತನಗೆ ತಾನೇ ಚಾಕುವಿನಿಂದ ಚುಚ್ಚಿಕೊಂಡಿದ್ದಳು ಎಂದು ಇಲ್ಯಾಸಿ ಪೊಲೀಸರಿಗೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News