ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಇಂದು ಪ್ರಕಟ

Update: 2018-10-06 14:08 GMT

ಹೊಸದಿಲ್ಲಿ,ಅ.6: 2019ರ ಲೋಕಸಭಾ ಚುನಾವಣೆಗಳ ದಿಕ್ಸೂಚಿ ಎಂದೇ ನಿರೀಕ್ಷಿಸಲಾಗಿರುವ ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಛತ್ತೀಸ್‌ಗಡ ಮತ್ತು ಮಿಝೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಡಿ.15ಕ್ಕೆ ಮುನ್ನ ಏಕಕಾಲದಲ್ಲಿ ನಡೆಯಲಿವೆ ಎಂದು ಚುನಾವಣಾ ಆಯೋಗವು ಶನಿವಾರ ಪ್ರಕಟಿಸಿದೆ. ಎಲ್ಲ ಐದೂ ರಾಜ್ಯಗಳಲ್ಲಿ ಡಿ.11ರಂದು ಏಕಕಾಲದಲ್ಲಿ ಮತಎಣಿಕೆ ನಡೆಯಲಿದೆ.

ಕರ್ನಾಟಕದ ಶಿವಮೊಗ್ಗ,ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನ.3ರಂದು ನಡೆಸಲಾಗುವುದು ಎಂದೂ ರಾವತ್ ತಿಳಿಸಿದರು.

 ಛತ್ತೀಸ್‌ಗಡದಲ್ಲಿ ಮೊದಲ ಹಂತದ ಮತದಾನ ನ.12ರಂದು ಮತ್ತು ಎರಡನೇ ಹಂತದ ಮತದಾನ ನ.20ರಂದು ನಡೆಯಲಿವೆ. ಮಧ್ಯಪ್ರದೇಶ ಮತ್ತು ಮಿಝೋರಾಂ ವಿಧಾನಸಭೆಗಳಿಗೆ ನ.28ರಂದು ಹಾಗೂ ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಡಿ.7ರಂದು ಮತದಾನ ನಡೆಯಲಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಎಲ್ಲ ಐದೂ ರಾಜ್ಯಗಳಲ್ಲಿ ಶನಿವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

ಚುನಾವಣೆಗಳು ನಡೆಯಲಿರುವ ಐದು ರಾಜ್ಯಗಳ ಪೈಕಿ ಮಿರೆರಾಂ ಕಾಂಗ್ರೆಸ್ ಆಡಳಿತದಲ್ಲಿದ್ದರೆ,ಮಧ್ಯಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್‌ಗಡಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ತೆಲಂಗಾಣದಲ್ಲಿ ಕಳೆದ ತಿಂಗಳು ವಿಧಾನಸಭೆ ವಿಸರ್ಜನೆಗೆ ಮುನ್ನ ಟಿಆರ್‌ಎಸ್ ಅಧಿಕಾರದಲ್ಲಿತ್ತು.ಲೋಕಸಭೆಯೊಂದಿಗೆ ರಾಜ್ಯವಿಧಾನಸಭಾ ಚುನಾವಣೆಯೂ ನಡೆಯುವುದನ್ನು ತಪ್ಪಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ ಅವರು ವಿಸರ್ಜನೆಯ ನಿರ್ಧಾರವನ್ನು ಕೈಗೊಂಡಿದ್ದರು.

50 ಸದಸ್ಯಬಲದ ಮಿಝೋರಾಂ ವಿಧಾನಸಭೆಯ ಅವಧಿ ಡಿ.15ರಂದು ಅಂತ್ಯಗೊಳ್ಳಲಿದೆ. 90 ಸದಸ್ಯಬಲದ ಛತ್ತೀಸ್‌ಗಡ ವಿಧಾನಸಭೆಯ ಅವಧಿ ಮುಂದಿನ ವರ್ಷದ ಜ.5ರಂದು ಮತ್ತು 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯ ಅವಧಿ ಜ.7ರಂದು ಅಂತ್ಯಗೊಳ್ಳಲಿವೆ. 200 ಸ್ಥಾನಗಳಿರುವ ರಾಜಸ್ಥಾನ ವಿಧಾನಸಭೆಯ ಅವಧಿ ಜ.20ರಂದು ಪೂರ್ಣಗೊಳ್ಳಲಿದೆ.

ಚುನಾವಣೆಗಳಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಯಂತ್ರಗಳು ಇತ್ತೀಚಿನ ಮಾರ್ಕ್ 3 ಮಾದರಿಯದಾಗಿದ್ದು,ಬಿಇಎಲ್ ಇವುಗಳನ್ನು ತಯಾರಿಸಿದೆ. ವಾಸ್ತವ ಚುನಾವಣೆಗೆ ಮುನ್ನ ಅಣಕು ಮತದಾನಗಳನ್ನೂ ನಡೆಸಲಾಗುವುದು ಎಂದು ರಾವತ್ ತಿಳಿಸಿದರು.

ಮಧ್ಯಪ್ರದೇಶದಲ್ಲಿ ನಕಲಿ ಗುರುತಿನ ಚೀಟಿಗಳ ಬಳಕೆಯ ಕುರಿತು ಯಾವುದೇ ದೂರು ಚುನಾವಣಾ ಆಯೋಗಕ್ಕೆ ಬಂದಿಲ್ಲ ಎಂದು ತಿಳಿಸಿದ ಅವರು,ಅಂತಹ ಯಾವುದೇ ದೂರು ಬಂದರೆ ಆಯೋಗವು ಕ್ರಮವನ್ನು ಕೈಗೊಳ್ಳಲಿದೆ ಮತ್ತು ಎಫ್‌ಐಆರ್‌ನ್ನು ದಾಖಲಿಸಲಾಗುವುದು ಎಂದರು. ನಕಲಿ ಗುರುತಿನ ಚೀಟಿಯಿಂದ ಯಾರೇನೂ ಮಾಡಲು ಸಾಧ್ಯವಿಲ್ಲ,ಗುರುತಿಗಾಗಿ ಅದನ್ನು ಪ್ರತಿಯೊಂದು ಹಂತದಲ್ಲಿಯೂ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.

ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮತದಾರರ ಪಟ್ಟಿಗಳಲ್ಲಿ ವ್ಯಾಪಕ ನಕಲಿ ಮತದಾರರಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಸಿ-ವೋಟರ್ ಮತ್ತು ಎಬಿಪಿ ನ್ಯೂಸ್‌ ನಡೆಸಿದ್ದ ಸಮೀಕ್ಷೆಯು ಎಲ್ಲ ಮೂರೂ ರಾಜ್ಯಗಳಲ್ಲಿ ಬಿಜೆಪಿ ಸೋಲಲಿದೆ ಎಂದು ಬೆಟ್ಟು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News