ನೀವೂ ‘ಐರನ್ ಮ್ಯಾನ್’ನಂತೆ ಹಾರಬೇಕೇ ? ಹಾಗಿದ್ದರೆ ಈ ಸೂಟ್ ಖರೀದಿಸಿ

Update: 2018-10-06 11:10 GMT

ಕಾರು,ಬೈಕ್ ಮತ್ತು ಬೋಟ್‌ಗಳನ್ನು ಮರೆತುಬಿಡಿ,ಏಕೆಂದರೆ ಮುಂದಿನ ವರ್ಷ ‘ಐರನ್ ಮ್ಯಾನ್’ ಶೈಲಿಯ ಜೆಟ್ ಸೂಟ್‌ಗಳು ರೇಸ್‌ನಲ್ಲಿ ಬಳಕೆಯಾಗಲಿರುವ ನೂತನ ವಾಹನಗಳಾಗಲಿವೆ.

ಹೌದು,ಬ್ರಿಟನ್‌ನ ರಿಚರ್ಡ್ ಬ್ರೌನಿಂಗ್ ಅವರು ಜೆಟ್ ಇಂಜಿನ್‌ನ ಶಕ್ತಿಯಿಂದ ಕಾರ್ಯ ನಿರ್ವಹಿಸುವ ಈ ಸೂಟ್‌ನ್ನು ಸೃಷ್ಟಿಸಿದ್ದಾರೆ. ಮುಂದಿನ ವರ್ಷ ಈ ಸೂಟ್‌ಗಳನ್ನು ಧರಿಸಿ ನೀರಿನ ಮೇಲ್ಗಡೆ ಹಾರಾಡುವ ನೂತನ ರೇಸ್ ಸರಣಿಗಳನ್ನು ಅವರು ಆರಂಭಿಸಲಿದ್ದಾರೆ. ವಿವಿಧ ಕ್ರೀಡಾ ಹಿನ್ನೆಲೆಗಳ ಪುರುಷರು ಮತ್ತು ಮಹಿಳೆಯರು ಈ ರೇಸ್‌ನಲ್ಲಿ ಭಾಗವಹಿಸಲಿದ್ದಾರೆ.

1,000 ಅಶ್ವಶಕ್ತಿಯ ಜೆಟ್ ಸೂಟ್‌ಗಳೊಂದಿಗೆ ಮೂರು ಆಯಾಮಗಳಲ್ಲಿ ನಡೆಯಲಿರುವ ಈ ರೇಸ್ ಅದ್ಭುತ ಮತ್ತು ಅಭೂತಪೂರ್ವವಾಗಿರಲಿದೆ ಎಂದು ಬ್ರೌನಿಂಗ್ ಭವಿಷ್ಯ ನುಡಿದಿದ್ದಾರೆ.

 ಪ್ರತಿ ಗಂಟೆಗೆ 32 ಮೈಲು(51 ಕಿ.ಮೀ.)ಗಳ ದಾಖಲೆಯ ವೇಗವನ್ನು ಹೊಂದಿರುವ ಈ ಸೂಟ್ ಐದು ಮಿನಿ ಜೆಟ್ ಇಂಜಿನ್‌ಗಳನ್ನು ಹೊಂದಿದ್ದು,ಅವುಗಳನ್ನು ಪೈಲಟ್‌ನ ತೋಳುಗಳು ಮತ್ತು ಬೆನ್ನಿಗೇರಿಸಲಾಗುತ್ತದೆ. ಇದು ‘ಐರನ್ ಮ್ಯಾನ್’ ಸಿನೆಮಾದಲ್ಲಿ ನಟ ರಾಬರ್ಟ್ ಡಾನೀ ಜ್ಯೂನಿಯರ್ ಆಗಸದಲ್ಲಿ ಹಾರಾಡುವಾಗ ಧರಿಸಿದ್ದ ಸೂಟ್‌ನ್ನು ನೆನಪಿಸುತ್ತದೆ.

 ಮಾಜಿ ವ್ಯಾಪಾರಿ ಬ್ರೌನಿಂಗ್ ಮೂರು ವರ್ಷಗಳ ಹಿಂದೆ ಗೆಳೆಯರೊಂದಿಗೆ ಸೇರಿಕೊಂಡು ತನ್ನ ಗ್ಯಾರೇಜ್‌ನಲ್ಲಿ ಈ ಸೂಟ್‌ನ್ನು ಅಭಿವೃದ್ಧಿಗೊಳಿಸಿದ್ದರು. ಇದೀಗ ಪರಿಪೂರ್ಣ ಜೆಟ್ ಸೂಟ್‌ನ್ನು ಲಂಡನ್‌ನ ಡಿಪಾರ್ಟ್‌ಮೆಂಟಲ್ ಸ್ಟೋರ್‌ವೊಂದರಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಕೇವಲ 3,40,000 ಪೌಂಡ್ (ಸುಮಾರು 3,30,39,000 ರೂ.) ಇದರ ಬೆಲೆಯಾಗಿದೆ !

ಬ್ರೌನಿಂಗ್ ಕಳೆದ ವರ್ಷ ಶರೀರ ನಿಯಂತ್ರಿತ ಜೆಟ್ ಇಂಜಿನ್ ಪವರ್ ಸೂಟ್‌ನಲ್ಲಿ ಅತ್ಯಧಿಕ ವೇಗಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ರೀಡಿಂಗ್‌ನ ಲಗೂನಾ ಪಾರ್ಕ್‌ನಲ್ಲಿ ಸೂಟ್ ಧರಿಸಿ ಗಾಳಿಯಲ್ಲಿ ಹಾರಾಡಿದ್ದ ಅವರು ಪ್ರತಿ ಗಂಟೆಗೆ 32.02 ಮೈಲುಗಳ ವೇಗವನ್ನು ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News