‘‘ಅಂದು ಮೋದಿ ವಾಹನ ಕಳುಹಿಸಲು ತಡಮಾಡಿದ್ದರಿಂದ ನೂರಾರು ಜೀವಗಳು ಬಲಿಯಾದವು’’

Update: 2018-10-06 18:37 GMT

‘‘ಫೆಬ್ರವರಿ 28 ಮತ್ತು ಮಾರ್ಚ್ 1ರ ನಡುವಿನ ರಾತ್ರಿ ಅತ್ಯಂತ ಮಹತ್ವದ್ದಾಗಿತ್ತು. ಯಾಕೆಂದರೆ ಈ ಅವಧಿಯಲ್ಲೇ ಅತೀಹೆಚ್ಚು ನಷ್ಟ ಉಂಟಾಗಿತ್ತು. ಮೊದಲ ರಾತ್ರಿ 2 ಗಂಟೆಗೆ ನಾನು ಮುಖ್ಯಮಂತ್ರಿಯನ್ನು ಭೇಟಿ ಯಾದೆ. ಮಾರ್ಚ್ ಒಂದರಂದು ಇಡೀ ದಿನ ನಮ್ಮ ತಂಡ ಏರ್‌ಫೀಲ್ಡ್‌ನಲ್ಲೇ ಕಳೆಯಿತು ಮತ್ತು ಮಾರ್ಚ್ 2ರಂದು ನಮಗೆ ವಾಹನದ ಸೌಲಭ್ಯ ಕಲ್ಪಿಸಲಾಯಿತು. ಆ ವೇಳೆಗಾಗಲೇ ನಡೆಯುವುದೆಲ್ಲ ನಡೆದು ಹೋಗಿತ್ತು’’ ಎಂದು ಶಾ ನೆನಪಿಸುತ್ತಾರೆ.

ಫೆಬ್ರವರಿ 28 ಮತ್ತು ಮಾರ್ಚ್ 1ರ ನಡುವಿನ ರಾತ್ರಿ ಗುಜರಾತ್ ಹಿಂಸಾಚಾರದ ಬೆಂಕಿಯಲ್ಲಿ ಬೇಯುತ್ತಿದ್ದ ಮಧ್ಯೆಯೇ ಲೆ. ಜನರಲ್ ಝಮೀರುದ್ದೀನ್ ಶಾ ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಅಂದಿನ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಸಮ್ಮುಖದಲ್ಲಿ ರಾತ್ರಿ 2 ಗಂಟೆಯ ಸುಮಾರಿಗೆ ಅಹಮದಾಬಾದ್‌ನಲ್ಲಿ ಭೇಟಿಯಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಸೇನೆಯನ್ನು ಕರೆತರುವ ಸಲುವಾಗಿ ತುರ್ತು ಅಗತ್ಯವಿರುವ ಸ್ತುಗಳ ಪಟ್ಟಿಯನ್ನು ನೀಡಿದ್ದರು.
ಆದರೆ ಮಾರ್ಚ್ 1ರಂದು ಮುಂಜಾನೆ 7 ಗಂಟೆಗೆ ಅಹಮದಾಬಾದ್‌ನಲ್ಲಿ ಇಳಿದ 3,000 ಯೋಧರು, ಗುಜರಾತ್ ಆಡಳಿತ ವಾಹನ ಕಳುಹಿಸಲು ತಡಮಾಡಿದ ಕಾರಣ, ಒಂದು ದಿನ ಕಾಯಬೇಕಾಯಿತು. ಈ ಸಮಯದಲ್ಲಿ ನೂರಾರು ಜೀವಗಳು ಬಲಿಯಾಗಿದ್ದವು.
‘‘ನಾವು ಅತ್ಯಂತ ಮಹತ್ವದ ಸಮಯವನ್ನು ಕಳೆದುಕೊಂಡಿದ್ದೆವು’ ಎಂದು ಶಾ ತಮ್ಮ ಜೀವನ ಚರಿತ್ರೆ ಪುಸ್ತಕ ‘ದ ಸರಕಾರಿ ಮುಸಲ್ಮಾನ್’ ನಲ್ಲಿ ಬರೆದುಕೊಂಡಿದ್ದಾರೆ. ಈ ಪುಸ್ತಕವನ್ನು ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಅಕ್ಟೋಬರ್ 13ರಂದು ಮಾಜಿ ಉಪರಾಷ್ಟ್ರಪತಿ ಹಾವಿುದ್ ಅನ್ಸಾರಿ ಬಿಡುಗಡೆ ಮಾಡಲಿದ್ದಾರೆ.

ಸೇನೆಯನ್ನು ನಿಯೋಜನೆಗೊಳಿಸಬೇಕೆಂದು ಗುಜರಾತ್ ಸರಕಾರ 2002ರ ಫೆಬ್ರವರಿ 28ರಂದು ಕೇಂದ್ರ ಗೃಹ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ಮೂಲಕ ಸೇನೆಗೆ ಮನವಿ ಮಾಡಿತ್ತು. ಅಂದಿನ ಸೇನಾ ಮುಖ್ಯಸ್ಥ ಜನರಲ್ ಎಸ್. ಪದ್ಮನಾಭನ್ ಕೂಡಲೇ ಸ್ಪಂದಿಸಿ, ‘‘ಝೂಮ್, ನಿಮ್ಮ ತಂಡದೊಂದಿಗೆ ಗುಜರಾತ್‌ಗೆ ತೆರಳಿ ಮತ್ತು ದಂಗೆಗಳನ್ನು ನಿಲ್ಲಿಸಿ’’ ಎಂದು ಆದೇಶಿಸಿದರು. ಅದಕ್ಕುತ್ತರಿಸಿದ ನಾನು, ‘‘ರಸ್ತೆಯಿಂದ ಹೋಗುವುದಾದರೆ ಎರಡು ದಿನಗಳು ಬೇಕಾಗುತ್ತದೆ’’ ಎಂದು ತಿಳಿಸಿದೆ. ಆಗ ಅವರು, ಜೋಧ್‌ಪುರದಿಂದ ಮುಂದಕ್ಕೆ ನಿಮ್ಮ ಪ್ರಯಾಣವನ್ನು ವಾಯುಪಡೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದ್ದರು. ಆದಷ್ಟು ಹೆಚ್ಚು ಯೋಧರನ್ನು ಕೊಂಡೊಯ್ಯಿರಿ. ವೇಗ ಮತ್ತು ದೃಢನಿಶ್ಚಯದ ಕ್ರಮ ಈ ಸಮಯದ ಅವಶ್ಯಕತೆಯಾಗಿದೆ ಎಂದು ಅವರು ನಮ್ಮನ್ನು ಹುರಿದುಂಬಿಸಿದ್ದರು ಎಂದು ಶಾ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.
ನಿರ್ಜನ, ಕತ್ತಲೆಯ ಅಹಮದಾಬಾದ್ ಏರ್‌ಫೀಲ್ಡ್‌ಗೆ ಆಗಮಿಸಿ ನಾವು ಕೇಳಿದ ವಾಹನಗಳು ಮತ್ತು ಇತರ ವಸ್ತುಗಳು ಎಲ್ಲಿ ಎಂದು ನಾನು ವಿಚಾರಿಸಿದೆ. ಆಗ ನಮಗೆ ಸಿಕ್ಕ ಉತ್ತರ, ರಾಜ್ಯ ಸರಕಾರ ಇನ್ನೂ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ ಎನ್ನುವುದು.
ಫೆಬ್ರವರಿ 28 ಮತ್ತು ಮಾರ್ಚ್1ರ ನಡುವಿನ ರಾತ್ರಿ ಅತ್ಯಂತ ಮಹತ್ವದ್ದಾಗಿತ್ತು. ಯಾಕೆಂದರೆ ಈ ಅವಧಿಯಲ್ಲೇ ಅತೀಹೆಚ್ಚು ನಷ್ಟ ಉಂಟಾಗಿತ್ತು. ಮೊದಲ ರಾತ್ರಿ 2 ಗಂಟೆಗೆ ನಾನು ಮುಖ್ಯಮಂತ್ರಿಯನ್ನು ಭೇಟಿಯಾದೆ. ಮಾರ್ಚ್ ಒಂದರಂದು ಇಡೀ ದಿನ ನಮ್ಮ ತಂಡ ಏರ್‌ಫೀಲ್ಡ್‌ನಲ್ಲೇ ಕಳೆಯಿತು ಮತ್ತು ಮಾರ್ಚ್ 2ರಂದು ನಮಗೆ ವಾಹನದ ಸೌಲಭ್ಯ ಕಲ್ಪಿಸಲಾಯಿತು. ಆ ವೇಳೆಗಾಗಲೇ ನಡೆಯುವುದೆಲ್ಲ ನಡೆದು ಹೆಗಿತ್ತು ಎಂದು ಶಾ ನೆನಪಿಸುತ್ತಾರೆ.
ಸಶಸ್ತ್ರ ಪಡೆಯಲ್ಲಿ ಸಲ್ಲಿಸಿದ ಸೇವೆಗಾಗಿ ಶಾರನ್ನು ಪರಮ ವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕ ಮತ್ತು ಸೇನಾ ಪದಕ ನೀಡಿ ಗೌರವಿಸಲಾಗಿದೆ.
‘‘ಸೇನೆಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿದ್ದರೆ ಮತ್ತು ನೀವು ವೈಯಕ್ತಿಕವಾಗಿ ಕೇಳಿದ್ದ ವಸ್ತುಗಳನ್ನು ನೀಡಿದ್ದರೆ ನಷ್ಟವನ್ನು ಕಡಿಮೆಗೊಳಿಸಬಹುದಿತ್ತೇ?’’ ಎಂದು ಕೇಳಿದಾಗ, ಹೌದು ಎಂದು ಉತ್ತರಿಸಿದ ಶಾ, ‘‘ಖಂಡಿತವಾಗಿಯೂ, ಸರಿಯಾದ ಸಮಯದಲ್ಲಿ ನಮಗೆ ವಾಹನವನ್ನು ಒದಗಿಸಿದ್ದರೆ ನಷ್ಟದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿತ್ತು. ಪೊಲೀಸರು ಆರು ದಿನಗಳಲ್ಲಿ ಮಾಡಲಾಗದ್ದನ್ನು ನಾವು ಅವರಿಗಿಂತ ಸಾಕಷ್ಟು ಕಡಿಮೆ ಸಂಖ್ಯೆಯಲ್ಲಿದ್ದರೂ 48 ಗಂಟೆಗಳಲ್ಲೇ ಮಾಡಿ ತೋರಿಸಿದೆವು. ನಾವು ಮಾರ್ಚ್ 4ರಂದು 48 ಗಂಟೆಗಳ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದೆವು. ಆದರೆ, ಅಂದು ಅತ್ಯಂತ ಮಹತ್ವಪೂರ್ಣ ಸಮಯವನ್ನು ಕಳೆದುಕೊಳ್ಳದೆ ಹೋಗಿದ್ದರೆ ಈ ಕಾರ್ಯಾಚರಣೆಯನ್ನು ಮಾರ್ಚ್ 2ರಂದೇ ಮುಗಿಸಬಹುದಿತ್ತು.’’
‘‘ನಾನು ನಿಖರವಾಗಿ ಯಾರನ್ನೂ ದೂರುತ್ತಿಲ್ಲ. ಸಾರಿಗೆ ವಾಹನದ ವ್ಯವಸ್ಥೆ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಇಂಥ ಪರಿಸ್ಥಿತಿಗಳಲ್ಲಿ ಅದನ್ನು ಸ್ವಲ್ಪ ವೇಗವಾಗಿ ಮಾಡಬೇಕಿತ್ತು’’ ಎಂದು ಶಾ ತಿಳಿಸಿದ್ದಾರೆ.
‘‘ಗುಂಪುಗಳು ರಸ್ತೆಗಳಿಗೆ ಮತ್ತು ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದರೆ ಪೊಲೀಸರು ಮೂಕ ಪ್ರೇಕ್ಷಕರಂತೆ ವೀಕ್ಷಿಸುತ್ತಿದ್ದರು. ಈ ವಿನಾಶವನ್ನು ತಡೆಯಲು ಅವರು ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿರಲಿಲ್ಲ’’ ಎನ್ನುತ್ತಾರೆ ಶಾ.
‘‘ಬಹುಸಂಖ್ಯಾತ ಸಮುದಾಯದ ಅನೇಕ ಶಾಸಕರು ಪೊಲೀಸ್ ಠಾಣೆಗಳಲ್ಲಿ ಕುಳಿತಿರುವುದನ್ನು ನಾನು ಕಂಡೆ. ಅಲ್ಲಿ ಅವರಿಗೆ ಮಾಡಲೇನೂ ಕೆಲಸವಿರಲಿಲ್ಲ. ನಾವು ಕರ್ಫ್ಯೂ ಹೇರಲು ಸೂಚಿಸುವಾಗಲೆಲ್ಲ ಅವರು ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಕರ್ಫ್ಯೂ ಹೇರುತ್ತಿರಲಿಲ್ಲ. ಹಾಗಾಗಿ ಅಲ್ಪಸಂಖ್ಯಾತರು ಯಾವಾಗಲೂ ಗಲಭೆಕೋರರಿಂದ ಸುತ್ತುವರಿದಿರುತ್ತಿದ್ದರು. ಅದು ಸಂಪೂರ್ಣ ಪಕ್ಷಪಾತಿ ನಿರ್ವಹಣೆಯಾಗಿತ್ತು’’ ಎಂದು ಮಾಜಿ ಸೇನಾ ಮುಖ್ಯಸ್ಥ ಅಭಿಪ್ರಾಯಿಸಿದ್ದಾರೆ.

ಈ ದಂಗೆಗೆ ರಾಜಕೀಯ ಸಂಬಂಧವಿರಬಹುದೇ ಎಂದು ಕೇಳಿದರೆ, ‘‘ನನಗೆ ಹಳೆಯ ಗಾಯಗಳನ್ನು ಕೆದಕಲು ಮನಸ್ಸಿಲ್ಲ’’ ಎಂದು ಶಾ ಹೇಳುತ್ತಾರೆ. ‘‘2002ರಲ್ಲಿ ಗುಜರಾತ್‌ನಲ್ಲಿ ನಿಜ ವಾಗಿ ಏನು ನಡೆದಿತ್ತು ಎಂಬುದನ್ನು ಹೇಳುವ ಉದ್ದೇಶವನ್ನು ನನ್ನ ಜೀವನ ಚರಿತ್ರೆ ೊಂದಿದೆ’’ ಎಂದು ಅವರು ತಿಳಿಸಿದ್ದಾರೆ.
‘‘ಇದನ್ನು ಮರೆಯಲು ಮೂರು ತಲೆಮಾರುಗಳೇ ಬೇಕಾಯಿತು. ಮರಳಿ ಆ ಗಾಯಗಳನ್ನು ಕೆದಕಲು ಬಯಸುವುದಿಲ್ಲ. ಪೊಲೀಸರ ಬಗ್ಗೆ ನಿಜಾಂಶವನ್ನು ನಾನು ಹೇಳಿದ್ದೇನೆ ಮತ್ತು ನಾನು ಬರೆದ ಪ್ರತಿಯೊಂದು ಶಬ್ದಗಳಿಗೂ ನಾನು ಬದ್ಧನಾಗಿದ್ದೇನೆ’’ ಎನ್ನುತ್ತಾರೆ ಶಾ.
2002ರ ಗುಜರಾತ್ ದಂಗೆಗಳಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು ಸಾವನ್ನಪ್ಪಿದ್ದಾರೆ. 223 ಮಂದಿ ನಾಪತ್ತೆಯಾಗಿದ್ದಾರೆ ಮತ್ತು 2,500 ಮಂದಿ ಗಾಯಗೊಂಡಿದ್ದಾರೆ ಎಂದು 2005ರಲ್ಲಿ ಸಂಸತ್‌ನಲ್ಲಿ ಸರಕಾರ ಹೇಳಿಕೆ ನೀಡಿತ್ತು. ಸಾವು ಮತ್ತು ನಷ್ಟದ ಅಧಿಕೃತ ಅಂಕಿಅಂಶಗಳಿಗೂ ಹಿಂಸಾಚಾರದಲ್ಲಿ ಸಂಭವಿಸಿದ ನಿಜವಾದ ಸಾವುಗಳು ಮತ್ತು ನಷ್ಟದ ಪ್ರಮಾಣಕ್ಕೂ ಅಗಾಧವಾದ ವ್ಯತ್ಯಾಸವಿದೆ ಎಂದು ಶಾ ತಿಳಿಸಿದ್ದಾರೆ.
ಸೇನಾಧಿಕಾರಿಯಾಗಿ ಮತ್ತು ಓರ್ವ ಭಾರತೀಯ ಮುಸ್ಲಿಮನಾಗಿ ತನ್ನ ವೈಯಕ್ತಿಕ ಅನುಭವವನ್ನೂ ಶಾ ತನ್ನ ಜೀವನ ಚರಿತ್ರೆಯಲ್ಲಿ ಬರೆದಿದ್ದಾರೆ. ಅವರ ಹೇಳಿಕೆಗಳನ್ನು ಜನರಲ್ ಎಸ್.ಪದ್ಮನಾಭನ್ ಸೇರಿದಂತೆ ಇಬ್ಬರು ಸೆೀನಾ ಮುಖ್ಯಸ್ಥರು ಅಂಗೀಕರಿಸಿದ್ದಾರೆ.
‘‘ನಾನು ಝೂಮ್ (ಲೆ.ಜ.ಝಮೀರುದ್ದೀನ್ ಶಾ) ತಂಡವನ್ನು ಗುಜರಾತ್‌ಗೆ ಕಳುಹಿಸಿದಾಗ ಎಲ್ಲರೂ ಚಕಿತಗೊಂಡಿದ್ದರು. ಕೆಲವು ಹಿರಿಯ ಅಧಿಕಾರಿಗಳು ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಸೇನಾ ನಿಯೋಜನೆ ಮತ್ತು ಅದರ ನಾಯಕನ ಆಯ್ಕೆಯು ಸೇನಾ ನಿರ್ಧಾರವಾಗಿದ್ದು ಅದರಲ್ಲಿ ಬಹಿರಂಗ ಚರ್ಚೆಗೆ ಅಸ್ಪದವಿಲ್ಲ ಎಂದು ನಾನು ಅವರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ. ಝೂಮ್ ನೇತೃತ್ವದ ಸೇನಾ ತಂಡ ಗುಜರಾತ್‌ಗೆ ತಲುಪಿತು. ಝೂಮ್‌ನ ಸಾಮರ್ಥ್ಯ, ನಿಷ್ಪಕ್ಷಪಾತ ಮತ್ತು ತುರ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ರಾಜ್ಯದಲ್ಲಿ ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲು ಸಾಧ್ಯವಾಯಿತು ಎಂದು ಜನರಲ್ ಪದ್ಮನಾಭನ್ ಈ ಪುಸ್ತಕದಲ್ಲಿ ಬರೆದಿದ್ದಾರೆ.

 

Writer - ♦ ವಿಸ್ಮಯ

contributor

Editor - ♦ ವಿಸ್ಮಯ

contributor

Similar News

ಜಗದಗಲ
ಜಗ ದಗಲ