ಅಕ್ರಮ ವಲಸಿಗರ ವಿಚಾರವನ್ನು ಭಾರತ ಎಂದೂ ಪ್ರಸ್ತಾಪಿಸಿಲ್ಲ: ಬಾಂಗ್ಲಾ ಪ್ರಧಾನಿಯ ಸಲಹೆಗಾರರ ಸ್ಪಷ್ಟನೆ

Update: 2018-10-07 07:01 GMT

ಹೊಸದಿಲ್ಲಿ, ಅ.7: "ನನ್ನ ಹತ್ತು ವರ್ಷದ ಅನುಭವದಲ್ಲಿ, ಅಕ್ರಮ ವಲಸಿಗರ ವಿಚಾರವನ್ನು ಭಾರತ ಎಂದೂ ನಮ್ಮ ಬಳಿ ಪ್ರಸ್ತಾಪ ಮಾಡಿಲ್ಲ" ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಸಲಹೆಗಾರರಾಗಿರುವ ಗೌಹಾರ್ ರಿಝ್ವಿ ಸ್ಪಷ್ಟಪಡಿಸಿದ್ದಾರೆ.

‘ಟಿವಿ ಟುಡೇ ನೆಟ್ ವರ್ಕ್’ನ ಸುದ್ದಿ ಸಂಪಾದಕ ರಾಹುಲ್ ಕನ್ವಲ್ ಜತೆ ನಡೆಸಿದ ಸಂವಾದದ ವೇಳೆ ಈ ಅಂಶವನ್ನು ಬಹಿರಂಗಪಡಿಸಿದ್ದಾರೆ. "ಇದು ಭಾರತದ ಆಂತರಿಕ ವಿಚಾರ. ತನಗೆ ಸರಿಯಾದದ್ದನ್ನು ಚರ್ಚಿಸುವುದು ಅವರ ಹಕ್ಕು" ಎಂದು ಅಭಿಪ್ರಾಯಪಟ್ಟಿದ್ದಾರೆ. ಬಾಂಗ್ಲಾದೇಶೀಯರು ಮತ್ತು ರೋಹಿಂಗ್ಯಾ ಮುಸ್ಲಿಮರನ್ನು "ಕೀಟಗಳು" ಎಂದು ಕರೆದು ಅವರನ್ನು ನಿರ್ಮೂಲನೆ ಮಾಡಬೇಕು ಎಂದು ಬಿಜೆಪಿ ಮುಖಂಡರೊಬ್ಬರು ನೀಡಿದ ಹೇಳಿಕೆ ಬಗ್ಗೆ ಗಮನ ಸೆಳೆದಾಗ, "ಅವರ ಪೌರತ್ವದ ದಾಖಲೆಗಳನ್ನು ನಿರೂಪಿಸಿದರೆ ಅವರನ್ನು ವಾಪಾಸು ಕರೆಸಿಕೊಳ್ಳಲು ಬಾಂಗ್ಲಾದೇಶ ಸಿದ್ಧವಿದೆ" ಎಂದು ಪ್ರತಿಕ್ರಿಯಿಸಿದರು.

ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವ ನಿಟ್ಟಿನಲ್ಲಿ ಭಾರತದ ಜತೆ ಸಹಕರಿಸಲು ಬಾಂಗ್ಲಾದೇಶ ಸಿದ್ಧವಿದೆ ಎಂದು ಅವರು ಹೇಳಿದರು. ಸದ್ಯಕ್ಕೆ ಇದು ಭಾರತದ ಆಂತರಿಕ ವಿಚಾರ. ಈ ಪ್ರಕ್ರಿಯೆಯನ್ನು ಭಾರತ ಅಂತಿಮಪಡಿಸಿದ ಬಳಿಕವಷ್ಟೇ ಬಾಂಗ್ಲಾದೇಶದ ಜತೆಗೆ ಚರ್ಚಿಸಬಹುದಾಗಿದೆ ಎಂದರು.

"ಬಾಂಗ್ಲಾದೇಶದಲ್ಲಿ ಬಹಳಷ್ಟು ಮಂದಿ ಇದನ್ನು ಭಾರತ ಆಂತರಿಕ ಚರ್ಚೆ ವಿಚಾರ ಎಂದು ಪರಿಗಣಿಸುತ್ತಾರೆ. ಭಾರತದಲ್ಲಿ ಆ ಪ್ರಕ್ರಿಯೆ ಆರಂಭವಾಗಿದೆ. ಅದು ಮುಕ್ತಾಯಕ್ಕೆ ಬರುವ ವೇಳೆಗೆ ಬಾಂಗ್ಲಾದೇಶದ ಜತೆ ಚರ್ಚೆಗೆ ಬರಲಿದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News