ಸುದ್ದಿ ಮಾಡುತ್ತಿರುವ ಕಲುಷಿತ ಪೋಲಿಯೊ ಲಸಿಕೆ..... ಕಳವಳ ಬೇಡ

Update: 2018-10-07 08:22 GMT

ತೀರ ಇತ್ತೀಚಿಗೆ ದೇಶದ ಕೆಲವು ಭಾಗಗಳಲ್ಲಿ ಮಕ್ಕಳಿಗೆ ನೀಡಲಾದ ಪೋಲಿಯೊ ಲಸಿಕೆಗಳಲ್ಲಿ ನಿರ್ದಿಷ್ಟ ಕಂಪನಿಯೊಂದು ತಯಾರಿಸಿದ್ದ ಲಸಿಕೆಯು ಟೈಪ್ 2 ಪೋಲಿಯೊ ವೈರಸ್‌ನಿಂದ ಕಲುಷಿತಗೊಂಡಿದ್ದುದು ಪತ್ತೆಯಾಗಿದ್ದು,ಇದು ದೇಶಾದ್ಯಂತ ಮಕ್ಕಳ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಕಂಪನಿಯ ವಿರುದ್ಧ ಈಗಾಗಲೇ ಕಾನೂನು ಕ್ರಮವನ್ನು ಆರಂಭಿಸಲಾಗಿದ್ದು,ಅದರ ನಿರ್ದೇಶಕನನ್ನು ಬಂಧಿಸಲಾಗಿದೆ.

ಅಂದ ಹಾಗೆ ಈ ಪ್ರಕರಣದ ಸುತ್ತಲಿನ ವಾಸ್ತವಗಳೇನು? ಇದು ನಿಜಕ್ಕೂ ಕಳವಳಕಾರಿ ವಿಷಯವೇ? ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ನೀಡುವ ‘ದೋ ಬೂಂದ್ ಜಿಂದಗಿ ಕಿ’ ಅಭಿಯಾನದ ಕುರಿತು ಇನ್ನಷ್ಟು ತನಿಖೆ ಅಗತ್ಯವಿದೆಯೇ?

ಪೋಷಕರು ಆತಂಕಗೊಂಡಿದ್ದಾರೆ,ನಿಜ. ಆದರೆ ಈ ವಿಷಯದ ಬಗ್ಗೆ ಗಾಬರಿಯಾಗಬೇಕಾದ ಅಗತ್ಯವೇನಿಲ್ಲ ಎನ್ನುತ್ತಾರೆ ತಜ್ಞರು.

ಟೈಪ್ 2 ಪೋಲಿಯೊ ವೈರಸ್ ಸ್ಟ್ರೇನ್‌ನ ಹಿನ್ನೆಲೆಯೇನು?

ಹಿಂದೆ ಟೈಪ್1,2 ಮತ್ತು 3....ಹೀಗೆ ಮೂರು ಪೋಲಿಯೊ ವೈರಸ್ ಸ್ಟ್ರೇನ್‌ಗಳನ್ನು ಬಳಸಿ ಪೋಲಿಯೊ ಲಸಿಕೆಗಳನ್ನು ತಯಾರಿಸಲಾಗುತ್ತಿತ್ತು. ಆದರೆ 2016 ಆಗಸ್ಟ್‌ನ ಬಳಿಕ ಸೋಂಕುಶಾಸ್ತ್ರೀಯ ಕಾರಣದಿಂದ ಟೈಪ್ 2 ಅನ್ನು ಹಿಂದೆಗೆದುಕೊಳ್ಳಲು ಸರಕಾರವು ನಿರ್ಧರಿಸಿತ್ತು.

 ಹೀಗಾಗಿ ಇತ್ತೀಚಿನ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಸರಕಾರವು ನಿರ್ಧಾರವನ್ನು ಕೈಗೊಳ್ಳುವ ಮೊದಲು ರಾಷ್ಟ್ರಿಯ ರೋಗ ನಿರೋಧಕ ಕಾರ್ಯಕ್ರಮದಡಿ ನೀಡಲಾಗುತ್ತಿದ್ದ ಟೈಪ್ 2 ಪೋಲಿಯೊ ವೈರಸ್ ಸ್ಟ್ರೇನ್ ಒಳಗೊಂಡಿದ್ದ ಲಸಿಕೆಯನ್ನೇ ಭಾರೀ ಸಂಖ್ಯೆಯ ಮಕ್ಕಳಿಗೆ ನೀಡಲಾಗಿದೆ.

ಈ ಸಂಬಂಧ ಹೆತ್ತವರೇನು ಮಾಡಬಹುದು?

 ಪ್ರಕರಣದ ಬಗ್ಗೆ ಅಧಿಕಾರಿಗಳು ಆಳವಾದ ತನಿಖೆಯನ್ನು ನಡೆಸುತ್ತಿದ್ದಾರೆ. ಆದಾಗ್ಯೂ ಮಕ್ಕಳ ಪೋಷಕರು ತಿಳಿದುಕೊಳ್ಳಬೇಕಾದ ಮಾಹಿತಿಯಿಲ್ಲಿದೆ.

ಮೊಟ್ಟಮೊದಲಿಗೆ ಪೋಷಕರು ಆತಂಕ ಮತ್ತು ಚಿಂತೆ ಪಡಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. 2016ರಲ್ಲಿ ಹಿಂದೆಗೆದುಕೊಳ್ಳುವವರೆಗೂ ಹಲವಾರು ವರ್ಷಗಳ ಕಾಲ ಟೈಪ್ 2 ಪೋಲಿಯೊ ವೈರಸ್ ಸ್ಟ್ರೇನ್ ಒಳಗೊಂಡಿದ್ದ ಇದೇ ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತಿತ್ತು.

ಅಲ್ಲದೆ ಲಸಿಕೆಯಲ್ಲಿ ವೈರಸ್ ನಿಷ್ಕ್ರಿಯ ಸ್ಥಿತಿಯಲ್ಲಿರುತ್ತದೆ ಮತ್ತು ಅದು ಪೋಲಿಯೊದ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಾತ್ರ ನೆರವಾಗುತ್ತದೆ. ಹೀಗಾಗಿ ಈ ಟೈಪ್ 2 ವೈರಸ್‌ನಿಂದ ಸೋಂಕಿಗೊಳಗಾಗುವ ಸಾಧ್ಯತೆ ಹೆಚ್ಚುಕಡಿಮೆ ಇಲ್ಲವೇ ಇಲ್ಲ ಎನ್ನಬಹುದು ಎನ್ನುತ್ತಾರೆ ತಜ್ಞರು.

ಆದರೆ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ವಿಷಯದಲ್ಲಿ ಹೆತ್ತವರು ಸದಾ ಹೆಚ್ಚಿನ ಖಚಿತತೆಯನ್ನು ಹೊಂದಿರಲು ಬಯಸುತ್ತಾರೆ. ಹೀಗಾಗಿ ಹೆತ್ತವರು ಕೆಲವು ಹೆಚ್ಚುವರಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ಖ್ಯಾತ ಮಕ್ಕಳ ತಜ್ಞರು ಹೇಳಿರುವುದು ಇಲ್ಲಿದೆ.

► ನಿಮ್ಮ ಮಗುವಿಗೇ ಈಗಾಗಲೇ ಚುಚ್ಚುಮದ್ದಿನ ಪೋಲಿಯೊ ಲಸಿಕೆ(ಐಪಿವಿ)ನೀಡಲಾಗಿದ್ದರೆ ನಿಮ್ಮ ಮಗುವು ರಕ್ಷಣೆಯನ್ನು ಹೊಂದಿರುತ್ತದೆ. ಹೀಗಾಗಿ ಮತ್ತೆ ಲಸಿಕೆಯನ್ನು ಕೊಡಿಸಬೇಕಿಲ್ಲ.

► ನಿಮ್ಮ ಮಗುವಿಗೆ ಬಾಯಿಯ ಮೂಲಕ ಪೋಲಿಯೊ ಲಸಿಕೆ(ಒಪಿವಿ)ಯನ್ನು ಮಾತ್ರ ನೀಡಲಾಗಿದ್ದರೆ ಸಂಪೂರ್ಣ ನಿರೋಧಕ ರಕ್ಷಣೆಯನ್ನೊದಗಿಸಲು ಐಪಿವಿಯನ್ನೂ ಕೊಡಿಸಬೇಕು.

ಐಪಿವಿಯನ್ನು ಯಾವಾಗ ಕೊಡಿಸಬೇಕು?

ಆರು ತಿಂಗಳಿಗೂ ಕಡಿಮೆ ವಯಸ್ಸಿನ ಮಕ್ಕಳಿಗೆ 4-6 ವಾರಗಳ ಅಂತರದಲ್ಲಿ ಮೂರು ಡೋಸ್ ಐಪಿವಿಯನ್ನು ಮತ್ತು ಒಂದೂವರೆ ವರ್ಷ ಪ್ರಾಯವಾದಾಗ ಒಂದು ಬೂಸ್ಟರ್ ಡೋಸ್ ಅನ್ನು ಕೊಡಿಸಬೆಕು.

ಆರು ತಿಂಗಳು ಮತ್ತು ಒಂದು ವರ್ಷ ಪ್ರಾಯದೊಳಗಿನ ಮಕ್ಕಳಿಗೆ 4-6 ವಾರಗಳ ಅಂತರದಲ್ಲಿ ಐಪಿವಿಯ ಮೂರು ಡೋಸ್‌ಗಳು ಮತ್ತು ಒಂದೂವರೆ ವರ್ಷ ಪ್ರಾಯದಲ್ಲಿ ಒಂದು ಬೂಸ್ಟರ್ ಡೋಸ್ ಕೊಡಿಸಬೇಕು.

ಒಂದು ವರ್ಷ ಮತ್ತು ಒಂದೂವರೆ ವರ್ಷ ಪ್ರಾಯದೊಳಗಿನ ಮಕ್ಕಳಿಗೆ ಒಂದು ವರ್ಷ ಪ್ರಾಯದಲ್ಲಿ ಒಂದು ಡೋಸ್ ಐಪಿವಿ ಮತ್ತು ಒಂದೂವರೆ ವರ್ಷ ಪ್ರಾಯದಲ್ಲಿ ಒಂದು ಬೂಸ್ಟರ್ ಡೋಸ್ ಕೊಡಿಸಬೇಕು. ಇವೆರಡರ ನಡುವೆ ಕನಿಷ್ಠ ನಾಲ್ಕು ವಾರಗಳ ಅಂತರವಿರಬೇಕು.

ಒಂದೂವರೆ ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಮಕ್ಕಳಿಗೆ ಐಪಿವಿಯ ಒಂದು ಬೂಸ್ಟರ್ ಡೋಸ್ ಕೊಡಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News