ಭಾರತ ಸ್ವತಂತ್ರ ಕಾರ್ಯನೀತಿ ಹೊಂದಿದೆ: ಸೇನಾ ಮುಖ್ಯಸ್ಥ ರಾವತ್

Update: 2018-10-07 17:30 GMT

ಹೊಸದಿಲ್ಲಿ, ಅ.7: ಭಾರತದ ಬಳಿ ಬಲಿಷ್ಠ ಸೇನಾಪಡೆಯಿದ್ದು ನಾವು ಸ್ವತಂತ್ರ ಕಾರ್ಯನೀತಿ ಹೊಂದಿದ್ದೇವೆ. ಈ ಕಾರಣದಿಂದಲೇ ರಶ್ಯವು ಭಾರತದ ಸೇನೆ ಮತ್ತು ರಕ್ಷಣಾ ಪಡೆಗಳೊಂದಿಗೆ ಸಹಯೋಗಿಯಾಗಲು ಬಯಸುತ್ತಿದೆ ಎಂದು ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಭಾರತ ಮತ್ತು ರಶ್ಯ ಶನಿವಾರ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದವು. ರಶ್ಯದೊಂದಿಗೆ ಶಸ್ತ್ರ ವ್ಯವಹಾರ ಮಾಡುವ ದೇಶಗಳಿಗೆ ನಿರ್ಬಂಧ ವಿಧಿಸಲಾಗುವುದು ಎಂಬ ಅಮೆರಿಕದ ಎಚ್ಚರಿಕೆಯ ನಡುವೆಯೇ ಭಾರತ ಈ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ರಾವತ್ ಈ ಹೇಳಿಕೆ ನೀಡಿದ್ದಾರೆ. ರಶ್ಯದಿಂದ ಕಮೊವ್ ಹೆಲಿಕಾಪ್ಟರ್‌ಗಳು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಭಾರತ ಉತ್ಸುಕವಾಗಿದೆ . ನಮ್ಮ ಕಾರ್ಯತಂತ್ರಕ್ಕೆ ಹೊಂದಿಕೊಂಡು ನಮ್ಮ ಅವಶ್ಯಕತೆಗಳನ್ನು ಪಡೆದುಕೊಳ್ಳಲು ನಾವು ಸ್ವತಂತ್ರರಾಗಿದ್ದೇವೆ ಎಂದು ರಾವತ್ ಹೇಳಿದರು.

ಜ ಕೆ.ವಿ.ಕೃಷ್ಣರಾವ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಶ್ಯಕ್ಕೆ ಆರು ದಿನ ಭೇಟಿ ನೀಡಿ ಶನಿವಾರ ಅವರು ಸ್ವದೇಶಕ್ಕೆ ವಾಪಸಾಗಿದ್ದರು. ರಶ್ಯದ ಭೇಟಿಯನ್ನು ಉಲ್ಲೇಖಿಸಿದ ಅವರು, ರಶ್ಯದೊಂದಿಗೆ ಒಪ್ಪಂದ ಮಾಡಿಕೊಂಡರೆ ನಿರ್ಬಂಧ ವಿಧಿಸಲಾಗುವುದು ಎಂಬ ಅಮೆರಿಕದ ಎಚ್ಚರಿಕೆಯ ಬಗ್ಗೆ ಸಭೆಯೊಂದರಲ್ಲಿ ರಶ್ಯದ ಸೇನಾಧಿಕಾರಿ ತನ್ನ ಪ್ರತಿಕ್ರಿಯೆ ಬಯಸಿದರು. ಆಗ ತಾನು- ಹೌದು ಈ ಎಚ್ಚರಿಕೆಯನ್ನು ನಾವೂ ಗಮನಿಸಿದ್ದೇವೆ. ಆದರೆ ನಾವು ಸ್ವತಂತ್ರ ಕಾರ್ಯನೀತಿಯನ್ನು ಹೊಂದಿದ್ದೇವೆ ಎಂದು ಉತ್ತರಿಸಿದ್ದೆ ಎಂದು ತಿಳಿಸಿದರು. ನಾವು ನಿರ್ಬಂಧದ ಬಗ್ಗೆ ಮಾತಾಡುತ್ತಿರುವಾಗ ಮತ್ತು ನೀವು ಈ ಪ್ರಶ್ನೆ ಕೇಳುತ್ತಿರುವಾಗ ಅಲ್ಲಿ (ಭಾರತದಲ್ಲಿ) ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಎಸ್-400 ಟ್ರಯಂಫ್ ಖರೀದಿ ಕುರಿತ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಾರೆ. ಭವಿಷ್ಯದಲ್ಲಿ ಅಮೆರಿಕ ಕ್ರಮ ಕೈಗೊಳ್ಳಬಹುದು ಎಂಬ ಸವಾಲಿನ ಮಧ್ಯೆಯೇ ನಾವು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದು ನಮ್ಮ ಸ್ವತಂತ್ರ ಕಾರ್ಯನೀತಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಉತ್ತರಿಸಿದ್ದೆ .

ಇದೇ ಸಭೆಯಲ್ಲಿ ಅಮೆರಿಕ-ಭಾರತ ನಡುವಿನ ಸಂಬಂಧ ವೃದ್ಧಿಸುತ್ತಿರುವ ಬಗ್ಗೆ ರಶ್ಯದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು. ಆದರೆ ಕೆಲವು ತಂತ್ರಜ್ಞಾನಗಳನ್ನು ಪಡೆದುಕೊಳ್ಳಲು ನಮಗೆ ಅಮೆರಿಕದ ಸಹಯೋಗ ಅಗತ್ಯವಾಗಿದೆ. ಆದರೆ ನಾವು ಸ್ವತಂತ್ರ ಕಾರ್ಯನೀತಿಯನ್ನು ಹೊಂದಿದ್ದೇವೆ ಎಂದವರಿಗೆ ಭರವಸೆ ನೀಡಿದೆ ಎಂದು ರಾವತ್ ಹೇಳಿದರು. ಕಾರ್ಯತಂತ್ರದ ದೃಷ್ಟಿಯಿಂದ ನಮಗೆ ಮಹತ್ವವೆನಿಸುವ ಕ್ಷೇತ್ರದಲ್ಲಿ ರಶ್ಯದೊಂದಿಗೆ ಸಹಯೋಗ ಮುಂದುವರಿಯಲಿದೆ . ಅಂತರಿಕ್ಷ ಕ್ಷೇತ್ರದ ತಂತ್ರಜ್ಞಾನವನ್ನು ರಶ್ಯದಿಂದ ಪಡೆಯಲು ಭಾರತ ಉತ್ಸುಕವಾಗಿದೆ ಎಂದು ರಾವತ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News