ಕಟ್ಟಡ ನಿರ್ಮಾಣ ಕಾರ್ಮಿಕರ ಕೊನೆ ಇಲ್ಲದ ಹೋರಾಟ

Update: 2018-10-08 05:25 GMT

♦ ಉಪೇಕ್ಷೆ ತೋರುವ ಹಾಗೂ ಭ್ರಷ್ಟ ಕಾರ್ಮಿಕ ಅಧಿಕಾರಿಗಳು, ಬಿಲ್ಡರ್‌ಗಳು ಮತ್ತು ಕಾರ್ಮಿಕ ಸಂಘಟನೆಗಳ ಒಂದು ಕೂಟದಿಂದಾಗಿ ಕಟ್ಟಡ ಕಾರ್ಮಿಕರು ಅವರಿಗೆ ನ್ಯಾಯಬದ್ಧವಾಗಿ ದೊರಕಬೇಕಾದ ಸವಲತ್ತುಗಳಿಗಾಗಿ ಹೋರಾಟ ನಡೆಸಬೇಕಾಗಿದೆ.
♦ ದಿಲ್ಲಿಯ ಒಂದು ಸಾಮಾಜಿಕ ಸಮೀಕ್ಷೆಯ ಪ್ರಕಾರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಮಾಜ ಕಲ್ಯಾಣ ಕಾನೂನುಗಳಿಂದ ಯಾವ ಉಪಯೋಗವೂ ಆಗುತ್ತಿಲ್ಲ.

ಗಂಗಿಯಾ ದೇವಿ ಓರ್ವ ಕಟ್ಟಡ ನಿರ್ಮಾಣ ಕಾರ್ಮಿಕಳಾಗಿ ದಿಲ್ಲಿಯಲ್ಲಿ ಹದಿನೈದು ವರ್ಷಗಳ ಕಾಲ ದುಡಿದಿದ್ದಾಳೆ. 2016ರಲ್ಲಿ ಆಕೆ ತನ್ನ ಕಾರ್ಮಿಕ ಗುರುತುಚೀಟಿ ಪಡೆಯಲು ನಿರ್ಧರಿಸಿದಳು. ಆ ಚೀಟಿ ಇದ್ದರೆ ಅವಳಿಗೆ ಹೆರಿಗೆ ಭತ್ತೆ, ಅವಳ ಮಕ್ಕಳಿಗೆ ವಿದ್ಯಾರ್ಥಿ ವೇತನಗಳು ಮತ್ತು ವೃದ್ಧಾಪ್ಯ ಪಿಂಚಣಿಯೂ ಸೇರಿದಂತೆ ಅವಳಿಗೆ ಹಲವಾರು ಸವಲತ್ತುಗಳು ದೊರಕುತ್ತವೆ ಎಂದು ಮಧ್ಯವರ್ತಿಯೊಬ್ಬ ಹೇಳಿದ್ದೇ ಅವಳ ಈ ತೀರ್ಮಾನಕ್ಕೆ ಕಾರಣ. ಅವಳು ಅವನಿಗೆ ಐನೂರು ರೂಪಾಯಿಯನ್ನು ನೀಡಿದಳು. ಮೂರು ತಿಂಗಳೊಳಗಾಗಿ ಆಕೆಗೆ ಆ ಗುರುತು ಚೀಟಿ ತೆಗೆಸಿ ಕೊಡುವುದಾಗಿ ಆತ ಆಶ್ವಾಸನೆ ನೀಡಿದ. ‘‘ಎರಡು ವರ್ಷಗಳಿಂದ ನನಗೆ ಅವನಿಂದ ಯಾವುದೇ ಮಾಹಿತಿ ಬಂದಿಲ್ಲ’’ ಎಂದಿದ್ದಾಳೆ ನಾಲ್ಕು ಮಕ್ಕಳ ತಾಯಿ ಹಾಗೂ ಗಂಡನಿಂದ ಪರಿತ್ಯಕ್ತಳಾಗಿರುವ ಮೂವತ್ತೈದರ ಹರೆಯದ ದೇವಿ. ಅದೇ ಮಧ್ಯವರ್ತಿ ಇಪ್ಪತ್ತೈದರ ಹರೆಯದ ರೀನಾ ದೇವಿ ಪಸ್ಮ್ಮನ್ ಎಂಬ ಕಾರ್ಮಿಕಳಿಗೂ ಮೋಸ ಮಾಡಿದ್ದಾನೆ. ‘‘ನನ್ನ ಕುಟುಂಬದಲ್ಲಿ ಗುರುತು ಚೀಟಿ ಪಡೆಯಲು ಪ್ರಯತ್ನಿಸಿದವರಲ್ಲಿ ನಾನೇ ಮೊದಲಿಗಳು. ನಾವು ಶಿಕ್ಷಿತರಲ್ಲ. ಅವರು ಹೇಳಿದ್ದನ್ನೆಲ್ಲ ನಾವು ನಂಬುತ್ತೇವೆ. ಆದರೆ ಅವರೇಕೆ ನಮ್ಮಿಂದ ಹಣ ಕಿತ್ತುಕೊಳ್ಳುತ್ತಾರೆ?’’ ಎಂದು ಕೇಳುತ್ತಾಳೆ ದೇವಿ.

1996ರ ಬಿಲ್ಡಿಂಗ್ ಆ್ಯಂಡ್ ಆದರ್ ಕನ್‌ಸ್ಟ್ರೆಕ್ಷನ್ ವರ್ಕಸ್ ಆ್ಯಕ್ಟ್‌ನ ಅನುಷ್ಠಾನದಲ್ಲಿ ಮಧ್ಯವರ್ತಿಗಳು ಕಾರ್ಮಿಕರಿಗೆ ಮೋಸ ಮಾಡುವುದು ಇತರ ಹಲವಾರು ಸಮಸ್ಯೆಗಳಲ್ಲಿ ಒಂದು ಸಮಸ್ಯೆ ಮಾತ್ರ. ದಿಲ್ಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ಸೆಪ್ಟಂಬರ್ 19-23ರ ಮಧ್ಯೆ ನಡೆಸಿದ ಸಾಮಾಜಿಕ ಸಮೀಕ್ಷೆಯಿಂದ ತಿಳಿದು ಬಂದ ಅಂಶ ಇದು.1996ರ ಕಾರ್ಮಿಕ ಕಾಯ್ದೆಯು ಪ್ರತಿಯೊಬ್ಬ ನೋಂದಾಯಿತ ಫಲಾನುಭವಿ ಹಲವಾರು ಸಮಾಜ ಕಲ್ಯಾಣ ಸವಲತ್ತುಗಳನ್ನು ಪಡೆಯಲು ಅರ್ಹ ಎನ್ನುತ್ತದೆ.
ಅಪಘಾತ ಸಂಭವಿಸಿದಲ್ಲಿ ಹಣಕಾಸು ಹಾಗೂ ವೈದ್ಯಕೀಯ ನೆರವು, ವೃದ್ಧಾಪ್ಯ ಪಿಂಚಣಿ, ಸಾಲಗಳು, ಮಕ್ಕಳಿಗೆ ವಿದ್ಯಾರ್ಥಿ ವೇತನಗಳು ಮತ್ತು ತಾಯಂದಿರಿಗೆ ಹೆರಿಗೆ ಸವಲತ್ತುಗಳು ಇಂತಹ ಕೆಲವು ಸವಲತ್ತುಗಳು. ನೋಂದಣಿ ಶುಲ್ಕ ಐನೂರು ರೂ. ಮೀರಬಾರದೆಂದೂ ಕಾರ್ಮಿಕ ಕಾಯ್ದೆ ಹೇಳುತ್ತದೆ.
1996ರ ಕಟ್ಟಡಗಳು ಮತ್ತು ಇತರ ಕಾಮಗಾರಿ ಕಾರ್ಮಿಕರ ಕಲ್ಯಾಣ ತೆರಿಗೆ ಕಾಯ್ದೆಯ ಪ್ರಕಾರ ಹತ್ತು ಲಕ್ಷ ರೂಪಾಯಿಗಿಂತ ಹೆಚ್ಚಿನ ಯಾವುದೇ ಯೋಜನೆಯ ಕಟ್ಟಡ ನಿರ್ಮಾಣ ಮಾಡುವವ (ಬಿಲ್ಡರ್) ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿಗೆ ಶೇ. 1ಕ್ಕಿಂತ ಕಡಿಮೆಯಲ್ಲದ ಒಂದು ತೆರಿಗೆ ನೀಡಬೇಕು. ಮಂಡಳಿಯು ಈ ಹಣವನ್ನು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ನೀಡಬೇಕು.

ಆದರೆ ಶಾಲಿಮಾರ್ ಬಾಗ್‌ನಲ್ಲಿ 2,493 ನೋಂದಾಯಿತ ಫಲಾನುಭವಿಗಳ ಪೈಕಿ, ಕೇವಲ 109 ಮಂದಿಯ ಕ್ಲೈಮ್‌ಗಳನ್ನು ವಿಲೇವಾರಿ ಮಾಡಲಾಗಿತ್ತು; ಮತ್ತು 800 ಮಂದಿ ಮಾತ್ರ ತಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನಗಳನ್ನು ಪಡೆದಿದ್ದರು. ಅಲ್ಲದೆ 339 ಮಂದಿ ಕಾರ್ಮಿಕರು ನೋಂದಣಿಗಾಗಿ ಅಥವಾ ಕಾರ್ಮಿಕ ಕಾರ್ಡುಗಳ ನವೀಕರಣಕ್ಕಾಗಿ ಕಾಯುತ್ತಿದ್ದರು. 138 ಮಂದಿ ಕಾರ್ಮಿಕರು ಕಾರ್ಮಿಕ ಸಂಘಟನೆಗಳಿಗೆ ನೋಂದಣಿ ಶುಲ್ಕ ಪಾವತಿಸಿದ್ದರು. ಆದರೆ ಇನ್ನೂ ಅವರಿಗೆ ಕಾರ್ಡುಗಳು ತಲುಪಿರಲಿಲ್ಲ. ನೋಂದಣಿಗೆ ಅರ್ಹರಾದ 97 ಮಂದಿ ಕಾರ್ಮಿಕರ ನೋಂದಣಿಯೇ ಆಗಿರಲಿಲ್ಲ. ಸಮೀಕ್ಷೆಯಿಂದ ತಿಳಿದು ಬಂದ ಇನ್ನೊಂದು ಮುಖ್ಯ ವಿಷಯ ವೆಂದರೆ, 162 ಮಂದಿ ನೋಂದಾಯಿತ ಫಲಾನು ಭವಿಗಳು ಕಟ್ಟಡ ನಿರ್ಮಾಣ ಕಾರ್ಮಿಕರೇ ಅಲ್ಲ ಮತ್ತು ಈ ವರ್ಗದ ಕಾರ್ಮಿಕರೇ ಅಲ್ಲದ ನಲವತ್ತು ಮಂದಿ ಚೀಟಿದಾರರಿಗೆ ರೂ. 2,54,800 ಮೊತ್ತದ ಕ್ಲೈಮ್‌ಗಳ ಪಾವತಿಯಾಗಿತ್ತು. ‘‘ಇದು ಕಾನೂನಿನ ಅನುಷ್ಠಾನದಲ್ಲಿ ನಡೆದಿರುವ ಗೋಲ್‌ಮಾಲ್’’ ಎಂದಿದ್ದಾರೆ ಮಜ್ದೂರ್‌ಕಿಸಾನ್ ಶಕ್ತಿ ಸಂಘಟನೆಯ ನಿಕಿಲ್ ಡೇ.
 ಈ ಸಂಘಟನೆಯು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಮತ್ತು ಮಾಹಿತಿ ಹಕ್ಕು ಕಾಯ್ದೆಯ ನಿಟ್ಟಿನಲ್ಲಿ ವ್ಯಾಪಕವಾಗಿ ಕೆಲಸ ಮಾಡಿದೆ. ಕಾನೂನಿನ ತೀರಾ ಕಳಪೆ ಅನುಷ್ಠಾನವು, ದೇಶದ ರಾಜಧಾನಿಯಲ್ಲೇ ಕಾರ್ಮಿಕರು ಎಷ್ಟು ದುರ್ಬಲರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಸಾಮಾಜಿಕ ಸಮೀಕ್ಷೆಯು ಸರಕಾರದ ಕಾರ್ಯಕ್ರಮದ ಒಟ್ಟು ಸ್ವರೂಪವನ್ನು ಅಧ್ಯಯನ ಮಾಡುವುದಲ್ಲದೆ ಕಾರ್ಯಕ್ರಮದ ತಕ್ಷಣದ ಅನುಷ್ಠಾನ ಹಾಗೂ ಅದರ ನೀತಿ ನಿಯಮಾವಳಿಗಳನ್ನು ಪರೀಕ್ಷಿಸುತ್ತದೆ. ದಿಲ್ಲಿಯ ಕಾರ್ಮಿಕ ಸಚಿವ ಗೋಪಾಲ್ ರಾಯ್ ಮತ್ತು ವಿಶೇಷ ಕಾರ್ಮಿಕ ಕಮಿಷನರ್ ಎ. ನೆಡುಂಚಳಿಯನ್ ಇಬ್ಬರು ಕೂಡ ತಮಗೆ ಈ ಸಾಮಾಜಿಕ ಸಮೀಕ್ಷೆಯ ಕುರಿತು ‘‘ಗೊತ್ತಿಲ್ಲ’’ ಎಂದಿದ್ದಾರೆ. ಅಲ್ಲದೇ ಸಮೀಕ್ಷೆ ಹೊರಗೆಡಹಿರುವ ವಿಷಯಗಳ ಬಗ್ಗೆ ಏನನ್ನೂ ಹೇಳಲು ಅವರು ನಿರಾಕರಿಸಿದ್ದಾರೆ. ದಿಲ್ಲಿ ಮಾತ್ರವಲ್ಲದೆ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಕೂಡ ಒಂದು ಸಾಮಾಜಿಕ ಸಮೀಕ್ಷೆಯನ್ನು ನಡೆಸಲಾಯಿತು. ಈ ಮೇಲೆ ಉಲ್ಲೇಖಿಸಲಾದ ಎರಡು ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಕಳೆದ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ, ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿತ್ತು. ಈ ಆದೇಶ ನೀಡಿದ ಬಳಿಕವಷ್ಟೇ ಸಾಮಾಜಿಕ ಸಮೀಕ್ಷೆಗಳನ್ನು ನಡೆಸಲಾಯಿತು. 2006ರಲ್ಲಿ ಕೇಂದ್ರ ನಿರ್ಮಾಣ ಕಾರ್ಮಿಕರ ರಾಷ್ಟ್ರೀಯ ಅಭಿಯಾನ ಸಮಿತಿಯು ಈ ಕಾಯ್ದೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ಸರಕಾರದ ವೈಫಲ್ಯದ ಕುರಿತು ಗಮನ ಸೆಳೆದು ಸುಪ್ರೀಂ ಕೋರ್ಟ್‌ಗೆ ಒಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಪ್ರತಿಕ್ರಿಯೆಯಾಗಿಯೇ ಮೇ ತಿಂಗಳಲ್ಲಿ ಸುಪ್ರಿಂ ಕೋರ್ಟ್‌ನ ಆದೇಶ ಹೊರಟಿತ್ತು.


ತೆರಿಗೆ ಕಾಯ್ದೆ ಪ್ರಕಾರ ಕಾರ್ಮಿಕ ಮಂಡಳಿಗಳು 2017 ಜುಲೈ ವೇಳೆಗೆ 37,400 ಕೋಟಿ ರೂ.ತೆರಿಗೆ(ಸೆಸ್) ಸಂಗ್ರಹಿಸಿದ್ದವು. ಆದರೆ ಸುಮಾರು 9,500 ಕೋಟಿ ರೂ.ಯನ್ನು ಮಾತ್ರ ಅವುಗಳು ಕಾರ್ಮಿಕರಿಗೆ ನೀಡಿದ್ದವು. ದಿಲ್ಲಿಯ ಕಾರ್ಮಿಕ ಕಲ್ಯಾಣ ಮಂಡಳಿ, 2016 ಮತ್ತು 2017ರಲ್ಲಿ ಸಂಗ್ರಹಿಸಿದ್ದ ರೂ.2,548 ಕೋಟಿಯಲ್ಲಿ ಅದರ ಕೇವಲ ಶೇ.6ರಷ್ಟು ಮೊತ್ತವನ್ನು ಮಾತ್ರ ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಿತ್ತು. ಈ ಎಲ್ಲ ಅಂಶಗಳನ್ನು ನ್ಯಾಯಾಲಯ ಗಮನಿಸಿಯೇ ತನ್ನ ಆದೇಶ ಹೊರಡಿಸಿತ್ತು.
ದಿಲ್ಲಿ ಮತ್ತು ರಾಜಸ್ಥಾನ-ಎರಡೂ ರಾಜ್ಯಗಳ ಕಟ್ಟಡ ಕಾಮಗಾರಿ ಕಾರ್ಮಿಕರ ಅತ್ಯಂತ ಸಾಮಾನ್ಯವಾದ ಸಂಕಷ್ಟವೆಂದರೆ ಕಾರ್ಮಿಕ ಕಾರ್ಡ್‌ಗಳನ್ನು ಪಡೆಯಲು ಅವರು ಪಡಬೇಕಾದ ಪಾಡು. ಕಾರ್ಮಿಕನೊಬ್ಬ ಮೂರು ರೀತಿಯಲ್ಲಿ ಈ ಕಾರ್ಡ್ ಪಡೆಯಬಹುದು 90 ದಿನಗಳ ಕಾಲ ಕೆಲಸ ಮಾಡಿದ ಬಳಿಕ ಕಾರ್ಮಿಕರು ತಮ್ಮ ನೌಕರಿದಾತನ ಬಳಿಹೋಗಿ ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿಗೆ ಸಲ್ಲಿಸಲು ತನಗೆ ಒಂದು ಪ್ರಮಾಣ ಪತ್ರ ನೀಡಬೇಕೆಂದು ಕೇಳಿಕೊಳ್ಳಬಹುದು ಅಥವಾ ಅವರು ನೇರವಾಗಿ ಕಾರ್ಮಿಕ ಮಂಡಳಿಯನ್ನು ಸಂಪರ್ಕಿಸಬಹುದು. ಮೂರನೆಯದಾಗಿ, ಅವರು ಒಂದು ಕಾರ್ಮಿಕ ಸಂಘದ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಆದರೆ ‘‘ಸಮಸ್ಯೆಯಾಗಿರುವುದು ಭೃಷ್ಟಾಚಾರ, ಭ್ರಷ್ಟ ಕಾರ್ಮಿಕ ಅಧಿಕಾರಿಗಳ ಮತ್ತು ಕಾರ್ಮಿಕ ಸಂಘಗಳ ನಡುವೆ ಒಂದು ಕೂಟ ಇದೆ. ಅಲ್ಲದೇ ಕಾರ್ಮಿಕ ಸಂಘಗಳು ತಮ್ಮ ಸಂಘದಲ್ಲಿ ಹೆಸರು ನೋಂದಾಯಿಸಲು ಬಯಸುವ ಕಾರ್ಮಿಕರಿಂದ ಬೇಕಾಬಿಟ್ಟಿ ನೋಂದಾವಣಿ ಶುಲ್ಕ ವಸೂಲಿ ಮಾಡುತ್ತಿವೆ. ಆದ್ದರಿಂದ ಬಹುಪಾಲು ಕಾರ್ಮಿಕರು ಮಧ್ಯವರ್ತಿಗಳ ಮೂಲಕ ತಮ್ಮ ಕಾರ್ಡ್ ಗಳನ್ನು ಮಾಡಿಸುತ್ತಾರೆ. ಆದರೆ ಮಧ್ಯವರ್ತಿಗಳು ಕೂಡ ಭ್ರಷ್ಟರೇ’’ ಎಂದಿದ್ದಾರೆ ಕಾರ್ಮಿಕ ಸಂಘಟನೆಯ ಸಮನ್ವಯಾಧಿಕಾರಿ ಸುಭಾಷ್ ಭಾಟ್ನಗರ್.
39ರ ಹರೆಯದ ರಾಮ್ ಪ್ರಸಾದ್ 20 ವರ್ಷಗಳಿಂದ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದಾನೆ. ಆದರೆ ಆತನಿಗೆ 2015ರ ವರೆಗೆ ಕಾರ್ಮಿಕ ಗುರುತು ಚೀಟಿ ಸಿಕ್ಕಿರಲಿಲ್ಲ ‘‘ನನ್ನ ಮಗಳ ಶಾಲೆಯ ಶಿಕ್ಷಕರೊಬ್ಬರು ನನಗೆ ಕಾರ್ಮಿಕ ಗುರುತಿನ ಚೀಟಿಯ ಬಗ್ಗೆ ಹೇಳಿದರು. ಅಲ್ಲಿಯ ವರೆಗೆ ನನಗೆ ಆ ಬಗ್ಗೆ ತಿಳಿದೇ ಇರಲಿಲ್ಲ.’’ ಎನ್ನುತ್ತಾನೆ ಆತ.
ಪ್ರಸಾದ್ ಈಗ ತನ್ನ ಕಾರ್ಡ್‌ನ್ನು ನವೀಕರಿಸಬೇಕಾಗಿದೆ ಆದರೆ 5 ತಿಂಗಳ ಹಿಂದೆಯೇ ನವೀಕರಣ ಕಾರ್ಯ ನಿಂತು ಹೋಗಿದೆ ಎಂದು ಸಬೂಬು ಹೇಳಿ ಕಾರ್ಮಿಕ ಮಂಡಳಿ ಆತನನ್ನು ಹಿಂದಕ್ಕೆ ಕಳುಹಿಸುತ್ತಿದೆ.
‘‘ಕತೆ ಆರಂಭವಾಗುವುದೇ ಇಲ್ಲಿಂದ. ಜನರ ಜಾಗೃತಿ ಮಟ್ಟ ತೀರಾ ಕೆಳಗೆ ಇದೆ. ಇದು ದಿಲ್ಲಿಯಲ್ಲೇ ಬಹಳ ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರ ಪಾಡು. ರಾಷ್ಟ್ರದ ರಾಜಧಾನಿಯ ಪರಿಸ್ಥಿತಿಯೇ ಹೀಗಿದೆ’’, ಎಂದಿದ್ದಾರೆ ಡೇ.
ತಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರಕಿಸಲು ಕೂಡ ಕಾರ್ಮಿಕರು ಹೋರಾಡಬೇಕಾಗಿದೆ. ತನ್ನ ಮಕ್ಕಳಿಗೆ ಎರಡು ವರ್ಷಗಳಿಂದ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ಹೇಳಿದ್ದಾನೆ ಮಹಮ್ಮದ್ ಇಸ್ಪಾಕ್; ‘‘ನಾವು ಅರ್ಜಿ ಸಲ್ಲಿಸಿದ್ದೆವು, ಆದರೆ ಅವುಗಳನ್ನು ತಿರಸ್ಕರಿಸಲಾಯಿತು. ಸರಕಾರ ನಮಗೆ ಹಣ ನೀಡುತ್ತದೆಂದು ಜನ ಹೇಳುತ್ತಾರೆ. ಆದರೆ ನಮಗೆ ಏನೂ ಸಿಗುತ್ತಿಲ್ಲ. ಬಡವರ ಮಕ್ಕಳು ಶಾಲೆಗೆ ಹೋಗಬೇಕಾಗಿದೆ, ಆದರೆ ಅವರಿಗೆ ನೆರವು ಸಿಗುತ್ತಿಲ್ಲ. ನಾವು ನಮ್ಮದೇ ಹಣ ನೀಡಿ ಪಠ್ಯಪುಸ್ತಕಗಳನ್ನು, ಶೂಗಳನ್ನು ಹಾಗೂ ಸಮವಸ್ತ್ರಗಳನ್ನು ಕೊಂಡುಕೊಳ್ಳಬೇಕಾಗಿದೆ.’’
ಶಾಲಿಮಾರ್‌ಬಾಗ್ ಪ್ರದೇಶದಲ್ಲಿ 54 ಕಟ್ಟಡಗಳ ಮಾಲಕರು ತೆರಿಗೆ(ಸೆಸ್) ನೀಡಲಿಲ್ಲ. ಯಾಕೆಂದರೆ ಆ ಕಟ್ಟಡಗಳು ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟಿರಲಿಲ್ಲ. ಆ ಪ್ರದೇಶದಲ್ಲಿ ಕೇವಲ ಮೂರು ಕಟ್ಟಡಗಳು ಮಾತ್ರ ನೋಂದಾಯಿತ ಕಟ್ಟಡಗಳಾಗಿದ್ದವು. ‘‘ಯಾರೂ ಇದನ್ನು ಗಮನಿಸುವುದಿಲ್ಲ. ದಿಲ್ಲಿಯಲ್ಲಿ ಸರಕಾರದ ಕಟ್ಟಡ ನಿರ್ಮಾಣ ಬೃಹತ್ ಪ್ರಮಾಣದಲ್ಲಿದೆ ಮತ್ತು ಇದೆಲ್ಲ ಸಹಜವಾಗಿಯೇ ಮಂಡಳಿಯಲ್ಲಿ ನೋಂದಾಯಿತವಾಗುತ್ತದೆ. ಆದರೆ ಬೇರೆಲ್ಲಾ ಕಡೆಗಳಲ್ಲಿ ಕಾಲನಿಗಳಲ್ಲಿ ಕಟ್ಟಡ ನಿರ್ಮಾಣ ಹಾಗೂ ನವೀಕರಣ ಸತತವಾಗಿ ನಡೆಯುತ್ತಲೆ ಇರುತ್ತದೆ. ಇದೆಲ್ಲ ಮಂಡಳಿಯ ಗಮನಕ್ಕೆ ಬರುವುದಿಲ್ಲ. ‘‘ಇದಕ್ಕೆ ಒಂದು ಪರಿಹಾರವೆಂದರೆ, ತಮ್ಮ ಪ್ರದೇಶಗಳಲ್ಲಿ ನಡೆಯುವ ಕಟ್ಟಡ ಕಾಮಗಾರಿಗಳ ಬಗ್ಗೆ ಮಂಡಳಿಗಳಿಗೆ ವರದಿ ಮಾಡುವ ಜವಾಬ್ದಾರಿಯನ್ನು ನಿವಾಸಿ (ರೆಸಿಡೆಂಟ್) ಕಲ್ಯಾಣ ಸಂಘಗಳಿಗೆ ವಹಿಸಿ ಕೊಡುವುದು.’’ ಎನ್ನುತ್ತಾರೆ ಡೇ.
ನಿರ್ಮಾಣವಾಗುವ ಕಟ್ಟಡಗಳನ್ನು ಕಡ್ಡಾಯವಾಗಿ ನೋಂದಾಯಿಸಿ ಖಾಸಗಿ ಬಿಲ್ಡರ್‌ಗಳಿಂದ ತೆರಿಗೆ ಸಂಗ್ರಹಿಸುವ ಸರಕಾರಿ ಯಂತ್ರವನ್ನು ಬಲಿಷ್ಠಗೊಳಿಸುವಂತೆ ಸುಪ್ರೀಂ ಕೋರ್ಟ್ ತನ್ನ ಮೇ ತಿಂಗಳ ಆಜ್ಞೆಯಲ್ಲಿ ಸರಕಾರಕ್ಕೆ ಹೇಳಿತ್ತು. ಅಷ್ಟೇ ಅಲ್ಲದೇ, ಕಟ್ಟಡ ನಿರ್ಮಾಣ ಕಾರ್ಮಿಕರ ಉಪಯೋಗಕ್ಕಾಗಿ ಸೆಪ್ಟಂಬರ್ 30ರ ಮೊದಲು ಒಂದು ‘‘ಮಾದರಿ ಯೋಜನೆ’’ಯನ್ನು ರೂಪಿಸುವಂತೆ ಕೂಡ ಅದು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಆದೇಶ ನೀಡಿತ್ತು. ಕಾರ್ಮಿಕರ ಸಾಮಾಜಿಕ ಭದ್ರತೆ, ವೃದ್ಧಾಪ್ಯ ಪಿಂಚಣಿ, ಆರೋಗ್ಯ ಸೇವೆ, ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಈ ಮಾದರಿ ಯೋಜನೆಯಲ್ಲಿ ಅಡಕವಾಗಿರಬೇಕು ಎಂದು ನ್ಯಾಯಾಲಯ ಸೂಚಿಸಿತು. ಆದರೆ ನ್ಯಾಯಾಲಯದ ಆಜ್ಞೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸರಕಾರ ಸಾಕಷ್ಟು ಕೆಲಸ ಮಾಡಿಲ್ಲವೆಂಬುದು ಈಗ ನಡೆಸ ಲಾಗಿರುವ ಸಾಮಾಜಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.
ಕೃಪೆ: scroll.in

ನಿರ್ಮಾಣವಾಗುವ ಕಟ್ಟಡಗಳನ್ನು ಕಡ್ಡಾಯವಾಗಿ ನೋಂದಾಯಿಸಿ ಖಾಸಗಿ ಬಿಲ್ಡರ್‌ಗಳಿಂದ ತೆರಿಗೆ ಸಂಗ್ರಹಿಸುವ ಸರಕಾರಿ ಯಂತ್ರವನ್ನು ಬಲಿಷ್ಠಗೊಳಿಸುವಂತೆ ಸುಪ್ರೀಂ ಕೋರ್ಟ್ ತನ್ನ ಮೇ ತಿಂಗಳ ಆಜ್ಞೆಯಲ್ಲಿ ಸರಕಾರಕ್ಕೆ ಹೇಳಿತ್ತು. ಅಷ್ಟೇ ಅಲ್ಲದೇ, ಕಟ್ಟಡ ನಿರ್ಮಾಣ ಕಾರ್ಮಿಕರ ಉಪಯೋಗಕ್ಕಾಗಿ ಸೆಪ್ಟಂಬರ್ 30ರ ಮೊದಲು ಒಂದು ‘‘ಮಾದರಿ ಯೋಜನೆ’’ಯನ್ನು ರೂಪಿಸುವಂತೆ ಕೂಡ ಅದು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಆದೇಶ ನೀಡಿತ್ತು.

Writer - ವಿಜೈತಾ ಲಲ್ವಾನಿ

contributor

Editor - ವಿಜೈತಾ ಲಲ್ವಾನಿ

contributor

Similar News

ಜಗದಗಲ
ಜಗ ದಗಲ