ಸಿಎಂ ಆಗಿದ್ದಾಗ ನಾನು ಗುಜರಾತನ್ನು ದಕ್ಷಿಣ ಕೊರಿಯದಂತೆ ಮಾಡಬೇಕೆಂದು ಬಯಸಿದ್ದೆ: ಪ್ರಧಾನಿ ಮೋದಿ

Update: 2018-10-08 07:30 GMT

ಡೆಹ್ರಾಡೂನ್, ಅ.8: ತಾನು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ 2001ರಲ್ಲಿ ಅಧಿಕಾರ ವಹಿಸಿಕೊಂಡಾಗ ಗುಜರಾತ್ ರಾಜ್ಯವನ್ನು ದಕ್ಷಿಣ ಕೊರಿಯದಂತೆ ಮಾರ್ಪಾಡುಗೊಳಿಸಲು ಬಯಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.

ಡೆಹ್ರಾಡೂನ್‍ನಲ್ಲಿ  ಉತ್ತರಾಖಂಡ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, “ವಿಶ್ವದ ಹಲವು ಇತರ ರಾಷ್ಟ್ರಗಳಿಗಿಂತಲೂ ನಮ್ಮ ರಾಜ್ಯಗಳಿಗೆ ಹೆಚ್ಚಿನ ಅಧಿಕಾರವಿದೆ. ಹಲವು ಸಣ್ಣ ದೇಶಗಳಿಗೆ ಹೋಲಿಸಿದಾಗ ನಮ್ಮ ರಾಜ್ಯಗಳ ಸಾಮರ್ಥ್ಯ ಅಧಿಕವಾಗಿದೆ. ನಾನು ಮೊದಲ ಬಾರಿ ಅಕ್ಟೋಬರ್ 7, 2001ರಂದು ಗುಜರಾತ್ ಸಿಎಂ ಆದಾಗ ಸರಕಾರವೇನೆಂದು ನನಗೆ ತಿಳಿದಿರಲಿಲ್ಲ. ನನಗೆ ಅನುಭವದ ಕೊರತೆಯಿತ್ತು, ನಾನು ಸಂಪೂರ್ಣ ಹೊಸಬನಾಗಿದ್ದೆ. ಆಗ ಒಬ್ಬ ಪತ್ರಕರ್ತ ನನ್ನ ಬಳಿ ಬಂದು ನನ್ನಲ್ಲಿ ಎಂತಹ ಪ್ರಶ್ನೆಗಳನ್ನು ಕೇಳಿದನೆಂದರೆ ಅವುಗಳಿಗೆ ನಾನು ಉತ್ತರಿಸಿದರೆ ಗುಜರಾತ್ ಮುಖ್ಯಮಂತ್ರಿಯಾಗಿ ನನ್ನ ಪಯಣ ಮುಂದುವರಿಯುವ ಹಾಗಿರಲಿಲ್ಲ'' ಎಂದರು.

“ಗುಜರಾತ್ ನಲ್ಲಿ ಅಭಿವೃದ್ಧಿ ಸಾಧಿಸಲು ನನ್ನ ಆದರ್ಶ ಯಾರೆಂದು ಕೇಳಲಾಯಿತು. ಸಾಮಾನ್ಯವಾಗಿ ಎಲ್ಲರೂ ಅಮೆರಿಕಾ, ಇಂಗ್ಲೆಂಡ್ ನಂತೆ ರಾಜ್ಯವನ್ನು ಪರಿವರ್ತಿಸಬೇಕು ಎಂದು ಹೇಳುವವರಾದರೆ ನಾನು ವಿಭಿನ್ನವಾಗಿ ಉತ್ತರಿಸಿ ಗುಜರಾತನ್ನು ದಕ್ಷಿಣ ಕೊರಿಯದಂತೆ ಮಾಡಬೇಕು ಎಂದೆ. ಆ ಪತ್ರಕರ್ತನಿಗೆ ಏನೂ ಗೊತ್ತಿರಲಿಲ್ಲ. ಗುಜರಾತ್ ಹಾಗೂ ದಕ್ಷಿಣ ಕೊರಿಯಾದಲ್ಲಿ  ಜನಸಂಖ್ಯೆ ಪ್ರಮಾಣ ಸಮಾನವಾಗಿದೆ. ಈ ಬಗ್ಗೆ ನಾನು ಅಧ್ಯಯನ ನಡೆಸಿದ್ದೇನೆ. ಈ ಹಾದಿಯಲ್ಲಿ ನಾವು ಸಾಗಿದರೆ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ'' ಎಂದು ಮೋದಿ ವಿವರಿಸಿದರು.

ಉದ್ಯಮಗಳಿಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದ ಪ್ರಧಾನಿ, ಕೇಂದ್ರವು 400 ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸುತ್ತಿದೆ ಹಾಗೂ 100 ಹೊಸ ವಿಮಾಣ ನಿಲ್ದಾಣ, ಹೆಲಿಪ್ಯಾಡ್ ನಿರ್ಮಾಣ ಮಾಡುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೂಡಿಕೆಗೆ ಅವಕಾಶ ನೀಡುತ್ತಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News