ಸೇನೆಯಲ್ಲಿ ಪುರುಷ ನರ್ಸ್‌ಗಳ ನೇಮಕ ಯಾಕಿಲ್ಲ: ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ಪ್ರಶ್ನೆ

Update: 2018-10-09 15:16 GMT

ಹೊಸದಿಲ್ಲಿ, ಅ.9: ಸೇನೆಯಲ್ಲಿ ನರ್ಸ್ ಹುದ್ದೆಗೆ ಕೇವಲ ಮಹಿಳೆಯರನ್ನು ಮಾತ್ರ ನೇಮಿಸುವ ಮೂಲಕ ಒಂದು ರೀತಿಯಲ್ಲಿ ಭಾರತೀಯ ಸೇನೆ ಲಿಂಗ ತಾರತಮ್ಯದ ಧೋರಣೆ ಅನುಸರಿಸುತ್ತಿದೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದ್ದು, ಈ ವಿಷಯದ ಬಗ್ಗೆ ಗಮನ ಹರಿಸಲು ಕೇಂದ್ರ ಸರಕಾರಕ್ಕೆ ಎರಡು ತಿಂಗಳ ಕಾಲಾವಕಾಶ ಒದಗಿಸಿದೆ.

 ಇದನ್ನೂ ಲಿಂಗ ತಾರತಮ್ಯ ಎಂದು ಪರಿಗಣಿಸಬಹುದು. ಆದರೆ ವಿರುದ್ಧ ದಿಕ್ಕಿನಲ್ಲಿ ನಡೆದ (ಪುರುಷರ ಕಡೆಗಣನೆ) ಲಿಂಗ ತಾರತಮ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾಯಾಧೀಶ ವಿ.ಕೆ.ರಾವ್ ಅವರಿದ್ದ ನ್ಯಾಯಪೀಠ ತಿಳಿಸಿದೆ. ಭಾರತೀಯ ಸೇನಾಪಡೆಯ ನರ್ಸಿಂಗ್ ಸೇವಾ ವಿಭಾಗಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿರುವುದು ಲಿಂಗ ತಾರತಮ್ಯದ ಸ್ಪಷ್ಟ ಉದಾಹರಣೆಯಾಗಿದೆ ಎಂದು ದೂರಿ ಭಾರತೀಯ ವೃತ್ತಿನಿರತ ನರ್ಸ್‌ಗಳ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಲಯ ಈ ಮೇಲಿನಂತೆ ಪ್ರತಿಕ್ರಿಯಿಸಿದೆ. ನರ್ಸ್ ಹುದ್ದೆಗೆ ಮಹಿಳೆಯರನ್ನು ಮಾತ್ರ ನೇಮಿಸಲು ಅವಕಾಶ ನೀಡುವ 1943ರ ಸೇನಾ ನರ್ಸಿಂಗ್ ಸೇವಾ ಆಧ್ಯಾದೇಶ ಹಾಗೂ 1944ರ ಸೇನಾ ನರ್ಸಿಂಗ್ ಸೇವೆ ಕಾಯ್ದೆ (ಭಾರತ)ಯ ನಿಯಮಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

 ದೇಶದಲ್ಲಿರುವ ತರಬೇತಿ ಪಡೆದ ಮತ್ತು ಅರ್ಹ ಸಾವಿರಾರು ಪುರುಷ ನರ್ಸ್‌ಗಳನ್ನು ಸೇನಾಪಡೆಯ ನರ್ಸಿಂಗ್ ಸೇವೆಗೆ ಪರಿಗಣಿಸದಿರುವುದು ಅಸಮರ್ಥನೀಯ ಮತ್ತು ಅಸಾಂವಿಧಾನಿಕ ಕ್ರಮವಾಗಿದ್ದು, ಇದರಿಂದ ಅವರು ಉದ್ಯೋಗಾವಕಾಶದಿಂದ ವಂಚಿತರಾಗುತ್ತಾರೆ. ಅಲ್ಲದೆ ದೇಶ ಮತ್ತು ಸೇನಾಪಡೆಗಳೂ ಅರ್ಹ ವೃತ್ತಿಪರರ ಸೇವೆಯಿಂದ ವಂಚಿತವಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೇನಾಪಡೆಗಳಲ್ಲಿ ಪುರುಷ ನರ್ಸ್‌ಗಳ ನೇಮಕಾತಿ ಕುರಿತು ನಿರ್ಧರಿಸಲು ಆರು ತಿಂಗಳ ಕಾಲಾವಕಾಶವನ್ನು ಕೇಂದ್ರ ಸರಕಾರ ಕೇಳಿದ್ದ ಕಾರಣ ಎಲ್ಲಾ ಸೇನಾ ನೆಲೆಗಳ ಅಧಿಕಾರಿಗಳ ಜೊತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ ನಿರ್ಧಾರವೊಂದಕ್ಕೆ ಬರುವಂತೆ ನ್ಯಾಯಾಲಯ ಸೂಚಿಸಿ ಮುಂದಿನ ವಿಚಾರಣೆಯನ್ನು 2019ರ ಜನವರಿ 21ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News