ಹಳಿ ತಪ್ಪಿದ ರೈಲು: ಕನಿಷ್ಠ ಐವರ ಸಾವು

Update: 2018-10-10 03:43 GMT

ಲಕ್ನೋ, ಅ.10: ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಇಂದು ಮುಂಜಾನೆ ರೈಲು ಹಳಿ ತಪ್ಪಿ ಐದು ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದಾರೆ. ನ್ಯೂ ಫರಾಕ್ಕಾ ಎಕ್ಸ್‌ಪ್ರೆಸ್ ರೈಲಿನ ಆರು ಬೋಗಿಗಳು ಹಳಿತಪ್ಪಿ ಈ ದುರಂತ ಸಂಭವಿಸಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಹರಚಂದಪುರ ರೈಲು ನಿಲ್ದಾಣದಿಂದ 50 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಲಕ್ನೋ ಹಾಗೂ ವಾರಣಾಸಿಯಿಂದ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ತಂಡಗಳು ರಕ್ಷಣಾ ಕಾರ್ಯಕ್ಕೆ ಧಾವಿಸಿವೆ. "ಮುಖ್ಯಮಂತ್ರಿ ಆದಿತ್ಯನಾಥ್ ಅವರು ಜಿಲ್ಲಾಧಿಕಾರಿ, ಆರೋಗ್ಯ ಅಧಿಕಾರಿಗಳು ಮತ್ತು ಎನ್‌ಡಿಆರ್‌ಎಫ್ ಅಧಿಕಾರಿಗಳಿಗೆ ಸೂಚನೆ ನೀಡಿ ಸಾಧ್ಯವಿರುವ ಎಲ್ಲ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದಾರೆ" ಎಂದು ಎಎನ್‌ಐ ಟ್ವೀಟ್ ಮಾಡಿದೆ.

ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎನ್.ಆರ್.ಸತೀಶ್ ಕುಮಾರ್ ಹೇಳಿದ್ದಾರೆ. ಅಪಘಾತಕ್ಕೀಡಾದ ರೈಲು ಅಲಹಾಬಾದ್‌ನಿಂದ ಲಕ್ನೋಗೆ ಹೋಗುತ್ತಿತ್ತು. ರೈಲಿನಡಿಯಲ್ಲಿ ಇನ್ನೂ ಬಹಳಷ್ಟು ಮಂದಿ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News