ಮೊದಲ ಟ್ವೆಂಟಿ-20: ಝಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಕ್ಕೆ ಜಯ

Update: 2018-10-10 05:25 GMT

ಈಸ್ಟ್ ಲಂಡನ್, ಅ.10: ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ ಝಿಂಬಾಬ್ವೆ ವಿರುದ್ಧ 34 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.

 ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿತು. ಗೆಲ್ಲಲು ಸ್ಪರ್ಧಾತ್ಮಕ ಗುರಿ ಪಡೆದ ಝಿಂಬಾಬ್ವೆ 17.2 ಓವರ್‌ಗಳಲ್ಲಿ 126 ರನ್‌ಗೆ ಆಲೌಟಾಯಿತು.

ಝಿಂಬಾಬ್ವೆ 13ನೇ ಓವರ್‌ನಲ್ಲಿ 70 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 19 ಎಸೆತಗಳಲ್ಲಿ 53 ರನ್ ಜೊತೆಯಾಟ ನಡೆಸಿದ ಪಿಜೆ ಮೂರ್(44,21 ಎಸೆತ) ಹಾಗೂ ಬ್ರೆಂಡನ್ ಮವುಟಾ(28,14 ಎಸೆತ)ಝಿಂಬಾಬ್ವೆಗೆ ಗೆಲುವಿನ ಆಸೆ ಮೂಡಿಸಿದರು.

ಮವುಟಾ ವಿಕೆಟ್ ಉಡಾಯಿಸಿದ ಜೂನಿಯರ್ ಡಾಲಾ ಈ ಜೋಡಿಯನ್ನು ಬೇರ್ಪಡಿಸಿದರು. ಝಿಂಬಾಬ್ವೆ ಕೊನೆಯ 3 ವಿಕೆಟ್‌ಗಳನ್ನು ಮೂರು ರನ್‌ಗಳಿಗೆ ಕಳೆದುಕೊಂಡು 126 ರನ್‌ಗೆ ಆಲೌಟಾಯಿತು. ಮೂರ್ 15ನೇ ಓವರ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಸಿಡಿಸಿ ಝಿಂಬಾಬ್ವೆ ಕೊನೆಯ ಕ್ಷಣದಲ್ಲಿ ತಿರುಗಿಬೀಳಲು ನೆರವಾದರು. ತಂಡದ ಪರ ಅಗ್ರ ಸ್ಕೋರ್ ಗಳಿಸಿದ ಮೂರ್ ಔಟಾಗುವುದರೊಂದಿಗೆ ಝಿಂಬಾಬ್ವೆ ಇನಿಂಗ್ಸ್‌ಗೆ ತೆರೆ ಬಿತ್ತು

ಏಕದಿನ ಅಂತರ್‌ರಾಷ್ಟ್ರೀಯ ಸರಣಿಯ ಫಾರ್ಮ್‌ನ್ನು ಟ್ವೆಂಟಿ-20ಯಲ್ಲೂ ಮುಂದುವರಿಸಿದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ 23 ರನ್‌ಗೆ 5 ವಿಕೆಟ್‌ಗಳನ್ನು ಪಡೆದರು. ಡಾಲಾ(2-25) ಹಾಗೂ ಪೆಹ್ಲುಕ್ವಾವೊ(2-25) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕದ ಪರ ಚೊಚ್ಚಲ ಪಂದ್ಯವನ್ನಾಡಿದ್ದ ರಸ್ಸಿ ವ್ಯಾನ್ ಡೆರ್ ಡುಸ್ಸಾನ್ 56 ರನ್ (44 ಎಸೆತ, 5 ಬೌಂಡರಿ, 1 ಸಿಕ್ಸರ್)ಗಳಿಸಿದರು. ಡೇವಿಡ್ ಮಿಲ್ಲರ್(39) ಹಾಗೂ ನಾಯಕ ಎಫ್ ಡು ಪ್ಲೆಸಿಸ್(34)ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News