ಶೂ, ಶಸ್ತ್ರಾಸ್ತದೊಂದಿಗೆ ಪೊಲೀಸರು ಪುರಿ ಜಗನ್ನಾಥ ದೇವಾಲಯ ಪ್ರವೇಶಿಸಬಾರದು: ಸುಪ್ರೀಂ ಕೋರ್ಟ್

Update: 2018-10-10 14:17 GMT

ಹೊಸದಿಲ್ಲಿ, ಅ. 10: ಭಕ್ತಾದಿಗಳಿಗೆ ಸರದಿ ವ್ಯವಸ್ಥೆ ಪರಿಚಯಿಸಿದ ವಿರುದ್ಧ ಪ್ರತಿಭಟನೆ ನಡೆದ ಸಂದರ್ಭ ಪುರಿ ಜಗನ್ನಾಥ ದೇವಾಲಯದಲ್ಲಿ ಅಕ್ಟೋಬರ್ 3ರಂದು ನಡೆದ ಹಿಂಸಾಚಾರವನ್ನು ಬುಧವಾರ ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ಪೊಲೀಸರು ಶಸ್ತ್ರಾಸ್ತ್ರ ಹಾಗೂ ಶೂನೊಂದಿಗೆ ದೇವಾಲಯ ಪ್ರವೇಶಿಸುವಂತಿಲ್ಲ ಎಂದು ಹೇಳಿದ್ದಾರೆ.

ದೇವಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 47 ಮಂದಿಯನ್ನು ಬಂಧಿಸಲಾಗಿದೆ ಹಾಗೂ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಹಾಗೂ ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠಕ್ಕೆ ಒರಿಸ್ಸಾ ಸರಕಾರ ತಿಳಿಸಿದೆ. ದೇವಾಲಯದ ಆವರಣದ ಒಳಗಡೆ ಯಾವುದೇ ಹಿಂಸಾಚಾರ ನಡೆದಿಲ್ಲ. ಮುಖ್ಯ ದೇವಾಲಯದಿಂದ 500 ಮೀಟರ್ ದೂರದಲ್ಲಿರುವ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಕಚೇರಿ ಒಳಗಡೆ ಹಿಂಸಾಚಾರದ ಸಂದರ್ಭ ದಾಂಧಲೆ ಹಾಗೂ ದಾಳಿ ನಡೆದಿದೆ ಎಂದು ಅದು ಹೇಳಿದೆ.

ನ್ಯಾಯಾಲಯ ಮದ್ಯಪ್ರವೇಶಿಸುವಂತೆ ಕೋರಿದ ದೇವಾಲಯದ ಪರ ವಕೀಲ, ಹಿಂಸಾಚಾರದ ಸಂದರ್ಭ ಪೊಲೀಸರು ಬಂದೂಕು ಹಾಗೂ ಶೂ ಧರಿಸಿ ಪ್ರವೇಶಿಸಿದರು ಎಂದು ಪ್ರತಿಪಾದಿಸಿದ್ದಾರೆ. ಜಗನ್ನಾಥ ದೇವಾಲಯ ಪ್ರವೇಶಕ್ಕೆ ಭೇಟಿ ನೀಡಲು ಭಕ್ತಾದಿಗಳಿಗೆ ಸರದಿ ವ್ಯವಸ್ಥೆ ಪರಿಚಯಿಸಿರುವುದನ್ನು ಪ್ರತಿಭಟಿಸಿ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆ ಅಕ್ಟೋಬರ್ 3ರಂದು ಕರೆ ನೀಡಿದ 12 ಗಂಟೆಗಳ ಬಂದ್ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ 9 ಮಂದಿ ಪೊಲೀಸರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News