ಲೈಂಗಿಕ ಕಿರುಕುಳ: ಕೇಂದ್ರ ಸಚಿವ ಅಕ್ಬರ್ ವಿರುದ್ಧ ಧ್ವನಿಯೆತ್ತಿದ ಇನ್ನೂ ಐವರು ಪತ್ರಕರ್ತೆಯರು

Update: 2018-10-10 16:03 GMT

ಹೊಸದಿಲ್ಲಿ,ಅ.10: ಭಾರತದಲ್ಲಿ ‘#ಮೀ ಟೂ ಅಭಿಯಾನ’ ಇನ್ನಷ್ಟು ಕಾವು ಪಡೆದುಕೊಳ್ಳುತ್ತಿದ್ದು,ಮಾಜಿ ಪತ್ರಕರ್ತ ಹಾಗೂ ಹಾಲಿ ಸಹಾಯಕ ವಿದೇಶಾಂಗ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ಅವರೊಂದಿಗೆ ಇನ್ನೂ ಕನಿಷ್ಠ ಐವರು ಪತ್ರಕರ್ತೆಯರು ಧ್ವನಿಗೂಡಿಸಿದ್ದಾರೆ.

ಅಕ್ಬರ್ ಅವರು ಪತ್ರಕರ್ತರಾಗಿದ್ದಾಗ ತಮಗೂ ಕಿರುಕುಳವನ್ನು ನೀಡಿದ್ದರು ಎಂದು ಈ ಮಹಿಳೆಯರು ಆರೋಪಿಸಿದ್ದಾರೆ. ಅಕ್ಬರ್ ಸದ್ಯ ನೈಜೀರಿಯಾ ಪ್ರವಾಸದಲ್ಲಿದ್ದು,ಈ ಕುರಿತು ಪತ್ರಕರ್ತರ ಸಂದೇಶಗಳಿಗೆ ಪ್ರತಿಕ್ರಿಯಿಸಿಲ್ಲ. ಅಕ್ಬರ್ ಹೆಸರು ಪ್ರಸ್ತಾವಗೊಳ್ಳುವುದರೊಂದಿಗೆ ಮಾಧ್ಯಮಗಳು,ಸಿನಿಮಾ ಮತ್ತು ಮನೋರಂಜನೆ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿದ್ದ ಈ ಅಭಿಯಾನವೀಗ ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಿದೆ.

 ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮೊಟ್ಟಮೊದಲು ಮಾಡಿದ್ದು ಇಂಡಿಯಾ ಟುಡೇ,ದಿ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಮಿಂಟ್‌ಗಳಲ್ಲಿ ಕೆಲಸ ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ಅವರು.

  ಆಗ 23ರ ಹರೆಯದವಳಾಗಿದ್ದ ತನ್ನನ್ನು ‘ಸಂಪಾದಕರು’ ಉದ್ಯೋಗದ ಸಂದರ್ಶನಕ್ಕಾಗಿ ತಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಆಹ್ವಾನಿಸಿದ್ದರು ಮತ್ತು ಆಗ 43ರ ವರ್ಷ ವಯಸ್ಸಾಗಿದ್ದ ಅವರು ತನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದರು ಎಂದು ರಮಣಿ 2017, ಅಕ್ಟೋಬರ್‌ನ ವೋಗ್ ಇಂಡಿಯಾಕ್ಕಾಗಿ ಬರೆದಿದ್ದ ಲೇಖನದಲ್ಲಿ ಆರೋಪಿಸಿದ್ದರು. ಸೋಮವಾರ ತನ್ನ ಈ ಲೇಖನಕ್ಕೆ ಕೊಂಡಿಯನ್ನು ಟ್ವೀಟಿಸಿದ್ದ ಅವರು,ಲೇಖನದಲ್ಲಿನ ‘ಸಂಪಾದಕರು’ ಎಂ.ಜೆ.ಅಕ್ಬರ್ ಆಗಿದ್ದರು ಎನ್ನುವುದನ್ನು ಬಹಿರಂಗಗೊಳಿಸಿದ್ದರು. ಅವರು ತನಗೆ ಏನೂ ‘ಮಾಡಿರಲಿಲ್ಲ’,ಹೀಗಾಗಿ ಅವರನ್ನು ಹೆಸರಿಸಿರಲಿಲ್ಲ. ಈ ‘ಪರಭಕ್ಷಕ’ ವ್ಯಕ್ತಿಯ ಕುರಿತು ಹಲವಾರು ಮಹಿಳೆಯರು ಕಹಿ ಅನುಭವಗಳನ್ನು ಹೊಂದಿದ್ದಾರೆ. ಅವರೂ ಈಗ ತಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು ಎಂದೂ ರಮಣಿ ಬರೆದಿದ್ದರು.

1995ರಿಂದ 1997ರವರೆಗೆ ಅಕ್ಬರ್ ಜೊತೆ ಏಷ್ಯನ್ ಏಜ್ ಮತ್ತು ಇತರ ಪ್ರಕಟಣೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಫ್ರೀಲಾನ್ಸ್ ಪತ್ರಕರ್ತೆ ಕನಿಕಾ ಗಹ್ಲಾಟ್ ಅವರೂ ಅಕ್ಬರ್ ತನ್ನನ್ನು ಹೋಟೆಲ್ ರೂಮ್‌ಗೆ ಆಹ್ವಾನಿಸಿದ್ದರು,ಆದರೆ ತಾನು ಹೋಗಿರಲಿಲ್ಲ ಎಂದು ಹೇಳಿದ್ದಾರೆ. ತಾನು ಕೆಲಸಕ್ಕೆ ಸೇರುವ ಮುನ್ನವೇ ಅಕ್ಬರ್ ಅವರ ಚಾಳಿಯ ಬಗ್ಗೆ ತನಗೆ ಮುನ್ನೆಚ್ಚರಿಕೆ ಲಭಿಸಿತ್ತು. ಅವರು ಪ್ರತಿಯೊಬ್ಬರಿಗೂ ಹೀಗೆಯೇ ಮಾಡಿದ್ದರು ಎಂದಿದ್ದಾರೆ.

ಹಾಲಿ ಏಷ್ಯನ್ ಏಜ್‌ನ ದಿಲ್ಲಿ ಆವೃತ್ತಿಯ ಸ್ಥಾನಿಕ ಸಂಪಾದಕಿಯಾಗಿರುವ ಸುಪರ್ಣಾ ಶರ್ಮಾ ಅವರು ಪತ್ರಿಕೆಯ ಆರಂಭಿಕ ತಂಡದಲ್ಲಿದ್ದು,1993ರಿಂದ 1996ರವರೆಗೆ ಅಕ್ಬರ್ ಕೈಕೆಳಗೆ ಕೆಲಸ ಮಾಡಿದ್ದರು. ಅದೊಂದು ದಿನ ತಾನು ಪುಟದ ಕೆಲಸದಲ್ಲಿ ನಿರತಳಾಗಿದ್ದಾಗ ಅಕ್ಬರ್ ತನ್ನೊದಿಗೆ ಅನುಚಿತವಾಗಿ ವರ್ತಿಸಿದ್ದರು ಮತ್ತು ತಾನು ಬೊಬ್ಬೆ ಹೊಡೆದಿದ್ದೆ ಎಂದು ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಂತಹ ಇನ್ನೊಂದೆರಡೂ ಘಟನೆಗಳನ್ನೂ ಅವರು ಉಲ್ಲೇಖಿಸಿದ್ದಾರೆ. ಇಂತಹುದು ಮಾಮೂಲಿಯಾಗಿತ್ತು. ಅವರು ಯಾರನ್ನೂ ಬಿಟ್ಟಿರಲಿಲ್ಲ ಮತ್ತು ಆ ದಿನಗಳಲ್ಲಿ ದೂರು ನೀಡಲು ಯಾವುದೇ ಸಮಿತಿಗಳೂ ಇರಲಿಲ್ಲ ಎಂದಿದ್ದಾರೆ.

1997ರಲ್ಲಿ ಲೇಖಕಿ ಶುಮಾ ರಹಾ ಅವರನ್ನು ಏಷ್ಯನ್ ಏಜ್‌ನಲ್ಲಿ ಉದ್ಯೋಗದ ಸಂದರ್ಶನಕ್ಕಾಗಿ ಅಕ್ಬರ್ ಅವರು ಕೋಲ್ಕತಾದ ತಾಜ್ ಬೆಂಗಾಲ್ ಹೋಟೆಲ್‌ಗೆ ಆಹ್ವಾನಿಸಿದ್ದರು. ಸಂದರ್ಶನದ ವೇಳೆ ಅಕ್ಬರ್ ಹಾಸಿಗೆಯ ಮೆಲೆ ಕುಳಿತಿರಬೇಕಾದ್ದರಿಂದ ರಹಾಗೆ ತುಂಬ ಮುಜುಗರವಾಗಿತ್ತು. ನಂತರ ‘ಡ್ರಿಂಕ್ಸ್’ಗೂ ಕಂಪನಿ ಕೊಡುವಂತೆ ಅಕ್ಬರ್ ಆಹ್ವಾನಿಸಿದ್ದು,ಇದು ತುಂಬ ಹಿಂಜರಿಕೆಯನ್ನುಂಟು ಮಾಡಿತ್ತು ಎಂದಿರುವ ರಹಾ,ಇದೇ ಕಾರಣದಿಂದ ತನಗೆ ನೇಮಕಾತಿಯಾಗಿದ್ದರೂ ತಿರಸ್ಕರಿಸಿದ್ದೆ ಎಂದಿದ್ದಾರೆ. ರಹಾ ಈ ವಿಷಯವನ್ನು ಆಂಗ್ಲ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಪತ್ರಕರ್ತೆ ಪ್ರೇರಣಾ ಸಿಂಗ್ ಬಿಂದ್ರಾ ಅವರೂ,ರಾತ್ರಿ ಪತ್ರಿಕೆಯ ಕೆಲಸ ಮುಗಿದ ಬಳಿಕ ಹೋಟೆಲ್ ರೂಮ್‌ಗೆ ಬರುವಂತೆ ‘ಸಂಪಾದಕರು’ ಆಹ್ವಾನಿಸಿದ್ದರು ಮತ್ತು ತಾನು ನಿರಾಕರಿಸಿದ ಬಳಿಕ ತನಗೆ ಉದ್ಯೋಗದ ಸ್ಥಳದಲ್ಲಿ ಹಲವಾರು ಕಿರುಕುಳಗಳನ್ನು ನೀಡಿದ್ದರು ಎಂದು ಅಕ್ಬರ್ ಅವರನ್ನು ಹೆಸರಿಸದೆ ಟ.7ರಂದು ಟ್ವೀಟ್ ಮಾಡಿದ್ದರು. ಸೋಮವಾರ ಇನ್ನೊಂದು ಟ್ವೀಟ್‌ನಲ್ಲಿ ಆ ಸಂಪಾದಕರು ಅಕ್ಬರ್ ಆಗಿದ್ದರು ಎನ್ನುವುದನ್ನು ಬಹಿರಂಗಗೊಳಿಸಿದ್ದಾರೆ.

ಇನ್ನೋರ್ವ ಪತ್ರಕರ್ತೆ ಶುತಪಾ ಪಾಲ್ ಅವರೂ ಮಂಗಳವಾರ ರಮಣಿಯವರ ಟ್ವೀಟ್‌ನ್ನು ಮರುಟ್ವೀಟ್ ಮಾಡಿ ಅಕ್ಬರ್ ಚಾಳಿಯನ್ನು ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News