ರಫೆಲ್ ಒಪ್ಪಂದಕ್ಕೆ ರಿಲಯನ್ಸ್ ಡಿಫೆನ್ಸ್‌ ‘ಕಡ್ಡಾಯದ ಆಯ್ಕೆ’ಯಾಗಿತ್ತು: ಡಸಾಲ್ಟ್ ದಾಖಲೆಗಳಿಂದ ಬಹಿರಂಗ

Update: 2018-10-10 17:28 GMT

 ಹೊಸದಿಲ್ಲಿ,ಅ.10: ಫ್ರಾನ್ಸ್‌ನಿಂದ 58,000 ಕೋ.ರೂ.ಗಳ ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನಗಳ ಖರೀದಿ ಕುರಿತ ವಿವಾದದ ಬೆಂಕಿಗೆ ಈ ವಿಮಾನಗಳನ್ನು ತಯಾರಿಸುವ ಡಸಾಲ್ಟ್ ಏವಿಯೇಷನ್‌ನ ಆಂತರಿಕ ದಾಖಲೆಯೊಂದು ತುಪ್ಪ ಸುರಿದಿದೆ. ಒಪ್ಪಂದದಲ್ಲಿ ಡಸಾಲ್ಟ್ ಭಾರತದಲ್ಲಿ ತನ್ನ ದೇಶಿಯ ಪಾಲುದಾರನಾಗಿ ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್‌ನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು ಎನ್ನುವುದನ್ನು ತೋರಿಸುವ ದಾಖಲೆ ತನ್ನ ಬಳಿಯಿದೆ ಎಂದು ಫ್ರಾನ್ಸ್‌ನ ಇನ್‌ವೆಸ್ಟಿಗೇಟಿವ್ ಜರ್ನಲ್ ಮೀಡಿಯಾಪಾರ್ಟ್ ವರದಿ ಮಾಡಿದೆ.

ಕಳೆದ ತಿಂಗಳು ಮಾಜಿ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರು ಒಪ್ಪಂದದಲ್ಲಿ ರಿಲಯನ್ಸ್‌ನ್ನು ದೇಶಿ ಪಾಲುದಾರನಾಗಿ ಭಾರತ ಸರಕಾರವೇ ಸೂಚಿಸಿತ್ತು ಮತ್ತು ಫ್ರಾನ್ಸ್ ಬಳಿ ಯಾವುದೇ ಆಯ್ಕೆಯಿರಲಿಲ್ಲ ಎಂದು ಮೀಡಿಯಾಪಾರ್ಟ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ ಬಳಿಕ ಸಮಜಾಯಿಷಿ ನೀಡಿದ್ದ ಡಸಾಲ್ಟ್,ರಿಲಯನ್ಸ್ ಡಿಫೆನ್ಸ್‌ನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರ ತನ್ನ ಸ್ವಂತದ್ದಾಗಿತ್ತು ಎಂದು ಹೇಳಿತ್ತು.

ಒಲಾಂಡ್ ಹೇಳಿಕೆಯ ಬಳಿಕ ರಫೇಲ್ ಒಪ್ಪಂದದ ಕುರಿತು ರಾಜಕೀಯ ಕಚ್ಚಾಟ ತಾರಕಕ್ಕೇರಿದೆ. ಅನಿಲ್ ಅಂಬಾನಿಯ ಲಾಭಕ್ಕಾಗಿಯೇ ಸರಕಾರವು ಅಷ್ಟೇನೂ ಅನುಕೂಲವಲ್ಲದ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಪ್ರತಿಪಕ್ಷ ಆರೋಪಿಸಿದೆ. ಉಭಯ ಸರಕಾರಗಳು ಮತ್ತು ಅಂಬಾನಿ ಈ ಆರೋಪವನ್ನು ತಿರಸ್ಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News