ಸನಾತನ ಸಂಸ್ಥೆಯನ್ನು ಬಚಾವ್ ಮಾಡಿದ್ದು ರಾಜಕೀಯ ಒತ್ತಡ!

Update: 2018-10-10 18:34 GMT

‘‘ಇಲ್ಲಿ ರಾಜಕೀಯ ಒತ್ತಡವಿದೆ. ರಾಜಕೀಯ ಒತ್ತಡ ಇಲ್ಲದಿದ್ದರೆ, ಇದು ಬಹಳಷ್ಟು ಹಿಂದೆಯೇ ನಿಷೇಧಿತ ಸಂಘಟನೆಯಾಗುತ್ತಿತ್ತು’’ ಎಂದು ಸನಾತನ ಸಂಸ್ಥೆಯ ಕೇಂದ್ರ ಕಚೇರಿ ಇರುವ ಪೋಂಡಾದ ಠಾಣಾಧಿಕಾರಿಯಾಗಿದ್ದ ಸಿ. ಎಲ್. ಪಾಟೀಲ್ ಹೇಳುತ್ತಾರೆ. ಸಂಘಟನೆಯನ್ನು ನಿಷೇಧಿಸುವಂತೆ ತಾವೇ ನೀಡಿದ್ದ ಶಿಫಾರಸು ಕ್ರಮೇಣ ಹೇಗೆ ತಿರಸ್ಕೃತವಾಯಿತು ಎನ್ನುವುದನ್ನು ಅವರು ಮೆಲುಕು ಹಾಕುತ್ತಾರೆ.

ಪತ್ರಕರ್ತೆ ಗೌರಿ ಲಂಕೇಶ್, ಚಿಂತಕರಾದ ಗೋವಿಂದ ಪನ್ಸಾರೆ, ಎಂ. ಎಂ. ಕಲಬುರ್ಗಿ ಮತ್ತು ನರೇಂದ್ರ ದಾಭೋಲ್ಕರ್ ಇಂದಿಗೂ ಇರುತ್ತಿದ್ದರು. ಒಂಬತ್ತು ವರ್ಷಗಳ ಹಿಂದೆಯೇ ರಾಜಕೀಯ ಒತ್ತಡದಿಂದಾಗಿ ನಿಷೇಧದಿಂದ ಬಚಾವ್ ಆಗಿ ಸನಾತನ ಸಂಸ್ಥೆ ಉಳಿದುಕೊಂಡಿರುವುದರಿಂದ ಈ ನಾಲ್ಕು ಮಂದಿಯ ಹತ್ಯೆಯಾಗಿದೆ. ಗೋವಾ ಮೂಲದ ಈ ಸಂಸ್ಥೆಯ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಇಂಡಿಯಾ ಟಿವಿಗೆ ಈ ವಿಷಯ ತಿಳಿಸಿದ್ದಾರೆ.

2009ರಲ್ಲಿ ಸನಾತನ ಸಂಸ್ಥೆಯ ಸಾಧಕರು ಎನ್ನಲಾದ ಇಬ್ಬರು ಮರ್ಮಗೋವಾದಲ್ಲಿ ಅಳವಡಿಸುತ್ತಿದ್ದ ಬಾಂಬ್ ಅವಧಿಪೂರ್ವವಾಗಿ ಸ್ಫೋಟವಾದ ಘಟನೆಯಲ್ಲಿ ಬಲಿಯಾಗಿದ್ದರು. ದೀಪಾವಳಿ ಪೂರ್ವದಲ್ಲಿ ಬರುವ ನರಕಾಸುರ ಹಬ್ಬದ ವೇಳೆ ಈ ದಾಳಿ ನಡೆಸಲು ಉದ್ದೇಶಿಸಲಾಗಿತ್ತು ಹಾಗೂ ಈ ಮೂಲಕ ಕೋಮು ಸಂಘರ್ಷ ಹುಟ್ಟುಹಾಕುವ ಯೋಜನೆ ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಮರ್ಮಗೋವಾ ಸ್ಫೋಟದಲ್ಲಿ ಸನಾತನ ಸಂಸ್ಥೆಯ ಕೈವಾಡವಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಹೇಳುವಂತೆ, ರಾಜಕೀಯ ಒತ್ತಡದಿಂದಾಗಿ ಈ ತನಿಖೆಗೆ ತಡೆ ಉಂಟಾಗಿದೆ.
‘‘ಇಲ್ಲಿ ರಾಜಕೀಯ ಒತ್ತಡವಿದೆ. ರಾಜಕೀಯ ಒತ್ತಡ ಇಲ್ಲದಿದ್ದರೆ, ಇದು ಬಹಳಷ್ಟು ಹಿಂದೆಯೇ ನಿಷೇಧಿತ ಸಂಘಟನೆಯಾಗುತ್ತಿತ್ತು’’ ಎಂದು ಸನಾತನ ಸಂಸ್ಥೆಯ ಕೇಂದ್ರ ಕಚೇರಿ ಇರುವ ಪೋಂಡಾದ ಠಾಣಾಧಿಕಾರಿಯಾಗಿದ್ದ ಸಿ. ಎಲ್. ಪಾಟೀಲ್ ಹೇಳುತ್ತಾರೆ. ಸಂಘಟನೆಯನ್ನು ನಿಷೇಧಿಸುವಂತೆ ತಾವೇ ನೀಡಿದ್ದ ಶಿಫಾರಸು ಕ್ರಮೇಣ ಹೇಗೆ ತಿರಸ್ಕೃತವಾಯಿತು ಎನ್ನುವುದನ್ನು ಅವರು ಮೆಲುಕು ಹಾಕುತ್ತಾರೆ.
‘‘ಈ ಸಂಘಟನೆಯನ್ನು ನಿಷೇಧಿಸುವ ಕಡತವನ್ನು ನೀವು ಏಕೆ ಸಿದ್ಧಪಡಿಸಿದಿರಿ? ಯಾವ ಆಧಾರದಲ್ಲಿ?’’ ಎಂದು ಇಂಡಿಯಾ ಟುಡೇ ಟಿವಿಯ ತನಿಖಾ ವರದಿಗಾರ ಪ್ರಶ್ನಿಸಿದರು.
‘‘ಮರ್ಮಗೋವಾದಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ.. ಇತರ ಹಲವು ಘಟನೆಗಳೂ ನಡೆದಿವೆ...ಇವರ ವಿರುದ್ಧ ಮಹಾರಾಷ್ಟ್ರದಲ್ಲಿ 7-9 ಪ್ರಕರಣಗಳಿವೆ’’ ಎಂದು ವಿವರಿಸಿದರು. ಕೋಮು ಸಾಮರಸ್ಯವನ್ನು ಕದಡುವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ನಾನು ಆ ಕಡತದಲ್ಲಿ ಶಿಫಾರಸು ಮಾಡಿದ್ದೆ. ಮಹಾರಾಷ್ಟ್ರದಲ್ಲಿ ಈ ಸಂಘಟನೆ ವಿರುದ್ಧ ಇರುವ ಪ್ರಕರಣಗಳನ್ನು ಕೂಡಾ ಉಲ್ಲೇಖಿಸಿದ್ದೆ ಎಂದು ಪಾಟೀಲ್ ಹೇಳುತ್ತಾರೆ. ಆದರೆ ಈ ಶಿಫಾರಸಿನ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳದೇ ಶಿಫಾರಸು ವಾಪಸ್ ಬಂತು ಎಂದು ಅವರು ವಿಷಾದಿಸುತ್ತಾರೆ.
‘ಗೋವಾ ಶಾಂತಿಯುತ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಇಲ್ಲಾದರೂ ಇದನ್ನು ನಿಷೇಧಿಸಬೇಕು ಎಂದು ನಿರ್ದಿಷ್ಟವಾಗಿ ಶಿಫಾರಸು ಮಾಡಿದ್ದೆ. ನನ್ನ ಶಿಫಾರಸನ್ನು ಉಪ ಪೊಲೀಸ್ ಅಧೀಕ್ಷಕರಿಗೆ ಕಳುಹಿಸಿದ್ದೆ. ಅವರು ಅದನ್ನು ಡಿಜಿಪಿಗೆ ಕಳುಹಿಸಿದ್ದರು. ಆದರೆ ಅದು ವಾಪಸಾಯಿತು’’


‘‘ಅದು ಎಲ್ಲಿಂದ ವಾಪಸ್ ಬಂತು?’’ ಎಂದು ವರದಿಗಾರ ಪ್ರಶ್ನಿಸಿದರು.
‘‘ಅದು ಹಿಂದೆ ಬಂದು ಕೊನೆಗೊಂದು ದಿನ ಅಧಿಕಾರಿಯೊಬ್ಬರು ಬಂದು ಇದನ್ನು ಮುಂದೆಂದೂ ಚಲಾವಣೆ ಮಾಡದಂತೆ ಸೂಚಿಸಿದರು’’ ಎಂದು ಪಾಟೀಲ್ ಹೇಳುತ್ತಾರೆ.ಗೋವಾದ ಪ್ರಭಾವಿ ರಾಜಕಾರಣಿಯೊಬ್ಬರ ಒತ್ತಡದಿಂದಾಗಿ ಹೀಗಾಯಿತು ಎಂದು ಅವರು ಸ್ಪಷ್ಟಪಡಿಸಿದ್ದರು.
‘‘ಇದು ತೀರಾ ರಾಜಕೀಯ ವಿಚಾರ. ಪೊಲೀಸರೂ ಸೇರಿದಂತೆ ಯಾರೂ ಸನಾತನ ಸಂಸ್ಥೆಯ ಒಳಕ್ಕೆ ಹೋಗುವಂತಿಲ್ಲ. ಅಲ್ಲಿ ಯಾವ ವಿಚಾರಣೆಯನ್ನೂ ನಡೆಸುವಂತಿಲ್ಲ. ಧರ್ಮದ ಹೆಸರಿನಲ್ಲಿ ಪ್ರತಿಯೊಬ್ಬರೂ ಮೌನವಾಗಿರುತ್ತಾರೆ. ಪ್ರತಿಯೊಬ್ಬರೂ ದೇವರ ಬಗ್ಗೆ ಭಯ ಹೊಂದಿದ್ದಾರೆ. ಸಚಿವಾಲಯ ಹಾಗೂ ಕಾನೂನು ಜಾರಿ ಸಂಸ್ಥೆ ಕೂಡಾ ಇದರಲ್ಲಿ ಶಾಮೀಲು’’ ಎಂದು ಸ್ಪಷ್ಟಪಡಿಸಿದರು.
ಗೋವಾದ ಆಡಳಿತಾರೂಢ ಮೈತ್ರಿಕೂಟದ ಉನ್ನತ ನಾಯಕರೊಬ್ಬರ ಹೆಸರನ್ನು ಪಾಟೀಲ್ ಹೇಳಿದರು. ಆ ಪ್ರಭಾವಿ ವ್ಯಕ್ತಿಯ ಕುಟುಂಬ ಸನಾತನ ಸಂಸ್ಥೆ ಜತೆ ಸಂಬಂಧ ಹೊಂದಿದೆ ಎನ್ನುವುದು ಅವರ ಹೇಳಿಕೆ.
ಸದ್ಯಕ್ಕೆ ಇಂಡಿಯಾ ಟುಡೇ ಟಿವಿ, ಗೋವಾದ ಆಡಳಿತಾರೂಢ ಮೈತ್ರಿಕೂಟದ ಈ ರಾಜಕಾರಣಿಯ ಗುರುತನ್ನು ಬಹಿರಂಗಪಡಿಸಿಲ್ಲ. ಸಂಸ್ಥೆಯ ತನಿಖೆಯಲ್ಲಿ ಆ ನಾಯಕರ ಸಂಭಾವ್ಯ ಪಾತ್ರದ ಬಗ್ಗೆ ಮನೋಹರ್ ಪಾರಿಕ್ಕರ್ ಸರಕಾರದಿಂದ ಸ್ಪಷ್ಟನೆ ದೊರಕದ ಹಿನ್ನೆಲೆಯಲ್ಲಿ ಅವರ ಹೆಸರು ಬಹಿರಂಗಪಡಿಸಿಲ್ಲ.
‘‘ಪ್ರಭಾವಿ ಮುಖಂಡರ ಪತ್ನಿ ಇಲ್ಲಿ ವ್ಯವಸ್ಥಾಪಕಿ. ಅವರೇ ಅದನ್ನು ನಿರ್ವಹಿಸುತ್ತಾರೆ. ಅವರ ಅತ್ತಿಗೆ ಕೂಡಾ ಇಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ’’ ಎಂದು ಪಾಟೀಲ್ ವಿವರಿಸಿದರು.
ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೆರಡು ಮಂದಿ ಶಂಕಿತರನ್ನು ಬಂಧಿಸಲಾಗಿದೆ. ಅಮಿತ್ ದಿಗ್ವೇಕರ್ ಅವರಲ್ಲಿ ಒಬ್ಬ. ಈತನ ಮತದಾರರ ಗುರುತಿನ ಚೀಟಿ ಹಾಗೂ ಬ್ಯಾಂಕ್ ರಸೀದಿ ಇಂಡಿಯಾ ಟುಡೇ ಟಿವಿಗೆ ಲಭ್ಯವಾಗಿದ್ದು, ಗೋವಾದ ಪೋಂಡಾದಲ್ಲಿರುವ ಸನಾತನ ಸಂಸ್ಥೆಯ ಕೇಂದ್ರ ಕಚೇರಿಯನ್ನು ಈತನ ವಾಸಸ್ಥಳದ ವಿಳಾಸವಾಗಿ ನೀಡಲಾಗಿದೆ.


ಆದರೆ ಮರ್ಮಗೋವಾ ಸ್ಫೋಟದ ಆರೋಪಿ, ಬಾಂಬ್ ಅಳವಡಿಸುವ ವೇಳೆ ಮೃತಪಟ್ಟಿದ್ದ ಮಲ್ಗೊಂಡ ಪಾಟೀಲ್ ಜತೆಗಿನ ದಿಗ್ವೇಕರ್ ನಂಟನ್ನು ಪಾಟೀಲ್ ಬಿಚ್ಚಿಟ್ಟಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಹಾಗೂ ಮಲ್ಗೊಂಡ ಪಾಟೀಲ್ ಇಬ್ಬರೂ ಸಂಸ್ಥೆಯ ಕೇಂದ್ರ ಕಚೇರಿಗೆ ಹೊಂದಿಕೊಂಡಿರುವ ಒಂದೇ ಕೊಠಡಿಯಲ್ಲಿದ್ದರು. ಇದು ಸನಾತನ ಸಂಸ್ಥೆ ಸಂಸ್ಥಾಪಕ ಜಯಂತ್ ಅಠಾವಳೆ ಅವರ ಕೊಠಡಿಯ ನಂತರದ ಕೊಠಡಿ ಎಂದು ವಿವರಿಸಿದರು.
‘‘ಇತ್ತೀಚೆಗೆ ಬಂಧಿತರಾದ ದಿಗ್ವೇಕರ್, ಅವರು ಅಠಾವಳೆ ಕೊಠಡಿಯ ಪಕ್ಕದ ಕೊಠಡಿಯಲ್ಲಿ ವಾಸವಿದ್ದರು. ತೀರಾ ತೆಳ್ಳಗಿನ ಗೋಡೆ ಹಾಗೂ ಪ್ಯಾಸೇಜ್‌ನಿಂದ ಈ ಕೊಠಡಿ ಪ್ರತ್ಯೇಕಿಸಲ್ಪಟ್ಟಿದೆ. ಇವರನ್ನು ಯಾರು ಬ್ರೈನ್‌ವಾಶ್ ಮಾಡುತ್ತಾರೆ? ಅವರು ಕೊಠಡಿಯಲ್ಲೇ ಇರುವ ವ್ಯಕ್ತಿ. ಅವರನ್ನು ಏಕೆ ತನಿಖೆಗಾಗಿ ವಶಕ್ಕೆ ಪಡೆದಿರಲಿಲ್ಲ? ಅವರನ್ನು ಏಕೆ ಬಿಟ್ಟುಬಿಟ್ಟರು? ಅವರ ಪಾತ್ರವನ್ನು ಏಕೆ ದೃಢೀಕರಿಸಲಿಲ್ಲ? ಆತನನ್ನು ಆಗಲೇ ಅಲ್ಲೇ ಬಂಧಿಸಿದ್ದರೆ, ಗೌರಿ ಲಂಕೇಶ್ ಹತ್ಯೆಗೆ ಆತ ತೆರಳುತ್ತಿರಲಿಲ್ಲ. ಕನಿಷ್ಠ ಈ ಹತ್ಯೆಗಳಾದರೂ ನಡೆಯುತ್ತಿರಲಿಲ್ಲ’’ ಎನ್ನುವುದು ಪಾಟೀಲರ ಕಳಕಳಿ.


‘‘ನಾವು ಪ್ರಸ್ತಾವನೆ ಕಳುಹಿಸಿದ್ದೆವು. 2009-10ರಲ್ಲಿ ಇದನ್ನು ನಿಷೇಧಿಸಿದ್ದರೆ, ಕನಿಷ್ಠ 4-5 ಹತ್ಯೆಗಳು ನಡೆಯುತ್ತಿರಲಿಲ್ಲ’’
ಕಾನೂನುಘಾತಕರ ಜತೆ ಸನಾತನ ಸಂಸ್ಥೆ ಹೊಂದಿರುವ ನಂಟಿನ ಬಗ್ಗೆ ಎಟಿಎಸ್ ಇನ್‌ಸ್ಪೆಕ್ಟರ್ ಸಲೀಂ ಶೇಖ್ ಕೂಡಾ ವಿವರ ನೀಡಿದ್ದಾರೆ. ‘‘ಸನಾತನ ಸಂಸ್ಥೆಯ ನಿಷೇಧದ ವಿರುದ್ಧ ಪ್ರಭಾವಿ ರಾಜಕಾರಣಿಯೊಬ್ಬರ ಕುಟುಂಬ ತಡೆಗೋಡೆಯಾಗಿ ನಿಂತಿತು’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘‘ಇಲ್ಲಿ ಅವರ ಎಲ್ಲ ಚಟುವಟಿಕೆಗಳೂ ಭೂಗತವಾಗಿ ನಡೆಯುತ್ತವೆ. ಆದರೆ ಅವರು ಸಾಕಷ್ಟು ರಾಜಕೀಯ ಬೆಂಬಲ ಹೊಂದಿದ್ದಾರೆ. ಪ್ರಭಾವಿ ರಾಜಕೀಯ ಮುಖಂಡರ ಪತ್ನಿ ಸಂಸ್ಥೆಯ ಸಕ್ರಿಯ ಸದಸ್ಯೆ. ಆಕೆ ಅತಿಯಾಗಿ ಸಕ್ರಿಯ. ಈಗಷ್ಟೇ ಅಲ್ಲ; ಸುದೀರ್ಘ ಕಾಲದಿಂದಲೂ ಕೂಡಾ. ಈ ಸಂಘಟನೆಯ ನಿಷೇಧಕ್ಕೆ ನಾವು ಪ್ರಸ್ತಾವನೆ ಕಳುಹಿಸಿದ್ದೆವು. ಅದು ತಿರಸ್ಕೃತವಾಗಿದೆ. ಅದು ಸರಕಾರಕ್ಕೆ ತಲುಪಲೇ ಇಲ್ಲ’’ ಎಂದು ಶೇಖ್ ಹೇಳುತ್ತಾರೆ.
ಮರ್ಮಗೋವಾ ಸ್ಫೋಟದ ಯೋಜನೆ ರೂಪಿಸುವಲ್ಲಿ ಶಾಮೀಲಾದ ಹಲವು ಮಂದಿ ಸಾಧಕರು ಇದೀಗ ತಲೆ ಮರೆಸಿಕೊಂಡಿದ್ದು, ಇವರು 2017ರಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ, 2015ರಲ್ಲಿ ನಡೆದ ಪನ್ಸಾರೆ ಮತ್ತು ಕಲಬುರ್ಗಿ ಹತ್ಯೆ ಹಾಗೂ 2013ರಲ್ಲಿ ನಡೆದ ದಾಭೋಲ್ಕರ್ ಹತ್ಯೆಯಲ್ಲಿ ಕೂಡಾ ಶಾಮೀಲಾಗಿದ್ದಾರೆ ಎಂಬ ಶಂಕೆಯನ್ನು ಸಿಬಿಐ ತನಿಖಾಧಿಕಾರಿಗಳು ವ್ಯಕ್ತಪಡಿಸುತ್ತಾರೆ.
ಕೃಪೆ: indiatoday.in

Writer - ಅಮಿತ್ ಕುಮಾರ್ ಚೌಧುರಿ

contributor

Editor - ಅಮಿತ್ ಕುಮಾರ್ ಚೌಧುರಿ

contributor

Similar News

ಜಗದಗಲ
ಜಗ ದಗಲ