ಖಾಲಿ ಉಳಿದ ಸರಕಾರಿ ಹುದ್ದೆಗಳ ಭರ್ತಿ ಯಾವಾಗ?

Update: 2018-10-11 04:16 GMT

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು ನಾಲ್ಕೂವರೆ ವರ್ಷಗಳಾದವು. ಈ ನಾಲ್ಕೂವರೆ ವರ್ಷಗಳಲ್ಲಿ ಇಪ್ಪತ್ತು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಈ ಸರಕಾರದಿಂದ ಸಾಧ್ಯವಾಗಲಿಲ್ಲ. ಇಂಥ ಸನ್ನಿವೇಶದಲ್ಲಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಲಸೆಗಾರರ ಮೇಲೆ ಕಿಡಿಕಾರಿದ್ದಾರೆ. ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ ನುಸುಳುಕೋರರು ಯುವಕರ ಉದ್ಯೋಗ ಕಸಿಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಕೈಲಾಗದವ ಮೈಯೆಲ್ಲ ಪರಚಿಕೊಂಡ’ ಎಂಬಂತೆ ತಮ್ಮ ಸರಕಾರದ ವೈಫಲ್ಯ ಮುಚ್ಚಿಕೊಳ್ಳಲು ಆಡಬಾರದ ಮಾತನ್ನು ಶಾ ಆಡಿದ್ದಾರೆ. ಅಷ್ಟೇ ಅಲ್ಲ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ದೇಶದಲ್ಲಿರುವ ಎಲ್ಲ ಅಕ್ರಮ ನುಸುಳುಕೋರರನ್ನು ಹೊರದಬ್ಬುವುದಾಗಿ ಅವರು ಹೇಳಿದ್ದರು. ದೇಶದಲ್ಲಿ ಒಟ್ಟು ನೂರು ಕೋಟಿ ಅಕ್ರಮ ನುಸುಳುಕೋರರಿದ್ದಾರೆಂದು ಅವರು ಹೇಳಿದ್ದರು. ಅಂದರೆ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಈ ದೇಶದ ನೂರು ಕೋಟಿ ಮಂದಿ ಜಾಗಖಾಲಿ ಮಾಡಬೇಕಾಗುತ್ತದೆ.

ಅಸ್ಸಾಮ್‌ನಲ್ಲಿ ಅಕ್ರಮ ನುಸುಳುಕೋರರೆಂದು ನಲವತ್ತು ಲಕ್ಷ ಜನರನ್ನು ಅತಂತ್ರ ಮಾಡಲು ಈ ಸರಕಾರ ಕೆಲ ತಿಂಗಳ ಹಿಂದೆ ಪಟ್ಟಿ ಮಾಡಿತ್ತು. ಅದರಲ್ಲಿ ಪಾಸ್‌ಪೋರ್ಟ್, ಆಧಾರ್‌ಕಾರ್ಡ್, ಬ್ಯಾಂಕ್ ಖಾತೆ, ಮತದಾರರ ಪಟ್ಟಿಯಲ್ಲಿ ಹೆಸರು ಮುಂತಾದ ಅಧಿಕೃತ ದಾಖಲೆ ಹೊಂದಿದವರನ್ನು, ಅಸ್ಸಾಮ್‌ನಲ್ಲೇ ಹುಟ್ಟಿ ಬೆಳೆದವರನ್ನು ಕೂಡಾ ಅಕ್ರಮ ವಲಸೆಗಾರರ ಪಟ್ಟಿಗೆ ಸೇರಿಸಲಾಗಿತ್ತು. ಒಂದೇ ಮನೆಯ ತಂದೆ ವಲಸಿಗ, ಮಗ ಸ್ಥಳೀಯ ಎಂದು ದಾಖಲಿಸಲಾಗಿತ್ತು. ಹೀಗಾಗಿ ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ನೂರು ಕೋಟಿ ಜನರನ್ನು ಹೊರಗೆ ಹಾಕಿದ ನಂತರ ಉದ್ಯೋಗ ಸೃಷ್ಟಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದುಕೊಂಡಿರಬಹುದು. ಭವಿಷ್ಯದ ಮಾತು ಹಾಗಿರಲಿ, ಇದುವರೆಗೆ ಪ್ರಧಾನಿ ಮೋದಿ ಭರವಸೆ ನೀಡಿದಂತೆ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಏಕೆ ಸೃಷ್ಟಿಸಲಿಲ್ಲ.? ಎರಡು ಕೋಟಿ ಬೇಡ ಈ ನಾಲ್ಕು ವರ್ಷಗಳಲ್ಲಿ ಹತ್ತು ಲಕ್ಷ ಉದ್ಯೋಗಗಳನ್ನಾದರೂ ಸೃಷ್ಟಿಸಲಾಗಿದೆಯೇ? ಏಕೆ ಇದು ಸಾಧ್ಯವಾಗಲಿಲ್ಲ. ಜನತೆಗೆ ನೀಡಿದ ಯಾವ ಭರವಸೆಯನ್ನೂ ಈ ಸರಕಾರ ಈಡೇರಿಸಿಲ್ಲ.

ವಿದೇಶದಿಂದ ಕಪ್ಪು ಹಣ ಸ್ವದೇಶಕ್ಕೆ ಬರಲಿಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿಲ್ಲ. ಬ್ಯಾಂಕುಗಳಿಂದ ಕೋಟ್ಯಂತರ ರೂ. ಲೂಟಿ ಮಾಡಿ ವಿದೇಶಕ್ಕೆ ಹಾರುವವರನ್ನು ತಡೆಯಲಿಲ್ಲ. ಗುಂಪು ಹತ್ಯೆಗಳನ್ನು ತಡೆಯಲಿಲ್ಲ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸರಕಾರವೇ ಕೋಮು ದ್ವೇಷಕ್ಕೆ ಪ್ರಚೋದನೆ ನೀಡುತ್ತಿದೆ. ಹೊಸ ಉದ್ಯೋಗ ಸೃಷ್ಟಿ ಒತ್ತಟ್ಟಿಗೆ ಇರಲಿ ಖಾಲಿ ಇರುವ ಸರಕಾರದ ಹುದ್ದೆಗಳನ್ನು ಭರ್ತಿ ಮಾಡಲು ಈ ಸರಕಾರದಿಂದ ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರಗಳಲ್ಲಿ 24 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ನೇಮಕಾತಿ ತುರ್ತಾಗಿ ನಡೆಯಬೇಕಾಗಿದೆ. ಖಾಲಿ ಉಳಿದ 24 ಲಕ್ಷ ಹುದ್ದೆಗಳಲ್ಲಿ ಶಿಕ್ಷಣ ಇಲಾಖೆಯಲ್ಲಿಯೇ ಹತ್ತು ಲಕ್ಷ ಹುದ್ದೆಗಳು ಖಾಲಿ ಉಳಿದಿವೆ. ಪೊಲೀಸ್ ಇಲಾಖೆಯಲ್ಲಿ ಆರು ಲಕ್ಷ ಹುದ್ದೆಗಳು ಭರ್ತಿಯಾಗಿಲ್ಲ. ಉಳಿದಂತೆ ರೈಲ್ವೆ ಇಲಾಖೆಯಲ್ಲಿ ಮೂರು ಲಕ್ಷ, ಅಂಗನವಾಡಿಗಳಲ್ಲಿ ಎರಡೂವರೆ ಲಕ್ಷ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಹುದ್ದೆಗಳು ಖಾಲಿ ಉಳಿದಿವೆ. ಅದೇ ರೀತಿ ಸಶಸ್ತ್ರ ಮೀಸಲು ಪಡೆಯಲ್ಲಿ ಅರವತ್ತು ಸಾವಿರ ಹುದ್ದೆಗಳು ಭರ್ತಿಯಾಗಿಲ್ಲ. ಅತ್ಯಂತ ಅಗತ್ಯವಾದ ಸೇನಾ ಪಡೆಯ ವಿವಿಧ ವಿಭಾಗಗಳಲ್ಲಿ ಖಾಲಿಯಾದ ಹುದ್ದೆಗಳನ್ನು ತುಂಬಿಲ್ಲ. ಇನ್ನೊಂದೆಡೆ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪದವಿ ಪಡೆದವರೂ ಚಪರಾಸಿ ಹುದ್ದೆಗಳಿಗೆ ಅರ್ಜಿ ಹಾಕುತ್ತಿದ್ದಾರೆ.

ದೇಶದಲ್ಲಿ ದುಡಿಯುವ ಕೈಗಳು ಸಾಕಷ್ಟಿವೆ. ಆದರೆ ಅದಕ್ಕನುಗುಣವಾಗಿ ಉದ್ಯೋಗಗಳಿಲ್ಲ. ಉದ್ಯೋಗ ಒದಗಿಸಬೇಕಾದ ಸರಕಾರ ಕೈ ಚೆಲ್ಲಿ ಕುಳಿತಿದೆ. ಸರಕಾರದ ಸೂತ್ರ ಹಿಡಿದ ಪಕ್ಷದ ಅಧ್ಯಕ್ಷ ವಲಸೆಗಾರರ ಬಗ್ಗೆ ಮಾತಾಡಿ ವೈಫಲ್ಯ ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದರೆ, ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದಾಗಿ ನಮ್ಮ ಪ್ರಧಾನಿ ಹೇಳುತ್ತಲೇ ಇದ್ದಾರೆ. ಅದಕ್ಕೆ ಅವರ ಭಕ್ತ ಪಟಾಲಂ ಉೇ, ಉೇ ಅನ್ನುತ್ತಲೇ ಇದೆ. ಆದರೆ ವಾಸ್ತವ ಪರಿಸ್ಥಿತಿ ಮಾತ್ರ ಭಿನ್ನವಾಗಿದೆ. ಭಾರತದ ಭವಿಷ್ಯವನ್ನು ಬೆಳಗಬೇಕಾದ ನಾಳಿನ ನಾಗರಿಕರನ್ನು ತಯಾರು ಮಾಡುವ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಇರುವ ಕಡಿಮೆ ಶಿಕ್ಷಕರ ಮೇಲೆ ಅತ್ಯಧಿಕ ಹೊರೆ ಬೀಳುತ್ತಿದೆ. ಹೀಗಾಗಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಸೇವೆ ಸಲ್ಲಿಸಲು ಲಕ್ಷಾಂತರ ಅರ್ಹ ಪದವೀಧರರಿದ್ದರೂ ಸರಕಾರ ನೇಮಕ ಮಾಡುತ್ತಿಲ್ಲ. ಕಾರ್ಪೊರೇಟ್ ಕಂಪೆನಿಗಳಿಗೆ ಸೇವೆ ಸಲ್ಲಿಸಲು ದೇಶದ ಹಿತವನ್ನೇ ಮರೆತ ಈ ಸರಕಾರ ದೇಶದ ಪ್ರಜೆಗಳ ನಡುವೆ ಜಾತಿ ಮತದ ಹೆಸರಲ್ಲಿ ವೈಷಮ್ಯದ ವಿಷಬೀಜ ಬಿತ್ತಲು ಯತ್ನಿಸುತ್ತಿದೆ.

ದೇಶದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಕೂಡ ಹದಗೆಟ್ಟಿದೆ. ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ನಿಂತು ಹೋಗಿದೆ. ಖಾಲಿಯಾಗಿರುವ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಈಗ ಇರುವ ಪೊಲೀಸರ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಅವರ ಕಾರ್ಯಕ್ಷಮತೆ ಕುಗ್ಗುತ್ತಿದೆ. ಅಂಚೆ ಇಲಾಖೆ ಪರಿಸ್ಥಿತಿ ಇನ್ನೂ ಅಧ್ವಾನವಾಗಿದೆ. ಅಲ್ಲಿ ಐವತ್ತಾರು ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಕೆಲಸದ ಒತ್ತಡದಿಂದ ಅಂಚೆ ಸಿಬ್ಬಂದಿ ಬಳಲಿ ಬೆಂಡಾಗುತ್ತಿದ್ದಾರೆ. ಇದರ ಪರಿಣಾಮ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಆಗುತ್ತಿದೆ. ನಿರುದ್ಯೋಗದ ಬಗ್ಗೆ ಪ್ರಶ್ನಿಸಿದರೆ ಪ್ರಧಾನ ಮಂತ್ರಿಗಳು ಯುವಕರಿಗೆ ಪಕೋಡಾ ಮಾರಾಟ ಮಾಡಲು ಬಿಟ್ಟಿ ಉಪದೇಶ ನೀಡುತ್ತಾರೆ. ‘‘ಸರಕಾರದ ಬಳಿ ಉದ್ಯೋಗ ಇಲ್ಲ’’ ಎಂದು ಸಚಿವ ನಿತಿನ್ ಗಡ್ಕರಿ ಹೇಳುತ್ತಾರೆ.

ಇವರಿಬ್ಬರಿಗಿಂತ ಭಿನ್ನವಾಗಿ ‘‘ವಲಸೆಗಾರರೇ ನಿರುದ್ಯೋಗ ಸಮಸ್ಯೆಗೆ ಕಾರಣ’’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳುತ್ತಾರೆ. ಸಂಘ ಪರಿವಾರದ ನಾಯಕರು ಹಿಂದೂ ಹೆಣ್ಣು ಮಕ್ಕಳು ಹೆಚ್ಚು ಮಕ್ಕಳನ್ನು ಹಡೆಯಲು ಕರೆ ನೀಡುತ್ತಾರೆ. ಹುಟ್ಟಿದ ಮಕ್ಕಳಿಗೆ ಉದ್ಯೋಗ ಎಲ್ಲಿದೆ ಎಂದು ಕೇಳಿದರೆ ಇವರ ಬಳಿ ಉತ್ತರವಿಲ್ಲ. ಸರಕಾರದ ಹೊಣೆ ಹೊತ್ತವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಖಾಲಿ ಉಳಿದ ಹುದ್ದೆಗಳಿಗೆ ಒಮ್ಮೆಲೆ ನೇಮಕಾತಿ ಮಾಡಿಕೊಳ್ಳುವುದು ಕಷ್ಟವಾದರೆ ಹಂತ ಹಂತವಾಗಿಯಾದರೂ ಭರ್ತಿ ಮಾಡಿಕೊಳ್ಳಲಿ. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿದಂತಾಗುತ್ತದೆ. ಸರಕಾರದ ಇಲಾಖೆಗಳ ಸೇವೆಯ ಗುಣ ಮಟ್ಟವೂ ಸುಧಾರಿಸುತ್ತದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಅದಕ್ಕಿಂತ ಮೊದಲು ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಸರಕಾರ ಇನ್ನಾದರೂ ಎಚ್ಚೆತ್ತು ಖಾಲಿ ಉಳಿದ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಜೊತೆಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಕಾರ್ಯೋನ್ಮುಖವಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News