ಕಾಳಿ ವಿಗ್ರಹ ಪ್ರತಿಷ್ಠಾಪಿಸಲು ತಡೆ : ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಬೆದರಿಕೆ ಹಾಕಿದ ದಲಿತ ಕುಟುಂಬಗಳು

Update: 2018-10-11 10:38 GMT

ಲಕ್ನೋ,ಅ.11 : ನವರಾತ್ರಿಯ ಮೊದಲ ದಿನವಾದ ಬುಧವಾರದಂದು ಉತ್ತರ ಪ್ರದೇಶದ  ಮಸ್ಸೋರಿ ಗ್ರಾಮದ ಇಂಚೌಲಿ ಎಂಬಲ್ಲಿನ ಶಿವ ದೇವಾಲಯದಲ್ಲಿ ಕಾಳಿ ಮಾತೆಯ ವಿಗ್ರಹವನ್ನು ಪತ್ರಿಷ್ಠಾಪಿಸಲು ಅನುಮತಿಸದೇ ಇರುವುದನ್ನು ವಿರೋಧಿಸಿ ಅಲ್ಲಿನ ಕನಿಷ್ಠ 50 ದಲಿತ ಕುಟುಂಬಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಬೆದರಿಕೆ ಹಾಕಿವೆ.

ದಲಿತ ಕುಟುಂಬಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ನಿವಾಸದೆದುರು ಪ್ರತಿಭಟನೆ ನಡೆಸಿವೆಯಲ್ಲದೆ ಮೂರ್ತಿ ಪ್ರತಿಷ್ಠಾಪಿಸಿದರೆ ಹಲ್ಲೆಗೈಯ್ಯುವುದಾಗಿ ಕೆಲ ಗೂಂಡಾ ಪಡೆಗಳು ಬೆದರಿಕೆ ಹಾಕಿವೆ ಎಂದು ಆರೋಪಿಸಿವೆ.

ತಮಗೆ ಮೂರ್ತಿ ಪ್ರತಿಷ್ಠಾಪಿಸದಂತೆ ತಡೆಯೊಡ್ಡಿರುವ ಕೆಲ ವ್ಯಕ್ತಿಗಳು ದೇವಳವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಹಾಗೂ ಅಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಕಾರುಗಳು ಹಾಗೂ ಟ್ರ್ಯಾಕ್ಟರುಗಳನ್ನೇ ಇರಿಸಿದ್ದಾರೆ, ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಾರಿ) ರಾಮ್ ಚಂದ್ರ ಹೇಳಿದ್ದಾರೆ. ಆದರೆ ಮತಾಂತರಗೊಳ್ಳುವುದಾಗಿ ದಲಿತರು ಬೆದರಿಕೆ ಹಾಕಿರುವ ಬಗ್ಗೆ ತಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News