ಸಂಧಿವಾತದ ಅಪಾಯದ ಬಗ್ಗೆ ನಿಮಗೆ ತಿಳಿದಿರಲಿ

Update: 2018-10-11 12:20 GMT

ಆರ್ಥ್ರಿಟಿಸ್ ಅಥವಾ ಸಂಧಿವಾತ ಮೂಳೆಗಳನ್ನು ಮತ್ತು ಕೀಲುಗಳನ್ನು ಬಾಧಿಸುತ್ತದೆ. ರುಮಟಾಯ್ಡಿ ಆರ್ಥ್ರಿಟಿಸ್(ಆರ್‌ಎ) ಮತ್ತು ಆಸ್ಟಿಯೊ ಆರ್ಥ್ರಿಟಿಸ್ (ಒಎ)ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಎರಡು ವಿಧದ ಸಂಧಿವಾತ ರೋಗಗಳಾಗಿವೆ.

ಸಂಧಿವಾತದ ಅಪಾಯವನ್ನು ಹೆಚ್ಚಿಸುವ ಅಥವಾ ಈಗಾಗಲೇ ಸಂಧಿವಾತದಿಂದ ಬಳಲುತ್ತಿರುವ ರೋಗಿಗಳ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಹಲವಾರು ಕಾರಣಗಳಿವೆ. ಹೀಗಾಗಿ ಈ ಕಾರಣಗಳನ್ನು ತಿಳಿದುಕೊಂಡರೆ ಸಂಧಿವಾತವನ್ನು ನಿರ್ವಹಿಸಲು ನೆರವಾಗುತ್ತದೆ. ಈ ಕಾರಣಗಳ ಪೈಕಿ ಕೆಲವನ್ನು ನೀವು ನಿಯಂತ್ರಿಸಬಹುದಾಗಿದೆ ಮತ್ತು ತನ್ಮೂಲಕ ಸಂಧಿವಾತಕ್ಕೆ ಗುರಿಯಾಗುವ ಅಪಾಯವನ್ನು ತಗ್ಗಿಸಬಹುದಾಗಿದೆ.

►ಅತಿಯಾದ ದೇಹತೂಕ

ಅತಿಯಾದ ದೇಹತೂಕವು ಒಎ ಅನ್ನುಂಟುಮಾಡಬಲ್ಲ ಅತ್ಯಂತ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ಅತಿಯಾದ ದೇಹತೂಕ ಅಥವಾ ಬೊಜ್ಜು ಮಧುಮೇಹ ಮತ್ತು ಹೃದ್ರೋಗದಂತಹ ವಿವಿಧ ಚಯಾಪಚಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ,ಜೊತೆಗೆ ಸಂಧಿವಾತದ ಅಪಾಯವನ್ನೂ ಹೆಚ್ಚಿಸುತ್ತದೆ.

ಭೌತಿಕ ದ್ರವ್ಯರಾಶಿ ಸೂಚಿ ಅಥವಾ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ)ನಲ್ಲಿ ಪ್ರತಿ ಎರಡು ಯೂನಿಟ್(ಐದು ಕೆಜಿ ತೂಕ ಹೆಚ್ಚಳ) ಏರಿಕೆಯಾದರೆ ಕಾಲಿನ ಮಂಡಿಗಳು ಒಎಗೆ ಗುರಿಯಾಗುವ ಅಪಾಯವು ಶೇ.36ರಷ್ಟು ಹೆಚ್ಚಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಬಿಎಂಐ ಹೆಚ್ಚಿದಷ್ಟೂ ಸಂಧಿವಾತದ ಅಪಾಯ ಹೆಚ್ಚುತ್ತಲೇ ಹೋಗುತ್ತದೆ. ಪುರುಷರಲ್ಲಿ 20 ವರ್ಷ ಮತ್ತು ಮಹಿಳೆಯರಲ್ಲಿ 11 ವರ್ಷ ವಯಸ್ಸಿಗೇ ಬಿಎಂಐ ಏರಿಕೆ ಆರಂಭವಾಗಬಹುದು.

ಬೊಜ್ಜು ಶರೀರವು ಕೂಡ ಸಂಧಿವಾತದ ತೀವ್ರತೆಯನ್ನು ಹೆಚ್ಚಿಸುತ್ತದೆ. ಬೊಜ್ಜುದೇಹವನ್ನು ಹೊಂದಿರುವ ಮತ್ತು ಒಎದಿಂದ ಬಳಲುತ್ತಿರುವ ರೋಗಿಗಳಲ್ಲಿ ಕಡಿಮೆ ದೇಹತೂಕ ಹೊಂದಿರುವ ಆದರೆ ಸಂಧಿವಾತದಿಂದ ಬಳಲುತ್ತಿರುವ ರೋಗಿಗಳಿಗೆ ಹೋಲಿಸಿದರೆ ಕೀಲುಗಳ ನಷ್ಟ ತೀವ್ರವಾಗಿರುತ್ತದೆ.

ಹೆಚ್ಚುವರಿ ತೂಕವು ಪೃಷ್ಠಗಳು ಮತ್ತು ಮಂಡಿಗಳಂತಹ ತೂಕವನ್ನು ಭರಿಸುವ ಕೀಲುಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಆರೋಗ್ಯಕರವಾದ ದೇಹತೂಕವನ್ನು ಕಾಯ್ದುಕೊಳ್ಳುವುದು ಸಂಧಿವಾತದ ಅಪಾಯವನ್ನು ತಗ್ಗಿಸುವಲ್ಲಿ ಮತ್ತು ತಡೆಯುವಲ್ಲಿ ಪ್ರಮುಖವಾಗುತ್ತದೆ.

►ಕೀಲುಗಳ ಗಾಯಗಳು

ಕೀಲುಗಳಿಗೆ ಅಥವಾ ಸಂದುಗಳಿಗೆ ಉಂಟಾಗುವ ಗಾಯ ಅಥವಾ ಏಟು ಪೋಸ್ಟ್-ಟ್ರಾಮಾಟಿಕ್ ಆರ್ಥ್ರಿಟಿಸ್(ಪಿಟಿಎ) ಎಂಬ ಸ್ಥಿತಿಗೆ ಕಾರಣವಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಸುಮಾರು ಶೇ.12ರಷ್ಟು ಒಎ ಪ್ರಕರಣಗಳಲ್ಲಿ ಇದು ಕಾರಣವಾಗಿರುತ್ತದೆ. ಇದು ಯಾವುದೇ ವಯಸ್ಸಿನಲ್ಲಿಯೂ ಉಂಟಾಗಬಹುದು ಮತ್ತು ಆಟದ ವೇಳೆ ಬಿದ್ದು ಅಥವಾ ಅಪಘಾತ ಇತ್ಯಾದಿಗಳಿಂದ ಉಂಟಾಗುವ ಗಾಯ ಅಥವಾ ಏಟಿನಿಂದ ಕೀಲುಗಳಲ್ಲಿ ಯಾವುದೇ ವಿಧದ ತೀವ್ರ ದೈಹಿಕ ನೋವು ಈ ಸ್ಥಿತಿಯನ್ನುಂಟು ಮಾಡಬಹುದು.

 ಒಂದೇ ಗಾಯ ಸಂಧಿವಾತದ ಅಪಾಯವನ್ನು ಹೆಚ್ಚಿಸಬಹುದಾದರೂ ಪದೇ ಪದೇ ಗಾಯಗಳಾಗುತ್ತಿದ್ದರೆ ಮತ್ತು ಅತಿಯಾದ ದೇಹತೂಕ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇಂತಹ ಗಾಯವಾಗಿ ಆರು ತಿಂಗಳು ಕಳೆದ ಬಳಿಕವೂ ಊತ,ತೀವ್ರನೋವು ಮತ್ತು ಮಂಡಿಗಳಲ್ಲಿ ಉರಿಯೂತದಿಂದಾಗಿ ಅತಿಯಾಗಿ ಸೈನೊವಿಯಲ್ ದ್ರಾವಣದ ಶೇಖರಣೆ ಅಥವಾ ಸೈನೊವಿಯಲ್ ಎಫ್ಯುಸನ್‌ನಂತಹ ಲಕ್ಷಣಗಳು ನಿರಂತರವಾಗಿದ್ದರೆ ಅದು ಕಳವಳಕ್ಕೆ ಕಾರಣವಾಗುತ್ತದೆ ಮತ್ತು ದೀರ್ಘಕಾಲೀನ ಪಿಟಿಎ ಎಂದು ಪರಿಗಣಿಸಬಹುದಾಗಿದೆ.

► ಧೂಮ್ರಪಾನ

ಸಿಗರೇಟ್ ಸೇವನೆಯಿಂದ ಆರ್‌ಎ ಉಂಟಾಗುವ ಅಪಾಯವು ಹೆಚ್ಚುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅಲ್ಲದೇ ಈಗಾಗಲೇ ಸಂಧಿವಾತದಿಂದ ನರಳುತ್ತಿರುವವರಲ್ಲಿ ಧೂಮ್ರಪಾನವು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಧೂಮ್ರಪಾನವು ಆರ್‌ಎದ ಅಪಾಯವನ್ನು ಶೇ.18-25ರಷ್ಟು ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ.

ಧೂಮ್ರಪಾನ ಹೆಚ್ಚಾದಷ್ಟೂ ಸಂಧಿವಾತದ ಅಪಾಯವೂ ಹೆಚ್ಚುತ್ತಲೇ ಹೋಗುತ್ತದೆ. ಧೂಮ್ರಪಾನದಿಂದ ಸಂಧಿವಾತದ ಅಪಾಯ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು. ವ್ಯಕ್ತಿಯೋರ್ವ ಧೂಮ್ರಪಾನವನ್ನು ವರ್ಜಿಸಿದ ಬಳಿಕ ಈ ಅಪಾಯವು ಧೂಮ್ರಪಾನಿಯಲ್ಲದ ವ್ಯಕ್ತಿಯು ಎದುರಿಸುವ ಅಪಾಯದ ಮಟ್ಟಕ್ಕೆ ಇಳಿಯಲು ಸುಮಾರು 20 ವರ್ಷಗಳೇ ಬೇಕಾಗುತ್ತವೆ. ಆದರೆ ಇತರರು ಧೂಮ್ರಪಾನ ಮಾಡುವಾಗ ಅದರ ಹೊಗೆಯನ್ನು ಸೇವಿಸುವವರಲ್ಲಿ ಅಥವಾ ಪ್ಯಾಸಿವ್ ಸ್ಮೋಕರ್‌ಗಳಿಗೆ ಆರ್‌ಎದ ಅಪಾಯವಿಲ್ಲ ಎನ್ನುವುದನ್ನು ಅಧ್ಯಯನಗಳು ದೃಢಪಡಿಸಿವೆ. ಹೀಗಾಗಿ ನೀವು ಧೂಮ್ರಪಾನಿಗಳಾಗಿಲ್ಲಿ ಆರ್‌ಎ ಅಪಾಯವನ್ನು ತಗ್ಗಿಸಿಕೊಳ್ಳಲು ಅದನ್ನು ಬಿಟ್ಟುಬಿಡಿ,ಇದು ಕ್ಯಾನ್ಸರ್ ಸೇರಿದಂತೆ ತಂಬಾಕು ಸೇವನೆಯ ಇತರ ಅಪಾಯಗಳನ್ನೂ ತಗ್ಗಿಸುತ್ತದೆ.

►ಸೋಂಕುಗಳು

ಕೆಲವು ಸೋಂಕುಗಳು ಸಂಧಿವಾತದ ಅಪಾಯವನ್ನು ಹೆಚ್ಚಿಸಬಲ್ಲವು. ಬ್ಯಾಕ್ಟೀರಿಯಾ,ವೈರಸ್,ಶಿಲೀಂಧ್ರ ಅಥವಾ ಪರಾವಲಂಬಿಗಳು ಕೀಲುಗಳ ಮೇಲೆ ಪರಿಣಾಮವನ್ನುಂಟು ಮಾಡುವ ಸೋಂಕುಗಳಿಗೆ ಕಾರಣವಾಗುತ್ತವೆ ಮತ್ತು ಉರಿಯೂತದ ಸಂಧಿವಾತವನ್ನುಂಟು ಮಾಡುತ್ತವೆ. ಹೀಗಾಗಿ ನೀವು ಸೋಂಕಿನಿಂದ ನರಳುತ್ತಿದ್ದರೆ ಅಥವಾ ಸೋಂಕಿನ ಬಳಿಕ ನಿಮ್ಮ ಕೀಲುಗಳು ಬಿಸಿಯಾಗಿದ್ದರೆ,ಕೆಂಪಾಗಿದ್ದರೆ ಅಥವಾ ಊದಿಕೊಂಡಿದ್ದರೆ ಸಂಧಿವಾತ ನಿಮ್ಮನ್ನು ಕಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

►ಲಿಂಗ

ವಯಸ್ಸಾಗುತ್ತಿದ್ದಂತೆ ಸಂಧಿವಾತದ ಅಪಾಯವೂ ಹೆಚ್ಚುತ್ತದೆ ಎನ್ನುವುದು ಸಾಮಾನ್ಯವಾಗಿ ಹೆಚ್ಚಿನವರಿಗೆ ಗೊತ್ತು. ಆದರೆ ಸಂಧಿವಾತವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯ ಎನ್ನುವುದು ಗೊತ್ತಿಲ್ಲ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಆರ್‌ಎದಿಂದ ಬಳಲುವ ಸಾಧ್ಯತೆ ಎರಡರಿಂದ ಮೂರು ಪಟ್ಟು ಹೆಚ್ಚಾಗಿರುತ್ತದೆ. ಒಎ ಅಥವಾ ಆಸ್ಟಿಯೊ ಆರ್ಥ್ರಿಟಿಸ್ ಬಗ್ಗೆ ಹೇಳುವುದಿದ್ದರೆ ಈ ರೋಗವು ವಿಶೇಷವಾಗಿ 50ರ ಪ್ರಾಯದ ಬಳಿಕ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನು ಕಾಡುತ್ತದೆ.

ಅಲ್ಲದೆ ಬೊಜ್ಜಿನಂತಹ ಕಾರಣಗಳೂ ಮಹಿಳೆಯರಲ್ಲಿ ಸಂಧಿವಾತ ತೀವ್ರತೆ ಮತ್ತು ಅಪಾಯವನ್ನು ಹೆಚ್ಚಿಸುತ್ತವೆ. ಕುಟುಂಬದಲ್ಲಿ ಒಎ ಇತಿಹಾಸವಿದ್ದರೆ ಅಂತಹ ಮಹಿಳೆಯರು ಈ ರೋಗಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು. ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಸಂಧಿವಾತಕ್ಕೆ ಗುರಿಯಾಗುವುದಕ್ಕೆ ನಿಖರ ಕಾರಣಗಳಿನ್ನೂ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News