ಪತ್ರಕರ್ತನನ್ನು ಮುಗಿಸಲು ಸೌದಿ ಯುವರಾಜ ಆದೇಶ ನೀಡಿದ್ದರು: ‘ವಾಶಿಂಗ್ಟನ್ ಪೋಸ್ಟ್’ ವರದಿ

Update: 2018-10-11 15:45 GMT

ವಾಶಿಂಗ್ಟನ್, ಅ. 11: ಅಮೆರಿಕದಲ್ಲಿ ವಾಸಿಸುತ್ತಿರುವ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುವಂತೆ ಸೌದಿ ಅರೇಬಿಯದ ಯುವರಾಜ ಹಾಗೂ ನೈಜ ಆಡಳಿತಗಾರ ಮುಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದರು ಎಂದು ಅಮೆರಿಕ ಗುಪ್ತಚರ ಮಾಹಿತಿಗಳನ್ನು ಉಲ್ಲೇಖಿಸಿ ‘ವಾಶಿಂಗ್ಟನ್ ಪೋಸ್ಟ್’ ಬುಧವಾರ ವರದಿ ಮಾಡಿದೆ.

ದೊರೆ ಸಲ್ಮಾನ್ ಮತ್ತು ಅವರ ಮಗ ಹಾಗೂ ಯುವರಾಜನ ಆಡಳಿತದ ತೀವ್ರ ಟೀಕಾಕಾರರಾಗಿದ್ದ ಜಮಾಲ್, ಟರ್ಕಿ ದೇಶದ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕಾನ್ಸುಲೇಟ್ ಕಚೇರಿಗೆ ಅಕ್ಟೋಬರ್ 2ರಂದು ಹೋದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಅದೇ ವೇಳೆ, ಅವರನ್ನು ಕಾನ್ಸುಲೇಟ್ ಕಚೇರಿಯಲ್ಲಿ ಕೊಲ್ಲಲಾಗಿದೆ ಎಂದು ಟರ್ಕಿ ಅಧಿಕಾರಿಗಳು ಶಂಕಿಸಿದ್ದಾರೆ.

ಅಮೆರಿಕದ ವರ್ಜೀನಿಯ ರಾಜ್ಯದಲ್ಲಿ ವಾಸಿಸುತ್ತಿರುವ ಖಶೋಗಿಯನ್ನು ಆಮಿಶವೊಡ್ಡಿ ಕರೆಸಿ ಬಂಧಿಸುವ ಬಗ್ಗೆ ಸೌದಿ ಅಧಿಕಾರಿಗಳು ಚರ್ಚಿಸುತ್ತಿದ್ದರು ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಖಶೋಗಿ ‘ವಾಶಿಂಗ್ಟನ್ ಪೋಸ್ಟ್’ನಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.

ಉನ್ನತ ಉದ್ಯೋಗದ ಆಮಿಶ ಒಡ್ಡಿದ್ದ ಸೌದಿ

ಖಶೋಗಿ ಸ್ವದೇಶಕ್ಕೆ ಮರಳಿದರೆ ಅವರಿಗೆ ರಕ್ಷಣೆ ನೀಡುವ ಹಾಗೂ ಉನ್ನತ ದರ್ಜೆಯ ಸರಕಾರಿ ಉದ್ಯೋಗವನ್ನು ನೀಡುವ ಆಮಿಶದೊಂದಿಗೆ ಸೌದಿ ಅರೇಬಿಯದ ಉನ್ನತ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದರು ಎಂಬುದಾಗಿ ಖಶೋಗಿಯ ಸ್ನೇಹಿತರು ಹೇಳಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.

ಆದರೆ, ಈ ಆಮಿಶಗಳ ಬಗ್ಗೆ ಖಶೋಗಿ ಸಂಶಯ ಹೊಂದಿದ್ದರು.

ನಾಪತ್ತೆ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲ: ಅಮೆರಿಕ

ಈ ನಡುವೆ, ಖಶೋಗಿಯ ನಾಪತ್ತೆ ಬಗ್ಗೆ ಅಮೆರಿಕಕ್ಕೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ರಾಬರ್ಟ್ ಪಲ್ಲಾಡಿನೊ ಹೇಳಿದ್ದಾರೆ.

ಪ್ರಕರಣವು ಮಾನವಹಕ್ಕು ಮತ್ತು ಪತ್ರಕರ್ತ ಗುಂಪುಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅದು ಸೌದಿ ಅರೇಬಿಯ ಮತ್ತು ಅಮೆರಿಕಗಳ ನಡುವಿನ ಸಂಬಂಧವನ್ನೂ ಹದಗೆಡಿಸುವ ಸೂಚನೆಯನ್ನು ನೀಡಿದೆ. ನಿಗೂಢ ನಾಪತ್ತೆ ಬಗ್ಗೆ ವಿವರಣೆ ನೀಡುವಂತೆ ಅಮೆರಿಕ ಸೌದಿ ಅರೇಬಿಯವನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News