ಭಾರತಕ್ಕೆ ದಿಗ್ಬಂಧನ ಸಾಧ್ಯತೆ ಶೀಘ್ರದಲ್ಲೇ ತಿಳಿಯುತ್ತದೆ: ಟ್ರಂಪ್

Update: 2018-10-11 15:59 GMT

ವಾಶಿಂಗ್ಟನ್, ಅ. 11: ಭಾರತವು ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ರಶ್ಯದ ಜೊತೆ ಒಪ್ಪಂದ ಮಾಡಿಕೊಂಡ ಬಳಿಕ, ಭಾರತದ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲು ಅಮೆರಿಕ ಉದ್ದೇಶಿಸಿದೆಯೇ ಎನ್ನುವುದು ಶೀಘ್ರವೇ ತಿಳಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಶ್ಯದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ವಿರುದ್ಧ ಅಮೆರಿಕ ಎಚ್ಚರಿಕೆ ನೀಡಿದ ಹೊರತಾಗಿಯೂ, ಭಾರತ ರಶ್ಯದೊಂದಿಗೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಕಳೆದ ವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ನೀಡಿದ್ದ ಭೇಟಿಯ ವೇಳೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

 ರಶ್ಯ ಜೊತೆಗೆ ವ್ಯವಹಾರಗಳನ್ನು ನಡೆಸುವ ದೇಶಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲು ಅವಕಾಶ ನೀಡುವ ಕಾನೂನೊಂದನ್ನು ಅಮೆರಿಕ 2017ರಲ್ಲಿ ರೂಪಿಸಿದೆ. ಆದಾಗ್ಯೂ, ನಿರ್ದಿಷ್ಟ ದೇಶಕ್ಕೆ ದಿಗ್ಬಂಧನದಿಂದ ವಿನಾಯಿತಿ ನೀಡುವ ಅಧಿಕಾರ ಅಮೆರಿಕದ ಅಧ್ಯಕ್ಷರಿಗಿದೆ.

ರಶ್ಯ ಜೊತೆಗಿನ ಒಪ್ಪಂದಕ್ಕೆ ಸಂಬಂಧಿಸಿ ದಿಗ್ಬಂಧನದಿಂದ ವಿನಾಯಿತಿ ನೀಡಬೇಕೆಂದು ಭಾರತ ಅಮೆರಿಕಕ್ಕೆ ಕೋರಿಕೆ ಸಲ್ಲಿಸಿದೆ ಎಂದು ಹೇಳಲಾಗಿದೆ.

ಭಾರತ-ರಶ್ಯ ಒಪ್ಪಂದದ ಬಗ್ಗೆ ಬುಧವಾರ ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟ್ರಂಪ್, ‘‘ಇದು ಶೀಘ್ರದಲ್ಲೇ ಭಾರತಕ್ಕೆ ಗೊತ್ತಾಗುತ್ತದೆ. ನೀವು ಯೋಚಿಸಿರುವುದ್ಕಕಿಂತಲೂ ಬೇಗ ಗೊತ್ತಾಗುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News