ಆಂಧ್ರದಲ್ಲಿ ತಿತ್ಲಿ ಚಂಡಮಾರುತಕ್ಕೆ ಎಂಟು ಬಲಿ,ವ್ಯಾಪಕ ನಷ್ಟ

Update: 2018-10-11 17:20 GMT

ಅಮರಾವತಿ.ಅ.11: ಗುರುವಾರ ಆಂಧ್ರಪ್ರದೇಶದ ಶೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ದಾಂಗುಡಿಯೆಬ್ಬಿಸಿದ ತಿತ್ಲಿ ಚಂಡಮಾರುತಕ್ಕೆ ಎಂಟು ಜನರು ಬಲಿಯಾಗಿದ್ದು,ವ್ಯಾಪಕ ನಷ್ಟ ಸಂಭವಿಸಿದೆ. ಚಂಡಮಾರುತದಿಂದಾಗಿ ಶ್ರೀಕಾಕುಳಂ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಹಲವಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲ ಕಚ್ಚಿವೆ. ಜಿಲ್ಲೆಯ ಹಲವಾರು ಮಂಡಳ ವ್ಯಾಪ್ತಿಗಳಲ್ಲಿ 2ಸೆಂ.ಮೀ.ನಿಂದ 26 ಸೆಂ.ಮೀ.ವರೆಗೆ ಮಳೆ ಸುರಿದಿದ್ದು,ರಸ್ತೆ ಸಂಪರ್ಕವೂ ಭಾರೀ ವ್ಯತ್ಯಯಗೊಂಡಿದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ(ಎಸ್‌ಡಿಎಂಎ)ವು ತಿಳಿಸಿದೆ.

ಹಲವಾರು ಕಡೆಗಳಲ್ಲಿ ಮರಗಳು ರಸ್ತೆಗಡ್ಡವಾಗಿ ಉರುಳಿ ಬಿದ್ದಿರುವುದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

ಶ್ರೀಕಾಕುಳಂ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಪರಿಹಾರ ಕ್ರಮಗಳು ಮತ್ತು ಸಂವಹನ ಜಾಲದ ಮರುಸ್ಥಾಪನೆಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿರುವ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು,ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಯನ್ನು ತಡೆಯುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News