ಪೃಥ್ವಿ ಶಾರನ್ನು ಸಚಿನ್‌ಗೆ ಹೋಲಿಸದಂತೆ ಕೊಹ್ಲಿ ಸಲಹೆ

Update: 2018-10-11 18:36 GMT

ಹೈದರಾಬಾದ್, ಅ.11: ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ಯುವ ದಾಂಡಿಗ ಪ್ರಥ್ವಿ ಶಾ ಅವರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್‌ಗೆ ಹೋಲಿಸುವುದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಶಾ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದರು. ಶಾ ಅವರು ಸಚಿನ್ ಹಾದಿಯಲ್ಲಿ ನಡೆಯಬೇಕಾದರೆ ಇನ್ನೂ ಹಲವು ಟೆಸ್ಟ್‌ಗಳನ್ನು ಆಡಬೇಕಾಗಿದೆ.

ಮೊದಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿರುವ ಶಾ ಎರಡನೇ ಟೆಸ್ಟ್‌ನಲ್ಲಿ ಶತಕ ದಾಖಲಿ ಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.

  ಸತತ ಎರಡು ಟೆಸ್ಟ್‌ಗಳಲ್ಲಿ ಭಾರತದ ಮುಹಮ್ಮದ್ ಅಝರುದ್ದೀನ್, ಸೌರವ್ ಗಂಗುಲಿ ಮತ್ತು ರೋಹಿತ್ ಶರ್ಮ ಶತಕ ದಾಖಲಿಸಿದ್ದರು. ಎರಡನೇ ಟೆಸ್ಟ್‌ನಲ್ಲಿ ಶಾ ಶತಕ ದಾಖಲಿಸಿದರೆ ಇವರ ಸಾಲಿಗೆ ಸೇರುತ್ತಾರೆ.

18ರ ಹರೆಯದ ಶಾ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ಯುವ ಆಟಗಾರ. ಸಚಿನ್ ತೆಂಡುಲ್ಕರ್ 9ನೇ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದ್ದರು. ಇಂಗ್ಲೆಂಡ್ ವಿರುದ್ಧ ಮೊದಲ ಶತಕ (119) ದಾಖಲಿಸುವಾಗ ಸಚಿನ್ ಅವರಿಗೆ 17 ವರ್ಷವಾಗಿತ್ತು. ಶಾ ರಾಜ್‌ಕೋಟ್‌ನಲ್ಲಿ ಮೊದಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿ ಗಮನ ಸೆಳೆದಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟೆಸ್ಟ್‌ನಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ.

    ಶಾ 14ರ ಹರೆಯದಲ್ಲೇ ಮುಂಬೈ ಶಾಲಾ ಕ್ರಿಕೆಟ್ ಪಂದ್ಯದಲ್ಲಿ 330 ಎಸೆತಗಳಲ್ಲಿ 546 ರನ್ ಗಳಿಸಿದ್ದರು. ಭವಿಷ್ಯದ ಕ್ರಿಕೆಟ್ ಆಟಗಾರನಾಗಿ ರೂಪುಗೊಳ್ಳುತ್ತಿರುವ ಶಾ 21ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು 24ರ ಹರೆಯದ ಹನುಮ ವಿಹಾರಿ ಒತ್ತಡದ ಪರಿಸ್ಥಿತಿಯಲ್ಲಿ ಆಡುವ ವಿಧಾನವನ್ನು ಐಪಿಎಲ್‌ನಲ್ಲಿ ಕಲಿತುಕೊಂಡಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News