ಪದ್ಮಪ್ರಶಸ್ತಿಗೆ ನಾಮನಿರ್ದೇಶನಗಳು ಎಷ್ಟು ಗೊತ್ತೇ?

Update: 2018-10-12 04:01 GMT

ಹೊಸದಿಲ್ಲಿ, ಅ.12: ಭಾರತ ಸರ್ಕಾರ ನೀಡುವ ಪದ್ಮ ಪ್ರಶಸ್ತಿಗಳಿಗೆ ಈ ಬಾರಿ ಬರೋಬ್ಬರಿ 50 ಸಾವಿರ ನಾಮನಿರ್ದೇಶನಗಳು ಸಲ್ಲಿಕೆಯಾಗಿವೆ. ಪ್ರಶಸ್ತಿಗೆ ಹೆಸರು ಸೂಚಿಸಲು ಕೊನೆಯ ದಿನವಾದ ಸೆಪ್ಟೆಂಬರ್ 15ರವರೆಗೆ ಒಟ್ಟು 49,992 ಅರ್ಜಿಗಳು ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 40ರಷ್ಟು ಹೆಚ್ಚುವರಿ ಅರ್ಜಿಗಳು ಸಲ್ಲಿಕೆಯಾಗಿವೆ. 2017ರಲ್ಲಿ 35,595, 2016ರಲ್ಲಿ 18,767 ಅರ್ಜಿಗಳು ಸಲ್ಲಿಕೆಯಾಗಿದ್ದವು. 2010ರಲ್ಲಿ 1,313 ಅರ್ಜಿಗಳಷ್ಟೇ ಸಲ್ಲಿಕೆಯಾಗಿದ್ದವು ಎಂದು ಗೃಹ ಇಲಾಖೆ ಅಂಕಿ ಅಂಶಗಳಿಂದ ತಿಳಿಯುತ್ತದೆ.

ಉನ್ನತ ವ್ಯಕ್ತಿಗಳಿಗೆ ಮತ್ತು ದೆಹಲಿ ಅಧಿಕಾರ ಕೇಂದ್ರದ ಸುತ್ತ ಸುತ್ತುತ್ತಿದ್ದವರಿಗಷ್ಟೇ ಸೀಮಿತವಾಗಿದ್ದ ಈ ಪ್ರಶಸ್ತಿಯನ್ನು ಜನಪ್ರಿಯ ಪ್ರಶಸ್ತಿಯಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಸರ್ಕಾರ ಮಾಡಿದ ಪ್ರಯತ್ನಗಳಿಂದಾಗಿ ಅರ್ಜಿಗಳ ಮಹಾಪೂರ ಹರಿದಿದೆ ಎನ್ನುವುದು ಸರ್ಕಾರದ ವಿಶ್ಲೇಷಣೆ. ದೇಶಾದ್ಯಂತ ಎಲೆಮರೆಯ ಕಾಯಿಗಳಂತೆ ಸೇವೆ ಸಲ್ಲಿಸುತ್ತಿರುವವರನ್ನೂ ಗುರುತಿಸಿ ಗೌರವಿಸುವುದು ಸರ್ಕಾರದ ಉದ್ದೇಶ ಎಂದು ಗೃಹ ಸಚಿವಾಲಯ ಹೇಳಿದೆ.

ಪದ್ಮಪ್ರಶಸ್ತಿಯನ್ನು ತಳಮಟ್ಟಕ್ಕೆ ಒಯ್ಯುವ ನಿಟ್ಟಿನಲ್ಲಿ ಸರ್ಕಾರ 2016ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ. ಈ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಲು ಎಲೆಮರೆಯ ಕಾಯಿಗಳಂತೆ ನಿಸ್ವಾರ್ಥ ಸೇವೆ ಮಾಡುತ್ತಿರುವವರನ್ನು ಕೂಡಾ ನಾಮನಿದೇರ್ಶನ ಮಾಡಲು ಇದು ಅವಕಾಶ ಮಾಡಿಕೊಟ್ಟಿದೆ ಎಂದು ಸಚಿವಾಲಯ ಹೇಳಿದೆ.

2019ರ ಗಣರಾಜ್ಯೋತ್ಸವದಂದು ಘೋಷಿಸುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ 2018ರ ಮೇ ಒಂದರಿಂದ ಆರಂಭವಾಗಿತ್ತು. ಕೇಂದ್ರ ಸಚಿವಾಲಯಗಳು/ ಇಲಾಖೆಗಳು, ರಾಜ್ಯ/ ಕೇಂದ್ರಾಡಳಿತ ಸರ್ಕಾರಗಳು, ಭಾರತರತ್ನ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು, ಶ್ರೇಷ್ಠತಾ ಕೇಂದ್ರಗಳು ಮತ್ತು ಇತರ ಮೂಲಗಳಿಂದ ನಾಮನಿರ್ದೇಶನ ಆಹ್ವಾನಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News