ಅಸಂಘಟಿತ ಕ್ಷೇತ್ರಗಳಲ್ಲಿ ಕನಿಷ್ಠ ವೇತನ ಕೋರಿದ್ದ ಅರ್ಜಿಗೆ ಸುಪ್ರೀಂ ತಿರಸ್ಕಾರ

Update: 2018-10-12 17:28 GMT

ಹೊಸದಿಲ್ಲಿ,ಅ.12: ದೇಶಾದ್ಯಂತ ಅಸಂಘಟಿತ ಕ್ಷೇತ್ರಗಳಲ್ಲಿಯ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಯನ್ನು ಕೋರಿ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. ಇದಕ್ಕಾಗಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳನ್ನು ಸಂಪರ್ಕಿಸುವಂತೆ ಅದು ಅಗ್ನಿವೇಶ್‌ಗೆ ಸೂಚಿಸಿದೆ.

ಅಸಂಘಟಿತ ಕ್ಷೇತ್ರಗಳ ಕಾರ್ಮಿಕರಿಗೆ ಏಳನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರಕಾರದ ಗ್ರುಪ್‌‘ಡಿ’ ನೌಕರರಿಗೆ ನೀಡಲಾಗುತ್ತಿರುವ ವೇತನಕ್ಕೆ ಸಮಾನ ಕನಿಷ್ಠ ವೇತನವನ್ನು ನಿಗದಿಗೊಳಿಸುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು.

ಉದ್ಯೋಗಕ್ಕೆ ಮಕ್ಕಳ ನೇಮಕವನ್ನು ನಿಷೇಧಿಸುವಂತೆ ಕೋರಿದ್ದ ಅಗ್ನಿವೇಶ್,ಗ್ರುಪ್ ‘ಡಿ’ನೌಕರರಿಗೆ ಸಮಾನವಾದ ಕನಿಷ್ಠ ವೇತನ ನೀಡಿಕೆಯು ಸರ್ವೋಚ್ಚ ನ್ಯಾಯಾಲಯವು ತನ್ನ 1992ರ ತೀರ್ಪಿನಲ್ಲಿ ಸೂಚಿಸಿದ್ದ ನೀತಿಗಳಿಗೆ ಅನುಗುಣವಾಗಿದೆ ಎಂದು ವಾದಿಸಿದ್ದರು. ಕನಿಷ್ಠ ವೇತನ ಪಾವತಿಯು ಸಂವಿಧಾನದ 21ನೇ ವಿಧಿಯಡಿ ಘನತೆಯಿಂದ ಜೀವಿಸುವ ಹಕ್ಕನ್ನು ಎತ್ತಿ ಹಿಡಿಯುತ್ತದೆ ಎಂದೂ ಅವರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News