ನ್ಯಾಯದ ಜೊತೆ ಸಮನ್ವಯದ ಅಗತ್ಯ

Update: 2018-10-12 18:31 GMT

ನಾವು ಜಮೀನು ವಿವಾದವನ್ನು ಹೇಗೆ ಬಗೆಹರಿಸುತ್ತೇವೆ?; ಜಮೀನಿನ ದಾಖಲೆಗಳ ಪ್ರಕಾರವೋ ಅಥವಾ ಜನರ ನಂಬಿಕೆಯ ಪ್ರಕಾರವೋ? ಈ ನಂಬಿಕೆಯು ಆರಂಭದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ನಂತರ ಬಿಜೆಪಿ ಮುನ್ನಡೆಸಿದ ಆರೆಸ್ಸೆಸ್ ರಾಮ ಮಂದಿರಕ್ಕಾಗಿ ರೂಪಿಸಿದ ರಾಜಕೀಯ ಚಳವಳಿಯ ಫಲವಾಗಿದೆ. ಈ ನಂಬಿಕೆಯು ನ್ಯಾಯಾಂಗದ ದಿಕ್ಕನ್ನು ಅಥವಾ ನ್ಯಾಯಾಂಗ ವ್ಯಸ್ಥೆಯನ್ನು ನಿರ್ಧರಿಸಲು ಸಾಧ್ಯವೇ?.

ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ನೀಡಿದ 2-1 ಬಹುಮತದ ತೀರ್ಪಿನಲ್ಲಿ ಡಾ.ಫಾರೂಖಿ ತೀರ್ಪನ್ನು ಸಂವಿಧಾನ ಪೀಠಕ್ಕೆ ನೀಡಲು ನಿರಾಕರಿಸಿತು. ಈ ತೀರ್ಪಿನಲ್ಲಿ ಮಸೀದಿಯು ಇಸ್ಲಾಂನ ಅಗತ್ಯ ಭಾಗವಲ್ಲ ಎಂದು ತಿಳಿಸಲಾಗಿತ್ತು. ಇತ್ತೀಚಿನ ತೀರ್ಪಿನಲ್ಲಿ ಭಿನ್ನಮತೀಯ ನ್ಯಾಯಾಧೀಶರು ಈ ಪ್ರಕರಣವನ್ನು ಏಳು ನ್ಯಾಯಾಧೀಶ ಸದಸ್ಯರನ್ನು ಹೊಂದಿರುವ ನ್ಯಾಯಪೀಠಕ್ಕೆ ಒಪ್ಪಿಸಬೇಕೆಂದು ಬಯಸಿದ್ದರು. ಮಸೀದಿಯು ಇಸ್ಲಾಮ್‌ನ ಅನಿವಾರ್ಯ ಭಾಗವಲ್ಲ ಎಂಬ ತೀರ್ಪಿನ ಮೇಲೆ 2010ರ ಅಲಹಾಬಾದ್ ನ್ಯಾಯಾಲಯದ ತೀರ್ಪು ಪ್ರಭಾವ ಬೀರಿದೆ ಎಂದು ಭಾವಿಸಲಾಗಿದೆ. 2010ರ ಆದೇಶದಲ್ಲಿ ಅಲಹಾಬಾದ್ ನ್ಯಾಯಾಲಯ ಬಾಬರಿ ಮಸೀದಿ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ, ಸುನ್ನಿ ವಕ್ಫ್ ಮಂಡಳಿ, ರಾಮ ಲಲ್ಲ ವಿರಾಜಮಾನ ಮತ್ತು ನಿರ್ಮೋಹಿ ಅಖಾಡಕ್ಕೆ ನೀಡಲು ಆದೇಶಿಸಿತ್ತು.

ಡಾ.ಫಾರೂಖಿ ಪ್ರಕರಣದಲ್ಲಿ ನಡೆಸಿದ ವಾದವೆಂದರೆ ನಮಾಝನ್ನು ಎಲ್ಲಿ ಬೇಕಾದರೂ ನಡೆಸಬಹುದು. ಹಾಗಾಗಿ ಮಸೀದಿಯು ಇಸ್ಲಾಂ ಆಚರಣೆಯ ಅನಿವಾರ್ಯ ಭಾಗವಲ್ಲ ಎಂಬುದು. ಇನ್ನೊಂದು ಕಡೆಯ ವಾದವೆಂದರೆ, ಜಗತ್ತಿನಾದ್ಯಂತ ಅನೇಕ ಮಸೀದಿಗಳಿವೆ. ಅವುಗಳು ಇಸ್ಲಾಮ್‌ನ ಭಾಗವಲ್ಲದಿದ್ದರೆ ಅಷ್ಟೊಂದು ಮಸೀದಿಗಳನ್ನು ನಿರ್ಮಿಸಿರುವುದಾದರೂ ಯಾಕೆ? ಖಂಡಿತ ವಾಗಿಯೂ, ಈ ಅಂಶವು ಸಮಾಜದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವ ಕಾರಣ ಅದರ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ. ಈಗ ಅಯೋಧ್ಯಾ ಪ್ರಕರಣದಲ್ಲಿ ಜಮೀನು ವಿವಾದದ ಆಲಿಕೆಗೆ ದಾರಿ ಮಾಡಿಕೊಡಲಾಗಿದೆ. ಅಲಹಾಬಾದ್ ನ್ಯಾಯಾಲಯ ಜಮೀನನ್ನು ಮೂರು ಭಾಗಗಳಾಗಿ ವಿಭಜಿಸಿದರೂ ಅದನ್ನು ಯಾವುದೇ ದಾಖಲೆಯ ಆಧಾರದಲ್ಲಿ ಮಾಡಿರಲಿಲ್ಲ. ಬದಲಿಗೆ ರಾಮ ಅಲ್ಲಿ ಜನಿಸಿದನೆಂಬ ಬಹುಸಂಖ್ಯಾತ ಹಿಂದೂಗಳ ನಂಬಿಕೆಯ ಆಧಾರದ ಮೇಲೆ ಮಾಡಿದೆ. ನಾವು ಜಮೀನು ವಿವಾದವನ್ನು ಹೇಗೆ ಬಗೆಹರಿಸುತ್ತೇವೆ?; ಜಮೀನಿನ ದಾಖಲೆಗಳ ಪ್ರಕಾರವೋ ಅಥವಾ ಜನರ ನಂಬಿಕೆಯ ಪ್ರಕಾರವೋ? ಈ ನಂಬಿಕೆಯು ಆರಂಭದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ನಂತರ ಬಿಜೆಪಿ ಮುನ್ನಡೆಸಿದ ಆರೆಸ್ಸೆಸ್ ರಾಮ ಮಂದಿರಕ್ಕಾಗಿ ರೂಪಿಸಿದ ರಾಜಕೀಯ ಚಳವಳಿಯ ಫಲವಾಗಿದೆ. ಈ ನಂಬಿಕೆಯು ನ್ಯಾಯಾಂಗದ ದಿಕ್ಕನ್ನು ಅಥವಾ ನ್ಯಾಯಾಂಗ ವ್ಯವಸ್ಥೆಯನ್ನು ನಿರ್ಧರಿಸಲು ಸಾಧ್ಯವೇ?.

ರಾಮ ಮಂದಿರವನ್ನು ಐದು ಶತಮಾನಗಳ ಹಿಂದೆ ಧ್ವಂಸ ಮಾಡಲಾಯಿತು ಎಂಬ ವಾದವು ಸಂಶಯಾಸ್ಪದವಾಗಿದೆ. ರಾಮ ಮಂದಿರವನ್ನು ನಾಶ ಮಾಡಲಾಯಿತು ಎಂದು ಹೇಳಲಾಗುತ್ತಿರುವ ಕಾಲದಲ್ಲಿ ರಾಮನ ಪರಮ ಭಕ್ತ ಗೋಸ್ವಾಮಿ ತುಳಸಿ ದಾಸರು ಅಯೋಧ್ಯೆಯಲ್ಲಿ ಜೀವಿಸುತ್ತಿದ್ದರು. ಅವರು ತನ್ನ ಯಾವುದೇ ರಚನೆಯಲ್ಲಿ ಈ ಬಗ್ಗೆ ಬರೆದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ತುಳಸಿ ದಾಸರು ತಮ್ಮ ಒಂದು ದ್ವಿಪದಿಯಲ್ಲಿ, ನಾನು ಮಸೀದಿಯಲ್ಲೂ ಜೀವಿಸಬಲ್ಲೆ ಎಂದು ಬರೆದಿದ್ದಾರೆ. ರಾಮನು ಅಲ್ಲಿ ಜನಿಸಿದ್ದ ಎಂಬ ನಂಬಿಕೆಯನ್ನು ಹಲವು ದಶಕಗಳಿಂದ ಬಿತ್ತಲಾಗುತ್ತಿತ್ತು ಮತ್ತು ಇತ್ತೀಚಿನ ದಶಕಗಳಲ್ಲಿ ಅದು ತೀವ್ರಗೊಂಡಿತು. ನಮ್ಮ ಕಾಲದ ಅತ್ಯುತ್ತಮ ಚಿತ್ರ ತಯಾರಕರಲ್ಲಿ ಒಬ್ಬರಾದ ಆನಂದ ಪಟವರ್ಧನ್ ಅವರು ತಮ್ಮ ಸಾಕ್ಷಚಿತ್ರ ರಾಮ್ ಕೆ ನಾಮ್ (ರಾಮನ ಹೆಸರಲ್ಲಿ)ನಲ್ಲಿ ಅಯೋಧ್ಯೆಯಲ್ಲಿರುವ ಅನೇಕ ರಾಮ ಮಂದಿರಗಳ ಅರ್ಚಕರು ಅದು ಯಾವ ರೀತಿ ರಾಮನು ನಮ್ಮ ದೇವಸ್ಥಾನದಲ್ಲೇ ಜನಿಸಿದ್ದನು ಎಂದು ವಾದಿಸುತ್ತಿದ್ದರು ಎನ್ನುವುದನ್ನು ತೋರಿಸಿದ್ದಾರೆ. ಪುರಾಣದ ಅವಧಿಯನ್ನು ಸುಲಭವಾಗಿ ಇತಿಹಾಸದ ಭಾಗವಾಗಿ ವಿವರಿಸಲು ಸಾಧ್ಯವಿಲ್ಲ.

ಈಗ ನಾವು ಇತರ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮೊದಲನೆಯದಾಗಿ, ರಾಮನ ಮೂರ್ತಿಯನ್ನು ಮಸೀದಿಯೊಳಗೆ ಸ್ಥಾಪಿಸಿರುವುದು. ಇದನ್ನು ದಾಖಲಿಸಲಾಗಿದೆ. ಅಂದು ಸ್ಥಳೀಯ ಮ್ಯಾಜಿಸ್ಟ್ರೇಟ್ ಆಗಿದ್ದ ಕೆ.ಕೆ.ನಯ್ಯರ್ ಯಾವ ರೀತಿ ಕೂಡಲೇ ಈ ಮೂರ್ತಿಯನ್ನು ತೆಗೆಸುವ ಕಾರ್ಯಕ್ಕೆ ಅಡ್ಡಿಪಡಿಸಿದರು ಮತ್ತು ಅದಕ್ಕೆ ಅವರು ಪಡೆದ ಉಡುಗೊರೆ ಏನು ಎಂಬುದು ಎಲ್ಲರಿಗೂ ತಿಳಿದಿದೆ. ನಿವೃತ್ತಿಯ ನಂತರ ನಯ್ಯರ್ ಬಿಜೆಪಿಯ ಮಾತೃಪಕ್ಷ ಜನಸಂಘ ಸೇರಿದರು. ಎರಡನೆಯ ಅಪರಾಧ, ಹಾಡಹಗಲೇ ಮಸೀದಿಯನ್ನು ಧ್ವಂಸಗೊಳಿಸಿದ್ದು. ಉತ್ತರ ಪ್ರದೇಶ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಲಿಖಿತವಾಗಿ ಭರವಸೆ ನೀಡಿದ್ದರೂ ಈ ಘಟನೆ ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಕುರಿತು ತನಿಖೆ ನಡೆಸಿದ ಲಿಬರ್ಹಾನ್ ಆಯೋಗ ಇದು ಒಂದು ಸಂಚು ಎಂದು ತಿಳಿಸಿತು. ಬಿಜೆಪಿ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿ ವೇದಿಕೆಯ ಮೇಲೆ ನಿಂತು ಕರ ಸೇವಕರನ್ನು ಪ್ರಚೋದಿಸಿದ್ದರು. ಅವರನ್ನು ಕೇಂದ್ರ ಸರಕಾರದಲ್ಲಿ ಸಚಿವರನ್ನಾಗಿ ನೇಮಿಸುವ ಮೂಲಕ ತಕ್ಕ ಉಡುಗೊರೆಯನ್ನೂ ನೀಡಲಾಯಿತು.

ತಪ್ಪಿತಸ್ಥರನ್ನು ಶಿಕ್ಷಿಸಿ ಎಂಬ ಸಿದ್ಧಾಂತದ ಕತೆಯೇನು? ಅಪರಾಧಗಳನ್ನು ದಾಖಲಿಸುವಾಗ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಮತ್ತು ಅವರ ಕ್ಯಾಮರಾಗಳನ್ನು ಪುಡಿಗೈದಿರುವುದನ್ನು ದೇಶ ಕಂಡಿದೆ. ಖಂಡಿತವಾಗಿಯೂ, ನಾಶಪಡಿಸಿದ ಅಪರಾಧಕ್ಕೆ ಶಿಕ್ಷೆಯಾಗಲೇಬೇಕು. ಎರಡನೆಯದಾಗಿ, ಜಮೀನು ವಿವಾದವನ್ನು ಜಮೀನಿನ ದಾಖಲೆಯ ಆಧಾರದಲ್ಲಿ ಇತ್ಯರ್ಥಗೊಳಿಸಬೇಕು. ಅಯೋಧ್ಯೆಯ ಜಮೀನು ಶತಮಾನಗಳಿಂದ ಸುನ್ನಿ ವಕ್ಫ್ ಮಂಡಳಿ ವಶದಲ್ಲಿತ್ತು. 1885ರಲ್ಲಿ ಮಸೀದಿಗೆ ಸಮೀಪದ ಜಮೀನಿನಲ್ಲಿ ವೇದಿಕೆಯನ್ನು ನಿರ್ಮಿಸಲು ಹಿಂದೂಗಳಿಗೆ ನ್ಯಾಯಾಲಯ ಅವಕಾಶ ನೀಡಿರಲಿಲ್ಲ. ಈಗಲೂ ಈ ವಿಷಯದಲ್ಲಿ ಜಮೀನಿನ ದಾಖಲೆಯು ಸ್ಪಷ್ಟವಾಗಿರಬೇಕು. ಈ ಸಮಸ್ಯೆಗೆ ನ್ಯಾಯಾಲಯದ ಹೊರಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ.

ಇವುಗಳಲ್ಲಿ ಕೆಲವರು ಆರೆಸ್ಸೆಸ್ ಮತ್ತದರ ಗುಂಪುಗಳು ಏನನ್ನು ಬಯಸುತ್ತಿದೆಯೋ ಅದನ್ನೇ ವೈಭವೀಕರಿಸಿ ಹೇಳುತ್ತಿದ್ದಾರೆ. ಆ ಸ್ಥಳದಿಂದ ರಾಮ ಮಂದಿರವನ್ನು ನಿರ್ಮಿಸುವ ಸಲುವಾಗಿ ಮುಸ್ಲಿಮರು ತಮ್ಮ ವಾದವನ್ನು ಕೈಬಿಡಬೇಕೆಂದು ಅವರು ಬಯಸಿದ್ದಾರೆ. ಅದಕ್ಕೆ ಬದಲಾಗಿ ಅವರಿಗೆ ಮಸೀದಿಯನ್ನು ನಿರ್ಮಿಸಲು ಬೇರೆ ಕಡೆ ಜಮೀನು ಒದಗಿಸಲಾಗುವುದು. ಬಿಜೆಪಿ ಸೂಕ್ತ ಬಹುಮತ ಪಡೆದ ಸಂದರ್ಭದಲ್ಲಿ ಸಂಸತ್‌ನ ಶಾಸನದ ಮೂಲಕ ಮಂದಿರವನ್ನು ನಿರ್ಮಿಸಲಾಗುವುದು ಎಂಬ ಬೆದರಿಕೆಗಳನ್ನೂ ಹಾಕಲಾಗುತ್ತಿದೆ. ಸಮನ್ವಯತೆಯು, ಎರಡೂ ಪಕ್ಷಗಳನ್ನು ಆಲಿಸುವ ಮತ್ತು ಕೆಲವೊಂದು ಕೊಡು-ಕೊಳ್ಳುವಿಕೆಯ ನಂತರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಸಂಪೂರ್ಣ ಜಮೀನನ್ನು ಮಂದಿರ ನಿರ್ಮಾಣಕ್ಕೆ ನೀಡಬೇಕು ಎನ್ನುವ ವಾದವು ಮುಸ್ಲಿಮರು ಸಂಪೂರ್ಣವಾಗಿ ಬಾಗಬೇಕು ಎಂಬ ಅತಿರೇಕದಿಂದ ಕೂಡಿದೆ.

ನಮಗೆ ಬೇಕಾಗಿರುವುದು, ತಪ್ಪಿತಸ್ಥರನ್ನು ಶಿಕ್ಷಿಸುವುದು ಮತ್ತು ಸಮಸ್ಯೆಯನ್ನು ಬಗೆಹರಿಸಲು ಕಾನೂನಿಗೆ ಬದ್ಧವಾಗಿರುವುದು. ನ್ಯಾಯವಿಲ್ಲದೆ ಶಾಂತಿಯಿರಲು ಸಾಧ್ಯವಿಲ್ಲ. ಬಾಬರಿ ಮಸೀದಿ ಧ್ವಂಸಗೈದ ಅಪರಾಧವನ್ನು ಆರೆಸ್ಸೆಸ್ ಗುಂಪು ‘ಹಿಂದೂ ಶೌರ್ಯ ದಿವಸ’ ಎಂದು ಆಚರಿಸುತ್ತಿದೆ. ನಿಜವಾಗಿ ಇದು ನಮ್ಮ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಾಗಿದೆ! ಇದು ವಿಭಜಿಸುವ ಕೋಮು ರಾಜಕೀಯದ ಫಲವಾಗಿದೆ. ಇದರಿಂದ ಸಮಾಜವು ನಿಶ್ಚಲ ಮತ್ತು ವಿಭಜಿಸುವ ಕತ್ತಲ ಪ್ರಪಾತಕ್ಕೆ ಎಸೆಯಲ್ಪಡುತ್ತದೆ. ನಮ್ಮ ಮುಖ್ಯ ಸಮಸ್ಯೆಯು ಆಹಾರ, ಬಟ್ಟೆ ಮತ್ತು ವಸತಿ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ಆರೆಸ್ಸೆಸ್ ರಾಮ ಮಂದಿರ ಮತ್ತು ಗೋವಿನಂಥ ಸಂವೇದನಾಶೀಲ ವಿಷಯಗಳ ಸುತ್ತ ತನ್ನ ಸಾಮಾಜಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಸ್ಥಾಪಿಸಿದೆ. ಇವುಗಳಿಂದಾಗಿ ಸಮಾಜದ ಮುಖ್ಯ ಸಮಸ್ಯೆಗಳು ಗೌಣವಾಗುತ್ತವೆ.

ನಮಗೆ ಶಾಲೆ ಮತ್ತು ಆಸ್ಪತ್ರೆಗಳನ್ನು ನಿರ್ಮಿಸುವ ಅಗತ್ಯವಿದೆ; ಉದ್ಯೋಗ ಒದಗಿಸುವ ಸಲುವಾಗಿ ಕಾರ್ಖಾನೆಗಳನ್ನು ನಿರ್ಮಿಸುವ ಅಗತ್ಯವಿದೆ. ಮುಂದಿನ ಚುನಾವಣಾ ಸಮಯದಲ್ಲೇ ಆಯೋಧ್ಯೆಯ ವಿಷಯ ಪ್ರಸ್ತಾಪವಾಗಿರುವುದು ದುರದೃಷ್ಟಕರ. ಮುಖ್ಯ ವಿಷಯಗಳನ್ನು ಪ್ರಸ್ತಾಪಿಸುವ ಬದಲು ಕೇಂದ್ರಬಿಂದುವಾಗಿ ಮಂದಿರ ಮತ್ತು ಮಸೀದಿಯ ವಿಷಯವಿರಲಿದೆ! ಸಮಾನತೆಯ ಸಮಾಜದತ್ತ ಚಲಿಸಲು ಬದ್ಧವಾಗಿರುವ ಎಲ್ಲರಿಗೂ ಒಂದು ರಾಷ್ಟ್ರವಾಗಿ ನಾವು ಯಾವ ರೀತಿ ಜನರ ಸಿದ್ಧಾಂತವನ್ನು ಮರಳಿ ತರಬಹುದು ಎಂಬುದೇ ಮುಖ್ಯ ಕಾಳಜಿಯ ವಿಷಯವಾಗಿರಬೇಕು.

Writer - ರಾಂ ಪುನಿಯಾನಿ

contributor

Editor - ರಾಂ ಪುನಿಯಾನಿ

contributor

Similar News

ಜಗದಗಲ
ಜಗ ದಗಲ