‘ಮೀ ಟೂ’ ದ್ವೇಷ ಸಾಧನೆಗೆ ಬಳಸುವ ಅಸ್ತ್ರ ಆಗದಿರಲಿ

Update: 2018-10-12 18:31 GMT

ತಮ್ಮ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಮಹಿಳೆಯರು ಧ್ವನಿಯೆತ್ತಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯದ ವಿರುದ್ಧ ಕೆಲವು ನಟಿಯರು ನಡೆಸುತ್ತಿರುವ ‘ಮೀ ಟೂ’ ಅಭಿಯಾನ ಎಷ್ಟರ ಮಟ್ಟಿಗೆ ನ್ಯಾಯ ಸಮ್ಮತ ಎಂಬುವುದಂತೂ ಕೇಳಲೇಬೇಕಾದ ಪ್ರಶ್ನೆ. ಯಾಕೆಂದರೆ ಇತ್ತೀಚೆಗೆ ಕೇಳಿಬರುತ್ತಿರುವ ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಅನೇಕ ಪ್ರಕರಣಗಳು ಬಹಳ ಹಿಂದಿನವುಗಳು. ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಮಾಡಿರುವ ಆರೋಪ (ಅವರ ಮೇಲೆ ಈಗಾಗಲೇ ಎಫ್‌ಐಆರ್ ದಾಖಲಾಗಿದೆ), ಇನ್ನೋರ್ವ ಹಿರಿಯ ಹಿಂದಿ ನಟ ಅಲೋಕ್‌ನಾಥ್ ಮೇಲೆ ಆರೋಪಿಸಲಾದ ಆರೋಪ, ಮಲಯಾಳಂ ನಟ ಮತ್ತು ಸಿಪಿಎಂ ಶಾಸಕ ಮುಖೇಶ್ ಮೇಲೆ ಹೊರಿಸಲಾದ ಆರೋಪ ಇವೆಲ್ಲ ಬಹಳ ಹಳೆಯ ಪ್ರಕರಣಗಳು. ನಾನಾ ಪಾಟೇಕರ್ ವಿರುದ್ಧ ಹತ್ತು ವರ್ಷಗಳ ಹಿಂದಿನ ಪ್ರಕರಣವಾದರೆ, ಅಲೋಕ್ ಮತ್ತು ಮುಖೇಶ್ ವಿರುದ್ಧದ ಆರೋಪಗಳು ಹತ್ತೊಂಬತ್ತು ವರ್ಷಗಳ ಹಿಂದಿನವುಗಳು. ಇವು ಕೆಲವು ಉದಾಹರಣೆಗಳಷ್ಟೇ. ಈ ಸರಣಿಯಲ್ಲಿ ಆರೋಪಿಸಲಾದ ಇನ್ನೂ ಅನೇಕ ಪ್ರಕರಣಗಳು ಬಹಳ ಹಿಂದಿನವುಗಳು.

ಇದೇ ನಾವು ಈ ಪ್ರಕರಣಗಳ ಸತ್ಯಾಸತ್ಯತೆಯ ಬಗ್ಗೆ ಸಂಶಯಪಡಲು ಮುಖ್ಯ ಕಾರಣ. ಇವುಗಳು ಸುಳ್ಳಾರೋಪಗಳೋ ಸತ್ಯವೋ ಎಂಬುವುದು ಎರಡನೇ ವಿಚಾರ. ಆದರೆ ನಮಗೆ ಈ ಪ್ರಕರಣಗಳಲ್ಲಿ ಎದುರಾಗುವ ಮುಖ್ಯ ಸವಾಲುಗಳೇನೆಂದರೆ ಇವರ ಮೇಲೆಲ್ಲಾ ಲೈಂಗಿಕ ದೌರ್ಜನ್ಯಗಳಾಗಿ ಇಷ್ಟು ವರ್ಷಗಳಾದರೂ ಇವರೇಕೆ ಈ ವರೆಗೆ ಸಹಿಸಿ ಕೂತಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯಗಳಾದಾಗ ಇವರೇಕೆ ಅವುಗಳನ್ನು ವಿರೋಧಿಸಲಿಲ್ಲ. ಅದರ ವಿರುದ್ಧ ದೂರು ದಾಖಲಿಸಿರಲಿಲ್ಲ? ಒಂದು ವೇಳೆ ಈ ರೀತಿಯ ಆರೋಪ ಹೊರಿಸುವವರು ಏನೇನೂ ಅರಿಯದ ನಿರಕ್ಷರಕುಕ್ಷಿ ಹಳ್ಳಿಗ ಮಹಿಳೆಯರಾಗಿದ್ದರೆ ಏನೋ ಸಮಾಜಕ್ಕೆ ಹೆದರಿ ಹಾಗೆ ಸುಮ್ಮನೆ ಸಹಿಸಿಕೊಂಡಿದ್ದರೆಂದು ಅವರ ಆರೋಪವನ್ನು ಸತ್ಯ ಎಂದು ನಂಬಿ ಬಿಡಬಹುದಿತ್ತು. ಖ್ಯಾತನಾಮರ ಮೇಲೆ ತಡವಾಗಿ ಆರೋಪ ಮಾಡುತ್ತಿರುವವರೆಲ್ಲಾ ಅವರ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾಗುವ ಕಾಲದಲ್ಲೂ ತಂತಮ್ಮ ಕ್ಷೇತ್ರಗಳಲ್ಲಿ ತುಸು ಹೆಸರು ಮಾಡಿಕೊಂಡವರೇ. ಈ ರೀತಿಯ ತಡವಾದ ಆರೋಪಗಳಲ್ಲಿ ದ್ವೇಷ ಸಾಧನೆಯ ಸಾಧ್ಯತೆಯೂ ಹೆಚ್ಚಿದೆ.

ನಮ್ಮ ಊಹೆಗಳು ಅದರಾಚೆಗೆ ಹೋಗಬಹುದು. ಇವರ ಮೇಲೆ ಆ ಕಾಲದಲ್ಲಿ ನಡೆದಿದೆಯೆನ್ನಲಾದ ಲೈಂಗಿಕ ದೌರ್ಜನ್ಯವು ದೌರ್ಜನ್ಯವಾಗಿರದೆ ಪರಸ್ಪರರ ಸಹಕಾರದೊಂದಿಗೆ ನಡೆದ ಕ್ರಿಯೆಯಾಗಿದ್ದು ಆ ಕಾಲದಲ್ಲಿದ್ದ ಸ್ನೇಹ ಹಳಸಿದಾಗ, ಈ ಕಾಲದಲ್ಲಿ ಅದಕ್ಕೆ ದೌರ್ಜನ್ಯದ ಹಣೆಪಟ್ಟಿ ಹಚ್ಚಿರುವ ಸಾಧ್ಯತೆಯೂ ಯಾಕಿರಬಾರದು? ಮನರಂಜನೆಯ ಕ್ಷೇತ್ರದಲ್ಲಿರುವ ಹೆಚ್ಚಿನವರ ಸ್ನೇಹ ಸಂಬಂಧಗಳು ಶಾಶ್ವತವಾಗಿ ಮಧುರವಾಗಿರುವುದಿಲ್ಲ ಎನ್ನುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ.

ಇಂತಹ ಆರೋಪಗಳು ನಿಜವೇ ಆಗಿದ್ದು ತಮ್ಮ ಮೇಲೆ ಅಂತಹ ದೌರ್ಜನ್ಯಗಳು ನಡೆದ ಕಾಲದಲ್ಲೇ ಅವರ ವಿರುದ್ಧ ದೂರು ನೀಡುತ್ತಿದ್ದಿದ್ದರೆ ಈ ಕಾಲಕ್ಕಾಗುವಾಗ ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಸ್ವಲ್ಪವಾದರೂ ಕಡಿಮೆಯಾಗುತ್ತಿತ್ತೇನೋ... ಈ ರೀತಿ ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸುವವರಿಗೂ ಸ್ವಲ್ಪಭಯವಾದರೂ ಹುಟ್ಟುತ್ತಿತ್ತೇನೋ.....

ಹೀಗೆ ಖ್ಯಾತನಾಮರ ಮೇಲೆ ಆರೋಪ ಹೊರಿಸುವವರು ಆ ಮೂಲಕ ತಮ್ಮ ಹೆಸರನ್ನು ಮರುಚಾಲ್ತಿಗೆ ತರಲು ಪ್ರಯತ್ನ ಮಾಡುತ್ತಿರಬಾರದೇಕೆ? ಇದೂ ಒಂದು ವಿಧದಲ್ಲಿ ಪ್ರಚಾರದ ತಂತ್ರವಾಗಿರಬಾರದೇಕೆ? ಸಿನೆಮಾ ಕ್ಷೇತ್ರದಲ್ಲಿ ಬೇಡಿಕೆ ಕಳಕೊಂಡ ನಟ,ನಟಿಯರು ಏಕಾಏಕಿ ಪ್ರಚಾರ ಗಿಟ್ಟಿಸಲು ಎಂತಹದ್ದೇ ಗಿಮಿಕ್ ಬೇಕಾದರೂ ಮಾಡಬಲ್ಲರು.

ಈ ರೀತಿ ಹತ್ತಾರು ವರ್ಷಗಳ ಬಳಿಕ ಆರೋಪ ಹೊರಿಸಿದರೆ ಅದು ಕೇವಲ ಆರೋಪವಾಗಿ ಮಾತ್ರ ಉಳಿಯಬಹುದಷ್ಟೇ. ಇಂತಹ ಆರೋಪಗಳಿಂದ ಆಪಾದಿತರು ಮುಜುಗರಕ್ಕೊಳಗಾಗಬಹುದು ಮತ್ತು ಅವಮಾನಿತರಾಗಬಹುದೇ ಹೊರತು ಇದೊಂದು ತಾರ್ಕಿಕ ಅಂತ್ಯ ಕಾಣುವುದೋ, ಸಂತ್ರಸ್ತೆಯರಿಗೆ ನ್ಯಾಯ ದೊರಕುವುದೋ, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದೋ ಅಷ್ಟು ಸುಭವೇನಲ್ಲ. ಇಂತಹ ಪ್ರಕರಣಗಳಿಗೆ ಯಾವುದೇ ಸಾಕ್ಷ್ಯಗಳು ಲಭ್ಯವಿರುವುದಿಲ್ಲ. ಒಂದು ವೇಳೆ ಲಭ್ಯವಿದ್ದರೂ ಇಷ್ಟು ವರ್ಷಗಳ ಬಳಿಕ ಯಾವ ಸಾಕ್ಷಿಗೂ ವಾಸ್ತವ ಚಿತ್ರಣ ನೆನಪಿನಲ್ಲುಳಿಯಲು ಸಾಧ್ಯವಿಲ್ಲ. ನಮ್ಮ ನ್ಯಾಯ ವ್ಯವಸ್ಥೆ ನಿಂತಿರುವುದೇ ಸಾಕ್ಷಿಗಳ ಆಧಾರದ ಮೇಲೆಯೇ. ಆದುದರಿಂದ ಹತ್ತು ವರ್ಷ, ಹತ್ತೊಂಬತ್ತು ವರ್ಷಗಳ ಬಳಿಕ ಸಾಕ್ಷಿ ಉಳಿಯಬಲ್ಲುದೇ...? ಅಥವಾ ಅಂತಹ ಸಾಕ್ಷ್ಯಗಳನ್ನು ಆರೋಪ ಹೊರಿಸಿರುವವರು ಸಂರಕ್ಷಿಸಿಟ್ಟಿದ್ದಾರೆಯೇ...? ಇಷ್ಟು ತಡವಾಗಿರುವ ಯಾವ ಪ್ರಕರಣವೂ ನ್ಯಾಯಾಲಯದಲ್ಲಿ ನಿಲ್ಲದು.

‘ಮೀ ಟೂ’ ಅಭಿಯಾನ ಒಳ್ಳೆಯದೇ. ಆದರೆ ಈ ರೀತಿಯ ಹತ್ತಿಪ್ಪತ್ತು ವರ್ಷಗಳ ಬಳಿಕದ ಪ್ರಕರಣಗಳನ್ನು ಈ ಮಧ್ಯೆ ತುರುಕುವುದರಿಂದ ವಿಷಯ ಗಂಭೀರತೆ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಇದರಿಂದ ತಾಜಾ ಪ್ರಕರಣಗಳು ವಿಶ್ವಾಸಾರ್ಹತೆ ಕಳಕೊಳ್ಳುವ ಸಾಧ್ಯತೆಯೂ ಇದೆ. ತಮ್ಮ ಮೇಲಾಗುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಮಹಿಳೆಯರು ಖಂಡಿತಾ ಧ್ವನಿಯೆತ್ತಲಿ. ಆದರೆ ಆ ಧ್ವನಿ ದ್ವೇಷ ಸಾಧನೆಯಾಗಬಾರದು. ಇದು ಮುಂದೊಂದು ದಿನ ಸಂಭಾವಿತ ವ್ಯಕ್ತಿಗಳ ಮೇಲಿನ ಇತರ ಯಾವುದೇ ಹಗೆ ತೀರಿಸಲು ಬಳಕೆಯಾಗಬಹುದಾದ ಸಾಧ್ಯತೆಯೂ ಇದೆ. ಈ ರೀತಿಯ ಅಭಿಯಾನ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಬಳಕೆಯಾಗಬೇಕೇ ಹೊರತು ತಮಗಾಗದವರ ಮೇಲೆ ಹಗೆ ಸಾಧಿಸಲು ಬಳಕೆಯಾಗುವ ರೀತಿಯಲ್ಲಿರಬಾರದು.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News