ಪುಸ್ತಕ ಹಳೆಯದಾದಂತೆ ಅದರ ಪುಟಗಳು ಹಳದಿ ವರ್ಣಕ್ಕೆ ತಿರುಗುವುದು ಏಕೆ ಗೊತ್ತೇ?

Update: 2018-10-12 18:35 GMT

ಪ್ರತಿ ಬಾರಿಯೂ ಹಳೆಯ ಪುಸ್ತಕವೊಂದನ್ನು ನೋಡಿದಾಗ ಅದರ ಪುಟಗಳು ಹಳದಿಯಾಗಿರುವುದೇಕೆ ಎಂದು ಅಚ್ಚರಿಗೊಂಡಿದ್ದೀರಾ? ಸುಮಾರು ಸಮಯದ ವರೆಗೆ ಬಳಕೆಯಾಗದ ಪುಸ್ತಕಗಳು ಅಥವಾ ವೃತ್ತಪತ್ರಿಕೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಇದಕ್ಕೆ ವೈಜ್ಞಾನಿಕ ಕಾರಣವಿದೆ.
ಸಾಮಾನ್ಯವಾಗಿ ಕಾಗದವನ್ನು ಮರದ ಬಿಳಿ ಸೆಲ್ಯುಲೋಸ್‌ನಿಂದ ತಯಾರಿಸಲಾಗುತ್ತದೆ. ಮರದಲ್ಲಿ ಲಿಗ್ನಿನ್ ಎಂಬ ಗಾಢವರ್ಣದ ವಸ್ತುವಿದ್ದು, ಇದು ಸಹ ಪೇಪರ್ ತಯಾರಿಕೆಯಲ್ಲಿ ಸೇರಿಕೊಳ್ಳುವ ಘಟಕವಾಗಿದೆ. ಇದು ಮರಗಳು ಬಾಗದೇ ನೇರವಾಗಿ ನಿಲ್ಲುವಂತೆ ಮಾಡುವ ಸಂಯುಕ್ತವಾಗಿದೆ. ಲಿಗ್ನಿನ್ ಸೆಲ್ಯುಲೋಸ್ ತಂತುಗಳನ್ನು ಬಂಧಿಸುವ ಅಂಟಿನಂತೆಯೂ ಕೆಲಸ ಮಾಡುತ್ತದೆ. ಈ ಲಿಗ್ನಿನ್ ಗಾಳಿ ಮತ್ತು ಸೂರ್ಯನ ಬೆಳಕಿಗೆ ತೆರೆದುಕೊಳ್ಳುವುದು ಕಾಗದವು ಹಳದಿ ಬಣ್ಣಕ್ಕೆ ತಿರುಗಲು ಮುಖ್ಯ ಕಾರಣವಾಗಿದೆ.
ಲಿಗ್ನಿನ್ ಕಣಗಳು ಗಾಳಿಯಲ್ಲಿನ ಆಮ್ಲಜನಕಕ್ಕೆ ತೆರೆದುಕೊಂಡಾಗ ಅವುಗಳಲ್ಲಿ ಬದಲಾವಣೆಗಳು ಆರಂಭಗೊಳ್ಳುತ್ತವೆ ಮತ್ತು ಅಸ್ಥಿರಗೊಳ್ಳತೊಡಗುತ್ತವೆ. ಲಿಗ್ನಿನ್ ಹೆಚ್ಚು ಬೆಳಕನ್ನು ಹೀರಿಕೊಳ್ಳುತ್ತದೆ ಮತ್ತು ಇದರ ಪರಿಣಾಮವಾಗಿ ಗಾಢವರ್ಣವನ್ನು ತಳೆಯುತ್ತದೆ.
ತಯಾರಿಕೆಯ ವೇಳೆ ಹೆಚ್ಚು ಲಿಗ್ನಿನ್ ತೆಗೆದಷ್ಟೂ ಕಾಗದವು ಹೆಚ್ಚು ಕಾಲ ಬಿಳಿಯಾಗಿ ಉಳಿಯುತ್ತದೆ. ಕಾಗದ ತಯಾರಕರು ಸಾಧ್ಯವಿದ್ದಷ್ಟು ಲಿಗ್ನಿನ್ ತೆಗೆಯಲು ಬ್ಲೀಚಿಂಗ್ ಪ್ರಕ್ರಿಯೆಯನ್ನು ಅನುಸರಿಸುತ್ತಾರಾದರೂ, ವೃತ್ತಪತ್ರಿಕೆಗಳು ಮತ್ತು ಪುಸ್ತಕಗಳ ತಯಾರಿಕೆಗೆ ಬಳಕೆಯಾಗುವ ಕಾಗದದ ಗುಣಮಟ್ಟ ಕಳಪೆಯಾಗಿರುತ್ತದೆ. ಇದೇ ಕಾರಣದಿಂದ ವೃತ್ತಪತ್ರಿಕೆಗಳು ಮತ್ತು ಪುಸ್ತಕಗಳ ಪುಟಗಳು ಕಾಲಕ್ರಮೇಣ ಹಳದಿ ಬಣ್ಣಕ್ಕೆ ತಿರುಗುತ್ತವೆ.

 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News

ಜಗದಗಲ
ಜಗ ದಗಲ