ಗೋಡೆಗೆ ವಿಮಾನ ಢಿಕ್ಕಿ ಹೊಡೆದರೂ ಪೈಲಟ್‌ಗಳಿಗೆ ಗೊತ್ತಾಗಲಿಲ್ಲ !

Update: 2018-10-13 04:48 GMT

ತಿರುಚ್ಚಿ, ಅ. 13: ದುಬೈಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನ ಟೇಕಾಫ್ ಆಗುವ ವೇಳೆ 50 ಅಡಿ ಎತ್ತರದ ಆವರಣ ಗೋಡೆಗೆ ಢಿಕ್ಕಿ ಹೊಡೆದು ವಿಮಾನಕ್ಕೆ ಹಾನಿ ಉಂಟಾದರೂ ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗಳ ಗಮನಕ್ಕೆ ಅದು ಬರಲಿಲ್ಲ !

ಹಾನಿಯಾದ ವಿಮಾನವನ್ನು ನಾಲ್ಕು ಗಂಟೆ ಕಾಲ ಚಲಾಯಿಸಿದ ಪೈಲಟ್‌ಗಳು ಕೊನೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಿದರು. ವಿಮಾನದಲ್ಲಿದ್ದ ಎಲ್ಲ 130 ಪ್ರಯಾಣಿಕರು ಹಾಗೂ ಸಿಬ್ಬಂದಿ ಪವಾಡಸದೃಶವಾಗಿ ಪಾರಾಗಿದ್ದಾರೆ.

ಗೋಡೆಗೆ ಅಪ್ಪಳಿಸಿದ್ದರಿಂದ ವಿಮಾನದ ಕೆಳಭಾಗಕ್ಕೆ ಭಾರೀ ಹಾನಿಯಾಗಿದೆ. ಇನ್ನಷ್ಟು ಕಾಲ ವಿಮಾನ ಹಾರಾಡಿದ್ದರೆ ಭಾರೀ ದುರಂತ ಸಂಭವಿಸುತ್ತಿತ್ತು ಎಂದು ಹಾನಿಯನ್ನು ಅಂದಾಜಿಸಿದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತಿರುಚ್ಚಿಯಿಂದ ಹೊರಟ ವಿಮಾನ, ಮುಂಬೈ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವ ನಡುವೆ ನಾಲ್ಕು ಗಂಟೆ ವಿಮಾನ ಹಾರಾಟ ನಡೆಸಿತ್ತು.

ದುಬೈಗೆ ಹೊರಟಿದ್ದ ಬೋಯಿಂಗ್ 737 ವಿಮಾನದಲ್ಲಿ 130 ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿ ಇದ್ದರು. ವಿಮಾನ ಓಲಾಡುತ್ತಾ ಕಂಪಿಸಿದಾಗ ಒಳಗಿದ್ದ ಪ್ರಯಾಣಿಕರು ಭೀತಿಯಿಂದ ಕಂಗೆಟ್ಟರು ಎಂದು ಪಿಟಿಐ ವರದಿ ಮಾಡಿದೆ. ಆದರೆ ಸಿಬ್ಬಂದಿ ಪ್ರಯಾಣಿಕರಿಗೆ, ಭೀತಿಪಡುವಂಥದ್ದೇನೂ ಆಗಿಲ್ಲ; ಪ್ರಯಾಣ ಮುಂದುವರಿಯುತ್ತದೆ ಎಂದು ಭರವಸೆ ನೀಡಿದರು.

"ತಿರುಚ್ಚಿ ನಿಲ್ದಾಣದಿಂದ ದುಬೈಗೆ ಹೊರಟ ವಿಮಾನ, ನಿಲ್ದಾಣದ ಆವರಣ ಗೋಡೆಗೆ ಸ್ಪರ್ಶಿಸಿರಬೇಕು. ಮುಖ್ಯ ಪೈಲಟ್‌ಗೆ ಈ ವಿಚಾರವನ್ನು ತಿಳಿಸಲಾಯಿತು. ಆದರೆ ವಿಮಾನ ಮಾಮೂಲಿನಂತೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆತ ಪ್ರತಿಕ್ರಿಯಿಸಿದ" ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಹೇಳಿದ್ದಾರೆ. ಬಳಿಕ ವಿಮಾನದ ಪಥ ಬದಲಾಯಿಸಿ ಮುಂಬೈ ನಿಲ್ದಾಣಕ್ಕೆ ಕಳುಹಿಸಲಾಯಿತು.

ಆದರೆ ಟೇಕಾಫ್ ಆದ ವಿಮಾನ 36 ಸಾವಿರ ಅಡಿ ಎತ್ತರ ತಲುಪಿ ದುಬೈ ಮಾರ್ಗದಲ್ಲಿ ಅರಬ್ಬಿ ಸಮುದ್ರದ ಅರ್ಧದಷ್ಟನ್ನು ಕ್ರಮಿಸಿತ್ತು ಎಂದು ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್‌ರಾಡಾರ್24 ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. ವಿಮಾನ ಗಂಟೆಗೆ 826 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ವಿಮಾನ ಇನ್ನಷ್ಟು ಯಾನ ಮುಂದುವರಿಸಿದ್ದರೆ, ಬಹಳಷ್ಟು ಬಿಡಿಭಾಗಗಳು ನಿಷ್ಕ್ರಿಯವಾಗುತ್ತಿದ್ದವು ಎಂದು ಏರ್ ಇಂಡಿಯಾ ಮಾಜಿ ಪೈಲಟ್ ವಿಕೆ ಕುಕಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News