ವಿಶ್ವಸಂಸ್ಥೆಯಲ್ಲಿ ಶೀಘ್ರವೇ ವಿಜಯಲಕ್ಷ್ಮಿ ಪಂಡಿತ್ ಚಿತ್ರ

Update: 2018-10-13 17:23 GMT

ವಿಶ್ವಸಂಸ್ಥೆ, ಅ. 13: “ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದ ವಿಜಯಲಕ್ಷ್ಮಿ ಪಂಡಿತ್ ನನಗೆ ಸ್ಫೂರ್ತಿಯಾಗಿದ್ದು, ಅವರ ಚಿತ್ರವನ್ನು ನನ್ನ ಕಚೇರಿಯಲ್ಲಿ ಇಡಲು ಉದ್ದೇಶಿಸಿದ್ದೇನೆ” ಎಂದು ಜನರಲ್ ಅಸೆಂಬ್ಲಿಯ ಹಾಲಿ ಅಧ್ಯಕ್ಷೆ ಮರಿಯಾ ಫೆರ್ನಾಂಡ ಎಸ್ಪಿನೋಸ ಹೇಳಿದ್ದಾರೆ.

ಈ ವಿಷಯವನ್ನು ಮರಿಯಾರನ್ನು ಭೇಟಿಯಾದ ಭಾರತೀಯ ಸಂಸದ, ಸಿಕ್ಕಿಮ್ ಡೆಮಾಕ್ರಟಿಕ್ ಫ್ರಂಟ್‌ನ ಪ್ರೇಮ್‌ದಾಸ್ ರೈ ತಿಳಿಸಿದರು.

ವಿಶ್ವಸಂಸ್ಥೆಯಲ್ಲಿ ವಿಜಯಲಕ್ಷ್ಮಿ ಪಂಡಿತ್ ಮಾಡಿದ ಸಾಧನೆಗಳಿಂದ ಸ್ಫೂರ್ತಿ ಪಡೆದು ತಾನು ಈ ಹುದ್ದೆಗೆ ಏರಿದೆ ಎಂಬುದಾಗಿ ತನ್ನನ್ನು ಭೇಟಿಯಾದ ಭಾರತೀಯ ಸಂಸದರ ಗುಂಪೊಂದಕ್ಕೆ ಮರಿಯಾ ತಿಳಿಸಿದರು ಎಂದು ರೈ ಹೇಳಿದರು.

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಅಧ್ಯಕ್ಷತೆ ವಹಿಸಿದ ಕೇವಲ ನಾಲ್ಕನೇ ಮಹಿಳೆ ಮರಿಯಾ ಆಗಿದ್ದಾರೆ. ವಿಶ್ವಸಂಸ್ಥೆಯ ಇತಿಹಾಸದಲ್ಲಿ ಈವರೆಗೆ 69 ಪುರುಷರು ಈ ಹುದ್ದೆಗೆ ಏರಿದ್ದಾರೆ.

ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ 1953ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಮುಖ್ಯಸ್ಥೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News