ಎಲ್ಲಿ ಹೋದ ಸಾವಿರ ರನ್ ಗಳಿಸಿದ ಆ ಹುಡುಗ?

Update: 2018-10-14 05:00 GMT

ಟೀಕೆಗಳಿಗಿಂತ ಹೊಗಳುವಿಕೆಯಲ್ಲೇ ನಾವು ನಾಶವಾಗುವುದು ಹೆಚ್ಚು. ಇದು ಬದುಕಿನಲ್ಲಿ ಹೆಚ್ಚಿನವರ ಅನುಭವಕ್ಕೆ ಬಂದಿರುತ್ತದೆ. ಹೊಗಳಿ ಹೊನ್ನ ಶೂಲಕ್ಕೆ ಏರಿಸಿದಾಗ ನಾವು ನಮ್ಮನ್ನು ಮರೆತು ಬಿಡುವುದೇ ಇದಕ್ಕೆ ಕಾರಣ. ಕ್ರೀಡೆಯಲ್ಲೂ ಹೀಗೆ ಆಗಿರುವುದಕ್ಕೆ ಹಲವು ಉದಾಹರಣೆಗಳಿವೆ. ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಂಬೈಯ ಆಟಗಾರ ಪ್ರಥ್ವಿ ಶಾ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಅಚ್ಚರಿ ಮೂಡಿಸಿದರು. ಇಲ್ಲಿ ಪ್ರಥ್ವಿಯ ಬ್ಯಾಟಿಂಗ್ ಸಾಮರ್ಥ್ಯದ ಜತೆಯಲ್ಲಿ ವಿಂಡೀಸ್‌ನ ಬೌಲಿಂಗ್ ಕೂಡ ಮುಖ್ಯವಾಗಿರುತ್ತದೆ. ಪ್ರಥ್ವಿಯನ್ನು ಮುಂದಿನ ಸಚಿನ್ ತೆಂಡುಲ್ಕರ್, ನಂತರದ ವೀರೇಂದ್ರ ಸೆಹವಾಗ್, ಸುನಿಲ್ ಗವಾಸ್ಕರ್‌ಗೆ ಹೋಲಿಸಿ ನಾವು ಆ ದಿನವನ್ನು ಕಳೆದವು. ಇದೇ ವೇಳೆ ನನಗೆ ನೆನಪಿಗೆ ಬಂದದ್ದು 2016ರಲ್ಲಿ ಒಂದೇ ಇನಿಂಗ್ಸ್ ನಲ್ಲಿ 1009 ರನ್ ಸಿಡಿಸಿದ ಮಹಾರಾಷ್ಟ್ರದ ಕಲ್ಯಾಣದ ಪ್ರಣವ್ ಧನವಾಡೆ. ಕೂಡಲೇ ದೂರವಾಣಿ ಮೂಲಕ ಆತನನ್ನು ಸಂಪರ್ಕಿಸಲು ಯತ್ನಿಸಿದಾಗ, ‘‘ನೌ ಗಣೇಶ್ ಫೆಸ್ಟಿವಲ್, ಕಾಲ್ ಮಿ ಆಫ್ಟರ್ ಫಿವ್ ಡೇಸ್,’’ ಎಂಬ ಮೆಸೇಜ್ ಬಂತು. ನಂತರ ಕೆಲವು ದಿನ ಬಿಟ್ಟು ಮಾತನಾಡಿಸಿದಾಗ ಆತ ಸಂದರ್ಶನ ನೀಡಲು ನಿರಾಕರಿಸಿದ. ಏಕೆಂದರೆ ಮಾಧ್ಯಮಗಳು ಹೊಗಳುವುದು ಆತನಿಗೆ ಇಷ್ಟವಿಲ್ಲವಂತೆ. ಇದು ಸತ್ಯದ ಮಾತು. ಏಕೆಂದರೆ ನಾವು ಕ್ರಿಕೆಟ್ ಆಟವನ್ನು ಆ ಹಂತಕ್ಕೆ ತಲುಪಿಸಿದ್ದೇನೆ. ಜಗತ್ತಿನಲ್ಲಿ ಕೆಲವೇ ರಾಷ್ಟ್ರಕಗಳು ಕ್ರಿಕೆಟ್ ಆಡುತ್ತಿದ್ದರೂ ನಾವು ವಿಶ್ವವೇ ಕ್ರಿಕೆಟ್ ಆಟದಲ್ಲಿ ತೊಡಗಿಕೊಂಡಂತೆ ಬರೆಯುತ್ತೇವೆ, ಬಿಂಬಿಸುತ್ತೇವೆ.
  ಪ್ರಣವ್ ಒಂದೇ ಇನಿಂಗ್ಸ್‌ನಲ್ಲಿ ಸಾವಿರ ರನ್ ಗಳಿಸುತ್ತಿದ್ದಂತೆ ಕೆ.ಸಿ. ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಗಣಕ್ಕೆ ದಾಳಿ ಮಾಡಿದಂತೆ ಮಾಧ್ಯಮಗಳು ಜಮಾಯಿಸಿದವು. ಅವನ ಆಹಾರ ಶೈಲಿ, ಅವನ ಬದುಕು, ಶಿಕ್ಷಣ, ಆಟದ ಶೈಲಿ ಸೇರಿದಂತೆ ಅವನು ಮುಂದೆ ಮತ್ತೊಬ್ಬ ಸಚಿನ್ ತೆಂಡುಲ್ಕರ್, ಅವನು ಮುಂದಿನ ವಿರಾಟ್ ಕೊಹ್ಲಿ ಎಂದು ಬಿಂಬಿಸತೊಡಗಿದವು. ಈ ಸಂಭ್ರಮದ ಹೊಗಳಿಕೆಗೆ ಸ್ಪಂದಿಸಿದ ಮುಂಬೈ ಕ್ರಿಕೆಟ್ ಸಂಸ್ಥೆ ಆತನ ಭವಿಷ್ಯಕ್ಕಾಗಿ ತಿಂಗಳ ವಿದ್ಯಾರ್ಥಿ ವೇತನವನ್ನೂ ಪ್ರಕಟಿಸಿತು.
ಆದರೆ ... ಕ್ರಿಕೆಟ್ ಎಂಬುದು ಅವಕಾಶದ ಆಟ. ನಿನ್ನೆ ಶತಕ ಸಿಡಿಸಿದ ಆಟಗಾರ ಇಂದು ಶೂನ್ಯಕ್ಕೆ ಔಟಾಗಬಹುದು. ನಿನ್ನೆ ಶೂನ್ಯ ರನ್ ಗಳಿಸಿದವ ಇಂದು ಶತಕ ಸಿಡಿಸಿ ಸಂಭ್ರಮಿಸಬಹುದು. ಐದು ಎಸೆತಗಳಲ್ಲಿ ರನ್ ನೀಡದ ಬೌಲರ್ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆಸಿಕೊಳ್ಳಬಹುದು. ಪ್ರಣವ್ ಧನವಾಡೆ ಬದುಕಿನಲ್ಲೂ ಹಾಗೆಯೇ ಆಯಿತು. ನಂತರದ ಪಂದ್ಯಗಳಲ್ಲಿ ಈ ಹೊಸ ತಾರೆ ರನ್ ಗಳಿಸುವಲ್ಲಿ ವಿಫಲನಾದ. ಸಾಮಾನ್ಯ ಆಟಗಾರನಾಗಿಬಿಟ್ಟ. ಮಾಧ್ಯಮಗಳು ಕೂಡ ಸುಮ್ಮನಾದವು. ಪ್ರಣವ್ ಧನವಾಡೆ ಹನ್ನೊಂದರಲ್ಲಿ ಒಬ್ಬನಾದ. ಬ್ಯಾಟಿಂಗ್‌ನಲ್ಲಿ ವಿಫಲನಾಗತೊಡಗಿದ. ತಾಂತ್ರಿಕವಾಗಿ ಪಳಗಿರದ ಆತ ಬೆಂಗಳೂರಿಗೆ ತರಬೇತಿಗಾಗಿ ಬಂದ. ಎರಡು ವರ್ಷ ರನ್‌ಗಾಗಿ ಪರದಾಡಿದ ಪ್ರಣವ್ ಇತ್ತೀಚಿಗೆ ನಡೆದ ಪಂದ್ಯವೊಂದರಲ್ಲಿ ದ್ವಿಶತಕ ಸಿಡಿಸಿ ಆತ್ಮವಿಶ್ವಾಸ ಮರಳಿ ಪಡೆದ. ಈ ಬಾರಿ ಮಾಧ್ಯಮಗಳಿಂದ ದೂರ ಇದ್ದದ್ದು ವಿಶೇಷವಾಗಿತ್ತು.


  ಎರಡೇ ದಿನಗಳಲ್ಲಿ ಸ್ಟಾರ್ ಆಗಿದ್ದ ಪ್ರಣವ್‌ಗೆ ಮುಂಬೈ ಕ್ರಿಕೆಟ್ ಸಂಸ್ಥೆಯೂ ವಿದ್ಯಾರ್ಥಿ ವೇತನವನ್ನು ಪ್ರತಿ ತಿಂಗಳ ಕಂತಿನಲ್ಲಿ ನೀಡಲು ಮುಂದೆ ಬಂತು. ಎಲ್ಲ ಪತ್ರಿಕೆಗಳಲ್ಲೂ ನಿತ್ಯವೂ ಸಂದರ್ಶನ ಬರತೊಡಗಿತು. ಎಂಸಿಎ ವಿದ್ಯಾರ್ಥಿವೇತನವನ್ನು ಕೆಲವು ತಿಂಗಳವರೆಗೂ ಮುಂದುವರಿಸಿತ್ತು. ಆದರೆ ದಿನ ಕಳೆದಂತೆ ಪ್ರಣವ್ ಬ್ಯಾಟಿಂಗ್‌ನಿಂದ ರನ್ ಮಾತ್ರ ಬರುತ್ತಿರಲಿಲ್ಲ. ಆಗ ಪ್ರಣವ್ ಕೈಗೊಂಡ ತೀರ್ಮಾನ ಮಾತ್ರ ಅಚ್ಚರಿಯಾಗಿತ್ತು. ನೇರವಾಗಿ ಮುಂಬೈ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದು ‘‘ಇನ್ನು ಮುಂದೆ ನನಗೆ ವಿದ್ಯಾರ್ಥಿ ವೇತನ ನೀಡುವುದು ಬೇಡ. ಏಕೆಂದರೆ ಆ ಗೌರವಕ್ಕೆ ತಕ್ಕುದಾದ ಪ್ರದರ್ಶನ ನನ್ನಿಂದ ನೀಡಲಾಗುತ್ತಿಲ್ಲ’’ ಎಂದು ತಿಳಿಸಿದ. ಜಗತ್ತಿನ ಕ್ರೀಡಾ ಇತಿಹಾಸ ಅಥವಾ ಯಾವುದೇ ಶೈಕ್ಷಣಿ ಸಂಸ್ಥೆಯಲ್ಲಿ ವಿದ್ಯಾರ್ಥಿ ವೇತನವನ್ನು ಫಲಾನುಭವಿಯೇ ತನ್ನ ಸ್ವಂತ ನಿಲುವಿನಿಂದ ಹಿಂದಿರುಗಿಸಿದ್ದು ಬಹಳ ವಿರಳ.
‘‘ಸರ್ ಈ ಕಾರಣಕ್ಕಾಗಿಯೇ ನಾನು ಮಾಧ್ಯಮಗಳಿಗೆ ಸಂದರ್ಶನ ನೀಡಲು ಹೆದರುತ್ತೇನೆ’’ ಎಂದು ಪ್ರಣವ್ ಧನವಾಡೆ ಹೇಳಿದಾಗ ನಮ್ಮ ಉತ್ಪ್ರೇಕ್ಷೆ ಆತನ ಮೇಲೆ ಯಾವ ರೀತಿಯ ಪರಿಣಾಮ ಬೀರಿರಬಹುದು ಎಂಬುದು ಸ್ಪಷ್ಟವಾಗುತ್ತದೆ. ಹಿಂದಿನ ಪಂದ್ಯದಲ್ಲಿ ಒಂದು ಸಾವಿರ ರನ್ ಗಳಿಸಿದ ನಾನು ಇಲ್ಲಿ ಅದೇ ರೀತಿ ಉತ್ತಮವಾಗಿ ಆಡಬೇಕು. ಇಲ್ಲವಾದಲ್ಲಿ ಜನ ನನ್ನನ್ನು ನಂಬುವುದಿಲ್ಲ, ಎಂಬ ಯೋಚನೆ ಆ ಯುವ ಕ್ರಿಕೆಟಿಗನ ಮನದಲ್ಲಿ ಹಾದು ಹೋಗಿರಬಹುದು. ಆತ ಸಹಜವಾಗಿಯೇ ಒತ್ತಡಕ್ಕೆ ಸಿಲುಕಿದ. ಉತ್ತಮ ಪ್ರದರ್ಶನವು ಕೂಡ ಒಮ್ಮೆಮ್ಮೆ ಕ್ರೀಡಾಪಟುವನ್ನು ಒತ್ತಡಕ್ಕೆ ಸಿಲುಕಿಸುತ್ತದೆ. ಅದು ಚಿಕ್ಕವಯಸ್ಸಿನವರಾಗಿದ್ದರೆ ಇನ್ನೂ ಹೆಚ್ಚು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
  ಪ್ರಣವ್ ಈಗ ಆ ಎಲ್ಲ ಉತ್ಪ್ರೇಕ್ಷೆಗಳಿಂದ ಹೊರ ಬಂದು ಆಡುತ್ತಿದ್ದಾರೆ. ಕಲ್ಯಾಣದ ಈ ಹುಡುಗನನ್ನು ಬಿಟ್ಟು ದಕ್ಷಿಣ ವಲಯದ ಪಂದ್ಯಕ್ಕೆ ಸಚಿನ್ ತೆಂಡುಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿದಾಗ ಮುಂಬೈ ಕ್ರಿಕೆಟ್ ಸಂಸ್ಥೆ ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಿತ್ತು. ದಾಖಲೆ ಮಾಡಿದವ ಮನೆಯಲ್ಲಿ, ಸಚಿನ್ ಮಗ ಅಂಗಣದಲ್ಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿತ್ತು. ಆದರೆ ಅರ್ಜುನ್ ಆಯ್ಕೆಯನ್ನು ಪ್ರಣವ್ ಸಮರ್ಥಿಸಿಕೊಂಡಿರುವುದು ಅವರಲ್ಲೊಬ್ಬ ನೈಜ ಕ್ರೀಡಾಪಟು ಇದ್ದಾನೆ ಎಂಬುದನ್ನು ಸಾಬೀತುಪಡಿಸುತ್ತದೆ. ನಾನೊಬ್ಬ ವಿಕೆಟ್ ಕೀಪರ್ ಮತ್ತು ಬ್ಯಾಟ್ಸಮನ್, ಅರ್ಜುನ್ ಒಬ್ಬ ಆಲ್ರೌಂಡರ್, ತಂಡಕ್ಕೆ ಯಾರ ಅಗತ್ಯವಿದೆಯೋ ಅವರನ್ನು ಆಯ್ಕೆ ಮಾಡಾಗಿದೆ. ಎಂದು ಪ್ರಣವ್ ಹೇಳುತ್ತಾರೆ.

ಹೊಗಳಿಕೆಯ ಹೊನ್ನಶೂಲಕ್ಕೇರಿ ಕೆಳಗಿಳಿಯದ ಆಟಗಾರನೆಂದರೆ ಅದು ದಿಲ್ಲಿಯ ಉನ್ಮುಕ್ತ್ ಚಾಂದ್. 2012ರ 19 ವರ್ಷ ವಯೋಮಿತಿಯ ವಿಶ್ವಕಪ್‌ನಲ್ಲಿ ಶತಕ ಸಿಡಿಸಿ ಭಾರತಕ್ಕೆ ಮೂರನೇ ಬಾರಿಗೆ ವಿಶ್ವಕಪ್ ತಂದುಕೊಟ್ಟ ಆಟಗಾರನಿಗೆ ಇನ್ನೂ ಭಾರತ ತಂಡಕ್ಕೆ ಕಾಲಿಡಲಾಗಲಿಲ್ಲ. ವಿರಾಟ್ ಕೊಹ್ಲಿ ಇದೇ ರೀತಿಯ ಸಾಧನೆ ಮಾಡಿದಾಗ ಭಾರತದ ಭವಿಷ್ಯದ ತಾರೆ ಎಂದು ಜನ ಹೊಗಳಿದರು. ಕೊಹ್ಲಿ ಅದನ್ನು ಅಂಗಣದಲ್ಲಿ ಸಾಧನೆ ಮಾಡಿ ತೋರಿಸಿದರು. ಅದೇ ರೀತಿ ಚಾಂದ್ ಅವರನ್ನೂ ಮಾಧ್ಯಮಗಳು ಹಾಗೂ ಜನ ಹೊಗಳಿತ್ತು. ಆದರೆ ಚಾಂದ್ ಅವರನ್ನು ಕಾಡಿದ ಹೊಗಳಿಕೆಯ ಮೋಡ ಕರಗಲೇ ಇಲ್ಲ. ಅವರ ಕೃತಿಯೇ ಹೇಳುವಂತೆ ‘ಸ್ಕೈ ಈಸ್ ಲಿಮಿಟ್’. ಐಪಿಎಲ್ ಸೇರಿದಂತೆ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಲು ವಿಫಲರಾದ ಉನ್ಮುಕ್ತ್ ಚಾಂದ್ ಕಿರಿಯರ ವಿಶ್ವಕಪ್ ಅವರ ಪಾಲಿನ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯದಂತೆ ಗ್ರಹಣವಾಯಿತು. ಹೊಗಳಿಕೆಯ ಗಾಳಿಗೆ ಮೈಯೊಡ್ಡಿದ ಅವರಿಗೆ ಅದರಿಂದ ಹೊರ ಬರಲಾಗಲಿಲ್ಲ. ಈಗ ಅಲ್ಲಿಲ್ಲಿ ಮಿಂಚುತ್ತ, ದಿಲ್ಲಿಗೇ ಸೀಮಿತವಾಗಿದ್ದಾರೆ. ಲೋಕದಲ್ಲಿ ಸ್ತುತಿ ನಿಂದೆಗಳು ಬಂದಾಗ ಸಮಾಧಾನಿಯಾಗಿರಬೇಕು. ಅದು ನಮ್ಮ ಸಾಧನೆಯ ಹಾದಿಗೆ ಅಡ್ಡಿಯಾಗದಂತೆ ಸ್ವೀಕರಿಸಬೇಕು. ಅದು ನಾವು ಸೇವಿಸುವ ಆಹಾರದಂತೆ ಹಿತಮಿತವಾಗಿದ್ದರೆ ಆರೋಗ್ಯಕ್ಕೆ ಉತ್ತಮ. ಇಲ್ಲವಾದಲ್ಲಿ ಅದು ನಮ್ಮ ಆರೋಗ್ಯವನ್ನೇ ಕೆಡಿಸಬಹುದು. ಕ್ರಿಕೆಟ್ ಅಂಗಣದ ಈ ಪಾಠ ಬದುಕಿನಂಗಣಕ್ಕೂ ಅನ್ವಯಿಸುತ್ತದೆ.

Writer - ಸೋಮಶೇಕರ ಪಡುಕರೆ

contributor

Editor - ಸೋಮಶೇಕರ ಪಡುಕರೆ

contributor

Similar News