ಲಂಕಾ ವಿರುದ್ಧ ಆಂಗ್ಲರಿಗೆ ರೋಚಕ ಜಯ

Update: 2018-10-13 19:09 GMT

ಡಂಬುಲಾ, ಅ.13: ಎರಡನೇ ಏಕದಿನ ಪಂದ್ಯಕ್ಕೆ ಮಳೆ ಬಾಧಿಸಿದರೂ, ಆತಿಥೇಯ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 31 ರನ್‌ಗಳ ರೋಚಕ ಜಯ ಗಳಿಸಿದೆ. ಡಂಬುಲಾದ ರಂಗಿರಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡಕ್‌ವರ್ಥ್ ಲೂವಿಸ್ ನಿಯಮದಂತೆ ಗೆಲುವಿಗೆ 172 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ತಂಡ 29 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 140 ರನ್ ಗಳಿಸಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.

 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 278 ರನ್ ಗಳಿಸಿತ್ತು. ನಾಯಕ ಇಯಾನ್ ಮೊರ್ಗನ್ 8 ರನ್‌ನಿಂದ ಶತಕ ವಂಚಿತಗೊಂಡರು. ಅವರು 91 ಎಸೆತಗಳಲ್ಲಿ 11ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 92 ರನ್ ಗಳಿಸಿದರು. ಜೋ ರೂಟ್ 71 ರನ್(83ಎ, 6ಬೌ) ಗಳಿಸಿ ತಂಡದ ಸ್ಕೋರ್ 270ರ ಗಡಿ ದಾಟಲು ನೆರವು ನೀಡಿದರು.

ವೇಗಿ ಲಲಿತ್ ಮಾಲಿಂಗ(44ಕ್ಕೆ 5) ದಾಳಿಗೆ ಸಿಲುಕಿದ ಇಂಗ್ಲೆಂಡ್ ಖಾತೆ ತೆರೆಯುವ ಮೊದಲೇ ಮೊದಲ ವಿಕೆಟ್‌ನ್ನು ಕಳೆದುಕೊಂಡಿತ್ತು. ಮಾಲಿಂಗರ ಮೊದಲ ಎಸೆತದಲ್ಲಿ ಜೇಸನ್ ರಾಯ್(0) ಅವರು ಧನಂಜಯ್‌ಗೆ ಕ್ಯಾಚ್ ನೀಡಿದರು.

  ಎರಡನೇ ವಿಕೆಟ್‌ಗೆ ಬೈರ್‌ಸ್ಟೋವ್ ಮತ್ತು ಜೋ ರೂಟ್ 72 ರನ್‌ಗಳ ಜೊತೆಯಾಟ ನೀಡಿದರು. 14ನೇಓವರ್‌ನ ಕೊನೆಯ ಎಸೆತದಲ್ಲಿ ಬೈರ್‌ಸ್ಟೋವ್ (26) ಅವರು ತಿಸ್ಸರಾ ಪೆರೆರಾ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

 ಮೂರನೇ ವಿಕೆಟ್‌ಗೆ ರೂಟ್ ಮತ್ತು ನಾಯಕ ಇಯಾನ್ ಮೊರ್ಗನ್ 68 ರನ್ ಸೇರಿಸಿದರು.

ರೂಟ್ 71 ರನ್ ಗಳಿಸಿ ಧನಂಜಯ್ ಡಿ ಸಿಲ್ವಗೆ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್ 15 ರನ್, ವಿಕೆಟ್ ಕೀಪರ್ ಜೋಸ್ ಬಟ್ಲರ್ 28 ರನ್, ಆದಿಲ್ ರಶೀದ್ ಔಟಾಗದೆ 19ರನ್, ಕ್ರಿಸ್ ವೋಕ್ಸ್ 5ರನ್, ಲಿಯಾಮ್ ಡಾವ್ಸನ್ 4ರನ್ ಮತ್ತು ಸ್ಟೋನ್ ಔಟಾಗದೆ 9 ಗಳಿಸಿದರು. ಲಂಕಾದ ನುವಾನ್ ಪ್ರದೀಪ್ , ಅಖಿಲ್ ಧನಂಜಯ್ , ತಿಸ್ಸರಾ ಪೆರೆರಾಮತ್ತು ಧನಂಜಯ್ ಡಿ ಸಿಲ್ವ ತಲಾ 1 ವಿಕೆಟ್ ಪಡೆದರು. ಗೆಲುವಿಗೆ 279 ರನ್ ಗಳಿಸಬೇಕಿದ್ದ ಶ್ರೀಲಂಕಾ 74 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. 6ನೇ ವಿಕೆಟ್‌ಗೆ ತಿಸ್ಸರಾ ಪೆರೆರಾ (44) ಮತ್ತು ಧನಂಜಯ್ ಡಿ ಸಿಲ್ವ(36) ಅವರು 66 ರನ್‌ಗಳ ಜೊತೆಯಾಟ ನೀಡಿದರು. 29 ಓವರ್‌ಗಳಲ್ಲಿ ಶ್ರೀಲಂಕಾ 5 ವಿಕೆಟ್ ನಷ್ಟದಲ್ಲಿ 140 ರನ್ ಗಳಿಸುವಷ್ಟರಲ್ಲಿ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು.ಮತ್ತೆ ಆಟ ಆರಂಭಗೊಳ್ಳಲಿಲ್ಲ. 29 ಓವರ್‌ಗಳ ಮುಕ್ತಾಯಕ್ಕೆ ಇಂಗ್ಲೆಂಡ್ 171 ರನ್ ಗಳಿಸಿತ್ತು. ಡಿಎಲ್ ನಿಯಮದಂತೆ ಇಂಗ್ಲೆಂಡ್ 31 ರನ್‌ಗಳ ಗೆಲುವು ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News