ಮಹಾರಾಷ್ಟ್ರ ಸರ್ಕಾರದಿಂದ ಮನೆ ಮನೆಗೆ ಮದ್ಯ !

Update: 2018-10-14 03:33 GMT

ನಾಗ್ಪುರ, ಅ. 14: ಮದ್ಯ ಪ್ರಿಯರಿಗೊಂದು ಸಿಹಿ ಸುದ್ದಿ. ಮಹಾರಾಷ್ಟ್ರದಲ್ಲಿ ಪ್ರತಿ ಮನೆಗಳಿಗೆ ನೇರವಾಗಿ ಮದ್ಯ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಇಂಥ ವ್ಯವಸ್ಥೆಯನ್ನು ಆರಂಭಿಸುವ ಭಾರತದ ಮೊಟ್ಟಮೊದಲ ರಾಜ್ಯ ಎಂಬ (ಕು)ಖ್ಯಾತಿಗೆ ಮಹಾರಾಷ್ಟ್ರ ಪಾತ್ರವಾಗಲಿದೆ.

ಮಹಾರಾಷ್ಟ್ರದ ಅಬ್ಕಾರಿ ಖಾತೆ ರಾಜ್ಯ ಸಚಿವ ಚಂದ್ರಶೇಖರ ಭವಾನ್‌ಕುಲೆ ಈ ವಿಷಯ ಬಹಿರಂಗಪಡಿಸಿದ್ದಾರೆ. ಇದು ರಾಜ್ಯದಲ್ಲಿ ಮದ್ಯೋದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಲಿದೆ ಎಂದು ಸಚಿವರು ಹೇಳಿಕೊಂಡಿದ್ದಾರೆ.

"ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವುದರಿಂದ ಆಗುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಪರಿಣಾಮವಾಗಿ ಹಲವು ಜೀವಗಳು ನಷ್ಟವಾಗುತ್ತಿವೆ. ಇದನ್ನು ತಡೆಯುವುದು ಈ ವಿನೂತನ ಯೋಜನೆಯ ಉದ್ದೇಶ" ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮಾದರಿಯ ಪ್ಲಾಟ್‌ಫಾರಂ ಮೂಲಕ ಮದ್ಯ ಸರಬರಾಜು ಮಾಡಲು ಉದ್ದೇಶಿಸ ಲಾಗಿದೆ. "ನಾಗರಿಕರು ದಿನಸಿ ಮತ್ತು ತರಕಾರಿಯನ್ನು ಪಡೆಯುವಂತೆ ಮದ್ಯವನ್ನು ಪಡೆಯಲೂ ವ್ಯವಸ್ಥೆ ಮಾಡಲಾಗುತ್ತದೆ" ಎಂದರು.

ಎನ್‌ಸಿಆರ್‌ಬಿ ಅಂಕಿ ಅಂಶಗಳಿಂದ ತಿಳಿದುಬರುವಂತೆ 2015ರಲ್ಲಿ ಸಂಭವಿಸಿದ ಒಟ್ಟು 4.64 ಲಕ್ಷ ರಸ್ತೆ ಅಪಘಾತಗಳಲ್ಲಿ 1.5 % ಅಪಘಾತಗಳು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪರಿಣಾಮ ಸಂಭವಿಸಿವೆ. ಇದರಿಂದ 6,295 ಮಂದಿಗೆ ಗಾಯಗಳಾಗಿದ್ದು, 2,988 ಸಾವುಗಳು ಸಂಭವಿಸಿದೆ ಮತ್ತು ದಿನಕ್ಕೆ ಸರಾಸರಿ 8 ಮಂದಿ ಸಾಯುತ್ತಿದ್ದಾರೆ.

ಆನ್‌ಲೈನ್ ಮದ್ಯ ಖರೀದಿಗೆ ವಯಸ್ಸಿನ ಮಾನದಂಡ ಅನುಸರಿಸುವುದು ಅಗತ್ಯ. ನೇರ ಮಾರಾಟಗಾರರು ಗ್ರಾಹಕರ ಸಂಪೂರ್ಣ ವಿವರಗಳನ್ನು ಅಂದರೆ ಆಧಾರ್ ಸಂಖ್ಯೆ ಪಡೆದು ಆ ಮೂಲಕ ಅವರ ವಯಸ್ಸು ಮತ್ತು ಗುರುತು ದೃಢೀಕರಿಸಿಕೊಂಡು ಮದ್ಯ ವಿತರಿಸಲಿದ್ದಾರೆ ಎಂದು ಸಚಿವರು ವಿವರ ನೀಡಿದರು. ಮದ್ಯ ಬಾಟಲಿಗಳಿಗೆ ಜಿಯೊ ಟ್ಯಾಗ್ ಅಳವಡಿಸಿ ಅವುಗಳ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಗಾ ಇಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News