ಮೇಲ್ಜಾತಿಯ ವೈದ್ಯರು ಚಿಕಿತ್ಸೆ ನೀಡಬೇಕೆಂದು ರೋಗಿಯ ಸಂಬಂಧಿಕರಿಂದ ಹಲ್ಲೆ: ಆರೋಪ

Update: 2018-10-14 15:53 GMT

ಭೋಪಾಲ, ಅ.14: ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಮೇಲ್ಜಾತಿಯ ವೈದ್ಯರು ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದ ರೋಗಿಯ ಸಂಬಂಧಿಕರು, ಚಿಕಿತ್ಸೆಗೆ ಮುಂದಾದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ವೈದ್ಯರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಶುಕ್ರವಾರ ಈ ಘಟನೆ ನಡೆದಿದೆ. ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರನ್ನು ಸರಕಾರಿ ಅಧೀನದ ಸುಭಾಷ್‌ಚಂದ್ರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆ ವೇಳೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಡಾ ಗೀತೇಶ್ ರಾತ್ರೆ ಎಂಬವರು ಚಿಕಿತ್ಸೆಗೆ ಮುಂದಾದಾಗ ಗಾಯಾಳು ಮಹಿಳೆಯರ ಸಂಬಂಧಿಕರೆನ್ನಲಾದ ಸುಮಾರು 12 ಮಂದಿಯಿದ್ದ ಗುಂಪು ಸ್ಥಳಕ್ಕೆ ಆಗಮಿಸಿ ರಾತ್ರೆಯ ಹೆಸರು ಮತ್ತು ಜಾತಿಯನ್ನು ಪ್ರಶ್ನಿಸಿದೆ. ತಮ್ಮ ಹೆಸರು ಮತ್ತು ಜಾತಿಯನ್ನು ರಾತ್ರೆ ತಿಳಿಸಿದಾಗ , ಮೇಲ್ಜಾತಿಯ ವೈದ್ಯರು ಮಾತ್ರ ಗಾಯಾಳು ಮಹಿಳೆಯರಿಗೆ ಚಿಕಿತ್ಸೆ ನೀಡಬೇಕೆಂದು ಗುಂಪಿನಲ್ಲಿದ್ದವರು ಪಟ್ಟು ಹಿಡಿದರು. ಆಗ ಕೆಲ ಹೊತ್ತು ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ತನ್ನ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ಡಾ ರಾತ್ರೆ ದೂರು ನೀಡಿರುವುದಾಗಿ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಎಸ್.ಖಾನ್ ತಿಳಿಸಿದ್ದಾರೆ.

ಹಲ್ಲೆಗೈದ ಬಳಿಕ ಗುಂಪಿನವರು ಬಲವಂತವಾಗಿ ಗಾಯಾಳುಗಳನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರಯತ್ನಿಸಿದ್ದಾರೆ ಎಂದು ದೂರಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಡಾ ರಾತ್ರೆಯವರ ದೂರಿನಂತೆ ಜಾತಿ ನಿಂದನೆ ಹಾಗೂ ಸರಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News