ಮಿತಿಗಳ ನಡುವೆಯೂ ಎದೆಯ ಮೀಟುವ ‘ಮೀಟೂ’ ಚಳವಳಿ

Update: 2018-10-14 18:39 GMT

 ಈ ದೇಶದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಅಥವಾ ದೌರ್ಜನ್ಯ ಪ್ರಕರಣಗಳು ಮಾಧ್ಯಮಗಳ ಪಾಲಿಗೆ ಮುಖಪುಟದ ಸುದ್ದಿಯಾಗಬೇಕಾದರೆ ಅದಕ್ಕೆ ಕೆಲವು ಮಾನದಂಡಗಳಿವೆ. ಮುಖ್ಯವಾಗಿ ಘಟನೆ ಉತ್ತರ ಭಾರತದಲ್ಲಿ ಅದರಲ್ಲೂ ದಿಲ್ಲಿಯಂತಹ ಶಹರಗಳಲ್ಲಿ ನಡೆದಿರಬೇಕು. ಅವರು ಮೇಲ್ಮಧ್ಯಮ ವರ್ಗಕ್ಕೆ ಸೇರಿರಬೇಕು. ಐಟಿ, ಬಿಟಿಯಂತಹ ಕ್ಷೇತ್ರಗಳಲ್ಲಿ ದುಡಿಯುವವರು ಮತ್ತು ಮೇಲ್ಜಾತಿಗಳಿಗೆ ಸೇರಿದರೆ ಆ ಸುದ್ದಿ ಇನ್ನಷ್ಟು ಆದ್ಯತೆಯನ್ನು ಪಡೆದುಕೊಳ್ಳುತ್ತದೆ ಮತ್ತು ರಾಷ್ಟ್ರಮಟ್ಟದಲ್ಲಿ ಆಂದೋಲನಕ್ಕೆ ಕಾರಣವಾಗುತ್ತದೆ. ಹಾಗೆಂದು ಈ ಎಲ್ಲ ವರ್ಗಗಳ ಮಹಿಳೆಯರ ಮೇಲಿನ ದೌರ್ಜನ್ಯಗಳು ನಿರ್ಲಕ್ಷಕ್ಕೆ ಅರ್ಹ ಎಂದಲ್ಲ. ಆದರೆ ಇವರ ಮೇಲೆ ನಡೆದ ದೌರ್ಜನ್ಯಗಳಿಗಿಂತ ದುಪ್ಪಟ್ಟು ಪಾಲು ಭೀಕರವಾದ ಘಟನೆಗಳಿಗೆ ಮಾಧ್ಯಮಗಳು ಸಮಾನವಾದ ಆದ್ಯತೆಗಳನ್ನು ನೀಡಿದ್ದೇ ಆಗಿದ್ದರೆ ಇಂದು ಈ ದೇಶದಲ್ಲಿ ಮಹಿಳೆಯ ದುಃಸ್ಥಿತಿ ಇಷ್ಟು ಹೀನಾಯವಾಗಿರಬೇಕಾಗಿರಲಿಲ್ಲ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳನ್ನು ಸಮಾನ ಅಳತೆಗೋಲಿನಿಂದ ವ್ಯವಸ್ಥೆ ಮತ್ತು ಮಾಧ್ಯಮಗಳು ನೋಡುತ್ತಿಲ್ಲ ಎನ್ನುವುದು ಖಂಡಿತವಾಗಿಯೂ ನಿರ್ಲಕ್ಷಿಸುವಂತಹ ವಿಷಯವಲ್ಲ. ಮುಖಪುಟಕ್ಕೆ ಮತ್ತು ಒಳಪುಟಕ್ಕೆ ಎಂದು ಎರಡು ಬಗೆಯ ಮಹಿಳಾ ದೌರ್ಜನ್ಯ, ಅತ್ಯಾಚಾರಗಳನ್ನು ಮಾಧ್ಯಮಗಳು ಗುರುತಿಸಿವೆ. ಒಂದು ಗುಂಪಿನ ಮಹಿಳೆಯರು ದೌರ್ಜನ್ಯಗಳಿಗೆ, ಅತ್ಯಾಚಾರಗಳಿಗೆ ಅರ್ಹರಾದವರು ಎಂಬ ಮನಸ್ಥಿತಿಯ ಪತ್ರಕರ್ತರಿರುವ ಕಾರಣಕ್ಕಾಗಿಯೇ ಈ ಸಮಾಜ ಮಹಿಳಾ ದೌರ್ಜನ್ಯಗಳನ್ನು ದ್ವಿಮುಖ ಧೋರಣೆಯಿಂದ ನೋಡ ತೊಡಗಿದೆ. ಇಲ್ಲಿ ‘ದಾನಮ್ಮ’ ಎಂಬ ದಲಿತ ಬಾಲಕಿಯನ್ನು ಬರ್ಬರವಾಗಿ ಅತ್ಯಾಚಾರಗೈದು, ಕೊಂದು ಹಾಕಿದರೆ, ಅದನ್ನು ಪೊಲೀಸ್ ಇಲಾಖೆ ‘ಅಕ್ರಮ ಸಂಬಂಧದ ಪರಿಣಾಮ’ ಎಂದು ಮುಗಿಸಿ ಬಿಡುತ್ತದೆ. ಆಗ ಯಾವುದೇ ಹ್ಯಾಷ್ ಟ್ಯಾಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದಿಲ್ಲ. ಹೆಣ್ಣಿನ ದೇಹ ಚರ್ಚೆಗೆ ಒಳಗಾಗುವುದಿಲ್ಲ. ಆದರೆ ಇದೇ ಸಂದರ್ಭದಲ್ಲಿ, ಮೇಲ್ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳು, ತಾನು ಕೆಲಸ ಮಾಡುವ ಕಚೇರಿಗಳಲ್ಲಿ ಪುರುಷನಿಂದ ಅನುಭವಿಸಿದ ಮಾನಸಿಕ ಹಿಂಸೆಯನ್ನು ಹಂಚಿಕೊಂಡದ್ದೇ ತಡ, ಅದು ಸಕಲ ಹೆಣ್ಣು ಮಕ್ಕಳ ಧ್ವನಿಯಾಗಿ ಮಾಧ್ಯಮಗಳ ಮೂಲಕ ಹೊರಹೊಮ್ಮುತ್ತದೆ. ಒಂದು ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಈ ದೇಶದ ಎಲ್ಲ ಜಾತಿ, ವರ್ಗಗಳ ಹೆಣ್ಣು ಮಕ್ಕಳ ದೇಹದ ಮೇಲೆ ನಡೆಯುವ ದೌರ್ಜನ್ಯಗಳಿಗೆ ಮಾಧ್ಯಮಗಳು ಪ್ರಾಮಾಣಿಕವಾಗಿ ಸ್ಪಂದಿಸಿದ್ದೇ ಆದರೆ ಅದು ಬೀರಬಹುದಾದ ಪರಿಣಾಮಗಳು ಹೇಗಿರಬಹುದು ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೊಳಗಿರುವ ‘ಮೀಟೂ’ ಚಳವಳಿಯೇ ಅತ್ಯುತ್ತಮ ಉದಾಹರಣೆ. ಒಂದೆಡೆ ಮೀಟೂ ಚಳವಳಿಯ ಯಶಸ್ಸನ್ನು ಸ್ವಾಗತಿಸುತ್ತಲೇ, ಇದನ್ನು ದೇಶದ ಸಮಸ್ತ ಮಹಿಳೆಯರ ಧ್ವನಿಯಾಗಿ ವಿಸ್ತರಿಸುವ ದಾರಿಯನ್ನು ನಾವು ಚರ್ಚಿಸಬೇಕಾಗಿದೆ.

ಒಂದನ್ನು ನಾವು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಮಾಧ್ಯಮಗಳು ಮೀಟೂವನ್ನು ಯಾಕೆ ಗಂಭೀರವಾಗಿ ತೆಗೆದುಕೊಂಡಿವೆೆ? ಮಹಿಳೆಯ ಹಕ್ಕುಗಳ ಮೇಲಿನ ಕಾಳಜಿಯಿಂದಲೋ, ಮೀಟೂವಿನಲ್ಲಿ ಭಾಗವಹಿಸಿದ ಮಹಿಳೆಯರ ಹಿನ್ನೆಲೆಯ ಕಾರಣದಿಂದಲೋ? ಮೀಟೂಗಳಲ್ಲಿ ತಮ್ಮ ಮೇಲಾದ ಮಾನಸಿಕ, ದೈಹಿಕ ದೌರ್ಜನ್ಯಗಳನ್ನು ಹಂಚಿಕೊಂಡವರು ಸೆಲೆಬ್ರಿಟಿಗಳು ಅಥವಾ ಶ್ರೀಮಂತ ವರ್ಗಕ್ಕೆ ಸೇರಿದ ಮಹಿಳೆಯರಾಗಿಲ್ಲದೇ ಇದ್ದರೆ ಅಥವಾ ಆರೋಪಕ್ಕೊಳಗಾದ ಮಂದಿ ಅತ್ಯುನ್ನತ ಸ್ಥಾನದಲ್ಲಿ ಕುಳಿತವರಲ್ಲದೇ ಹೋಗಿದ್ದರೆ ಇದು ಮುಖಪುಟದ ಚರ್ಚೆ ಖಂಡಿತವಾಗಿಯೂ ಆಗುತ್ತಿರಲಿಲ್ಲ. ಇಷ್ಟಕ್ಕೂ ಸೆಲೆಬ್ರಿಟಿಗಳ ‘ಉದ್ಯಮ’ ಜಗತ್ತಿನಲ್ಲಿ ‘ಕಾಸ್ಟಿಂಗ್ ಕೌಚ್’ ಬಗ್ಗೆ ಸಾಕಷ್ಟು ಬಾರಿ ಚರ್ಚೆಗಳಾಗಿವೆ. ಸಿನೆಮಾ ಮತ್ತು ರಾಜಕಾರಣದಲ್ಲಿ ಮೇಲೆ ಬರಬೇಕಾದರೆ ಹೆಣ್ಣು ‘ಸಹಕರಿಸಬೇಕಾಗುತ್ತದೆ’ ಎಂಬ ಮಾತುಗಳನ್ನು ಖ್ಯಾತನಟರೂ, ರಾಜಕಾರಣಿಗಳೂ ಹಲವು ಬಾರಿ ಆಡಿದ್ದಾರೆ ಮತ್ತು ಅದು ಮುಖಪುಟದಲ್ಲಿ ಪ್ರಕಟವೂ ಆಗಿದೆ. ಇತ್ತೀಚೆಗೆ ರಾಜ್ಯದ ಹಿರಿಯ ಮಾಜಿ ಸಚಿವೆಯೊಬ್ಬರು, ಇದನ್ನೇ ಪರೋಕ್ಷವಾಗಿ ಹೇಳಿದ್ದರು. ರಾಜಕೀಯವಾಗಿ ಮೇಲೆ ಬರಬೇಕಾದರೆ ಹೆಣ್ಣು ಮಕ್ಕಳು ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎನ್ನುವ ಮಾತುಗಳನ್ನು ಸಾರ್ವಜನಿಕ ವೇದಿಕೆಯಲ್ಲೇ ಹಂಚಿಕೊಂಡಿದ್ದರು. ಅಷ್ಟೇ ಯಾಕೆ ಸಚಿವೆ ಜಯಮಾಲಾ ಅವರಿಗೆ ಸಚಿವ ಸ್ಥಾನ ಸಿಕ್ಕಿದಾಗ, ಇನ್ನೋರ್ವ ಶಾಸಕಿಯೊಬ್ಬರು ‘ವ್ಯಂಗ್ಯವಾಗಿ ಆಡಿಕೊಂಡು’ ತನ್ನ ಅಸಹನೆಯನ್ನು ತೀರಿಸಿಕೊಂಡಿದ್ದರು. ರಾಜಕೀಯ ಮತ್ತು ಸಿನೆಮಾ ರಂಗದಲ್ಲಿ ನಡೆಯುವ ಈ ‘ರಾಜಿ’ಗಳನ್ನು ‘ತೀರಾ ಸಹಜ’ ಎನ್ನುವಷ್ಟರ ಮಟ್ಟಿಗೆ ಸಾರ್ವಜನಿಕ ವಲಯ ಸ್ವೀಕರಿಸುತ್ತಾ ಬಂದಿದೆ. ಈ ಕಾರಣದಿಂದಲೇ, ಸೆಲೆಬ್ರಿಟಿಗಳು ತಮ್ಮ ಮೇಲಾದ ದೌರ್ಜನ್ಯ ಪ್ರಕರಣಗಳನ್ನು ಸಾರ್ವಜನಿಕವಾಗಿ ತೋಡಿಕೊಂಡಾಗಲೂ, ಅದನ್ನು ‘ಎಂಟರ್‌ಟೈನ್ ಮೆಂಟ್’ ವಿಭಾಗದಲ್ಲಿಟ್ಟುಕೊಂಡೇ ವರದಿ ಮಾಡುವ ುನಸ್ಥಿತಿ ಮಾಧ್ಯಮ ವಲಯದಲ್ಲಿದೆ.

 ‘ಹೆಣ್ಣಿನ ಮೈಕಟ್ಟುಗಳನ್ನೇ ಎಂಟರ್‌ಟೈನ್ ಮೆಂಟ್(ಇದು ನಟಿ ಸಿಲ್ಕ್‌ಸ್ಮಿತಾ ಅವರ ಮಾತುಗಳು) ಆಗಿ ಪರಿವರ್ತಿಸಿಕೊಂಡಿರುವ ಸಿನೆಮಾ ಉದ್ಯಮದ ಕ್ರೌರ್ಯವನ್ನು ನಾವು ಅಭಿವ್ಯಕ್ತಿಯ ಹೆಸರಿನಲ್ಲಿ ಸ್ವೀಕರಿಸುತ್ತಾ ಬಂದಿದ್ದೇವೆ. ತನುಶ್ರೀ ಎನ್ನುವ ನಟಿಯನ್ನು ಕಲೆಯ ಅಗತ್ಯವಿಲ್ಲದೇ ಇದ್ದರೂ, ತಮ್ಮ ಸರಕನ್ನು ಹೆಚ್ಚು ಬಿಕರಿ ಮಾಡಲು ಮಳೆಯಲ್ಲಿ ತುಂಡುಬಟ್ಟೆಯಲ್ಲಿ ಸಿನಿಮಾ ನಿರ್ದೇಶಕನೊಬ್ಬ ಕುಣಿಸುತ್ತಾನೆ. ಅದನ್ನು ಸಾವಿರಾರು ಪ್ರೇಕ್ಷಕರು ವೀಕ್ಷಿಸುತ್ತಾರೆ. ಆಕೆ ನಟಿಸಿದ ಚಿತ್ರಗಳಲ್ಲಿ ಕಲೆಯ ಹೆಸರಲ್ಲೇ ಆಕೆಯ ಮೇಲೆ ನಡೆದ ದೌರ್ಜನ್ಯಗಳನ್ನು ನಾವು ಗುರುತಿಸುವ ಬಗೆ ಹೇಗೆ? ಆಕೆಯ ಮೈಯನ್ನು ಸ್ಪರ್ಶಿಸಿಲ್ಲ ಎನ್ನುವುದನ್ನು ಬಿಟ್ಟರೆ, ಆ ಚಿತ್ರವನ್ನು ನೋಡಿದ ಸಾವಿರಾರು ಪ್ರೇಕ್ಷಕರು ಅನುಭವಿಸಿದ ‘ಮನರಂಜನೆ’ ‘ಮೀಟೂ’ಗೆ ಯಾಕೆ ಅರ್ಹವಲ್ಲ. ತನುಶ್ರೀ ತನ್ನ ಮೇಲೆ ನಾನಾಪಾಟೇಕರ್ ಅವರ ಅಶ್ಲೀಲ ಸ್ಪರ್ಶಗಳನ್ನು ಮಾಡಿರುವ ಕುರಿತಂತೆ ನೋವು ತೋಡಿಕೊಂಡಿದ್ದಾರೆ. ನಾನಾಪಾಟೇಕರ್ ಅದನ್ನು ತಿರಸ್ಕರಿಸಿದ್ದಾರೆ. ಆದರೆ ತನುಶ್ರೀ ಆರೋಪ ಮಾಡಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಆಕೆಯ ಚಿತ್ರವನ್ನು ವೀಕ್ಷಿಸಿದ ಲಕ್ಷಾಂತರ ಪ್ರೇಕ್ಷಕರು ನಿರಪರಾಧಿಗಳಾಗುವುದಿಲ್ಲ. ಹೆಣ್ಣಿನ ಮೈಕಟ್ಟುಗಳನ್ನು ‘ಮನರಂಜನೆ’ಯ ಭಾಗವೆಂದು ಗಂಭೀರವಾಗಿ ಸ್ವೀಕರಿಸಿರುವ ಸಿನೆಮಾ ಉದ್ಯಮದಲ್ಲೇ ಸಮಸ್ಯೆ ಬೇರೂರಿದೆ. ಅದನ್ನು ಬದಿಗಿಟ್ಟು, ತನುಶ್ರೀ ಮಾಡಿದ ತೆಳು ಆರೋಪಕ್ಕೆ ಚರ್ಚೆಯನ್ನು ಸೀಮಿತಗೊಳಿಸುವುದು ಸಮಾಜದ ಹಿಪಾಕ್ರಸಿಯಲ್ಲವೆ?

ಮೀಟೂ ಚಳವಳಿ ಒಂದನ್ನಂತೂ ದೇಶಕ್ಕೆ ಸ್ಪಷ್ಟಪಡಿಸಿದೆ. ಹೆಣ್ಣಿನ ಮನೋವೇದನೆಗಳಿಗೆ ವರ್ಗಗಳ ಗೋಡೆಗಳಿಲ್ಲ. ಎಷ್ಟೇ ಶ್ರೀಮಂತ ವರ್ಗಕ್ಕೆ ಸೇರಿದರೂ ಅಲ್ಲಿ ಆಕೆ ಹೆಣ್ಣಿನ ಸ್ಥಾನವನ್ನೇ ನಿಭಾಯಿಸಬೇಕಾಗುತ್ತದೆ ಮತ್ತು ಹೆಣ್ಣು ಎದುರಿಸುವ ಮಾನಸಿಕ ತೊಳಲಾಟಗಳಿಗೆ ಮುಖಾಮುಖಿಯಾಗಲೇಬೇಕಾಗುತ್ತದೆ. ಆ ವರ್ಗದ ಮಹಿಳೆಯರು ತುಟಿ ಬಿಚ್ಚಿದ ಕಾರಣಕ್ಕಾಗಿ, ಇಂದು ಇತರ ಉದ್ಯೋಗ ವಲಯದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮುನ್ನೆಲೆಗೆ ಬಂದಿದೆ. ಈ ಕಾರಣಕ್ಕಾಗಿ ನಾವು ‘ಮೀಟೂ’ ಚಳವಳಿಯಲ್ಲಿ ಭಾಗವಹಿಸಿದ ಸೆಲೆಬ್ರಿಟಿಗಳನ್ನ್ನು ಶ್ಲಾಘಿಸಬೇಕಾಗಿದೆ. ಮೀಟೂ ಮೂಲಕ, ಇಂದು ಪತ್ರಿಕಾಕಚೇರಿಗಳಲ್ಲಿ, ಪೊಲೀಸ್ ಇಲಾಖೆಗಳಲ್ಲಿ, ಬ್ಯಾಂಕುಗಳಲ್ಲಿ, ನ್ಯಾಯಾಲಯಗಳಲ್ಲಿ ಮಹಿಳೆಯರ ಅಸಹಾಯಕತೆಯನ್ನು ದುರುಪಯೋಗಪಡಿಸುತ್ತಲೇ ಬಹಿರಂಗವಾಗಿ ಸಜ್ಜನರಾಗಿ ಗುರುತಿಸುಲ್ಪಡುತ್ತಿರುವ ಮಂದಿಗಳ ಎದೆಯೊಳಗೆ ನಡುಕ ಹುಟ್ಟುವಂತಾಗಿದೆ. ಸಮಸ್ಯೆ ಮೇಲ್ಮಧ್ಯಮವರ್ಗದ ಮಹಿಳೆಯರಿಗಷ್ಟೇ ಸೀಮಿತವಾಗದೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದ ಜನರ ಸಮಸ್ಯೆಯಾಗಿಯೂ ನಿಧಾನಕ್ಕೆ ಪರಿವರ್ತನೆಯಾಗಿದೆ. ಇದು ಒಳ್ಳೆಯ ಸೂಚನೆಯಾಗಿದೆ. ಕೆಲಸ ಮಾಡುವ ಸಂಸ್ಥೆಗಳಲ್ಲಿ ಹೆಣ್ಣಾದ ಕಾರಣಕ್ಕೆ ಅವಮಾನ ಎದುರಿಸುವ ಮಂದಿಗೆ ಮೀಟೂ ಸಣ್ಣದೊಂದು ಆತ್ಮವಿಶ್ವಾಸ ನೀಡಿದರೂ, ಅದು ಈ ಚಳವಳಿಯ ದೊಡ್ಡ ಯಶಸ್ಸೇ ಆಗಿದೆ. ಅಮೆರಿಕಾದಲ್ಲಿ ಆಫ್ರಿಕಾ ಮೂಲದ ತರಾನಾ ಬರ್ಕೆ 2006ರಲ್ಲಿ ಹುಟ್ಟು ಹಾಕಿದ ಮೀಟೂ ಆಂದೋಲನ, ಭಾರತದಲ್ಲಿ ಬರೇ ‘ಆರೋಪ-ಪ್ರತ್ಯಾರೋಪ’ಗಳಿಗೆ ಸೀಮಿತವಾಗಿ ಉಳಿಯದೇ, ಮಧ್ಯಮ ವರ್ಗದ ಸ್ವಾವಲಂಬೀ ಮಹಿಳೆಯರನ್ನು ಇನ್ನಷ್ಟು ಸಬಲೀಕರಣಗೊಳಿಸುವುದಕ್ಕೆ ಪೂರಕವಾಗಿ ಬೆಳೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News