ಎಚ್ಚರಿಕೆ: ನಿಮ್ಮ ಒಡೆದ ತುಟಿಗಳು ಈ ಗಂಭೀರ ಅಪಾಯಗಳ ಬಗ್ಗೆ ಸೂಚಿಸುತ್ತಿರಬಹುದು

Update: 2018-10-15 10:30 GMT

ನಮ್ಮ ತುಟಿಗಳು ಒಡೆಯಲು ಚಳಿಗಾಲವೇ ಬೇಕೆಂದಿಲ್ಲ. ಕೆಲವೊಮ್ಮೆ ನಾವು ತುಟಿಗಳನ್ನು ರಕ್ಷಿಸಲು ವ್ಯಾಸಲೀನ್ ಇತ್ಯಾದಿಗಳನ್ನು ಹಚ್ಚಿದರೂ ಅವು ಒಡೆಯುವುದು ಅಥವಾ ಸುಲಿಯುವುದು ನಿಲ್ಲುವುದಿಲ್ಲ. ಹಾಗಿದ್ದರೆ ನಮ್ಮ ಶರೀರವು ನಮಗೆ ಯಾವ ಸಂದೇಶವನ್ನು ನೀಡಲು ಬಯಸುತ್ತಿದೆ?

ನಮ್ಮ ಶರೀರವು ಎಷ್ಟು ಅದ್ಭುತವೋ ಅಷ್ಟೇ ವಿಚಿತ್ರಗಳಿಂದಲೂ ಕೂಡಿದೆ. ನಮ್ಮ ಅನಾರೋಗ್ಯದ ಬಗ್ಗೆ ಶರೀರವು ಸ್ಪಷ್ಟ ಲಕ್ಷಣಗಳನ್ನು ತೋರಿಸುತ್ತದೆ ನಿಜ. ಆದರೆ ಕೆಲವೊಮ್ಮೆ ಅದು ನೀಡುವ ಸುಳಿವುಗಳು ಎಷ್ಟು ನವಿರಾಗಿರುತ್ತವೆ ಎಂದರೆ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಒಡೆದ ತುಟಿಗಳು ನಮಗೆ ಏನನ್ನು ಸೂಚಿಸಲು ಬಯಸುತ್ತಿರಬಹುದು ಎಂಬ ಬಗ್ಗೆ ಮಾಹಿತಿಗಳಿಲ್ಲಿವೆ........

► ಕಬ್ಬಿಣ,ಸತುವು ಮತ್ತು ಬಿ ವಿಟಾಮಿನ್‌ಗಳ ಕೊರತೆ

ನೀವು ನಿಮ್ಮ ತುಟಿಗಳನ್ನು ರಕ್ಷಿಸಲು ಬಾಮ್ ಅಥವಾ ಇತರ ಉತ್ಪನ್ನಗಳನ್ನು ಬಳಸುತ್ತಿರಬಹುದು. ಆದರೆ ಅಷ್ಟೇ ಸಾಲದು,ನೀವು ಏನನ್ನು ಸೇವಿಸುತ್ತೀರಿ ಮತ್ತು ನಿಮ್ಮ ಶರೀರವು ಯಾವ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುತ್ತಿದೆ ಎನ್ನುವುದೂ ಮುಖ್ಯವಾಗುತ್ತದೆ. ಕಬ್ಬಿಣ,ಸತುವು ಮತ್ತು ವಿಟಾಮಿನ್ ಬಿ ಕಾಂಪ್ಲೆಕ್ಸ್ ಇವು ನಮ್ಮ ಶರೀರವು ಪ್ರತಿಯೊಂದೂ ಕಾರ್ಯವನ್ನು ನಿರ್ವಹಿಸುವುದಕ್ಕೆ ಅಗತ್ಯವಾದ ಮೂರು ಅತ್ಯಂತ ಮುಖ್ಯ ಪೌಷ್ಟಿಕಾಂಶಗಳಾಗಿವೆ.

ಸಾಮಾನ್ಯವಾಗಿ ರಿಬೊಫ್ಲಾವಿನ್ ಎಂದು ಕರೆಯಲಾಗುವ ವಿಟಾಮಿನ್ ಬಿ2 ಬಿ ಕಾಂಪ್ಲೆಕ್ಸ್‌ನ ಭಾಗವಾಗಿದ್ದು,ಇದರ ಕೊರತೆಯು ತುಟಿಗಳು ಊದಿಕೊಳ್ಳಲು ಮತ್ತು ಒಡೆಯಲು ಕಾರಣವಾಗುತ್ತದೆ. ಹೀಗಾಗಿ ನಿಮ್ಮ ತುಟಿಗಳು ಒಣಗಿದ್ದರೆ ಮತ್ತು ಒಡೆದಿದ್ದರೆ ವಿಟಾಮಿನ್ ಸಮೃದ್ಧ ಆಹಾರಗಳನ್ನು,ವಿಶೇಷವಾಗಿ ರಿಬೊಫ್ಲಾವಿನ್ ವಿಫುಲವಾಗಿರುವ ಮೊಟ್ಟೆಯಂತಹ ಆಹಾರಗಳನ್ನು ಸೇವಿಸಿ.

► ನಿರ್ಜಲೀಕರಣ

 ನಮ್ಮ ಶರೀರದಲ್ಲಿ ನೀರಿನ ಕೊರತೆಯಾದಾಗ ಹೆಚ್ಚುಕಡಿಮೆ ಎಲ್ಲ ಜೈವಿಕ ಕಾರ್ಯಗಳು ವ್ಯತ್ಯಯಗೊಳ್ಳತೊಗುತ್ತವೆ. ತುಟಿಗಳು ಇದಕ್ಕೆ ಹೊರತಾಗಿಲ್ಲ. ಶರೀರವು ನಿರ್ಜಲೀಕರಣಗೊಂಡಾಗ ನಮ್ಮ ತುಟಿಗಳೂ ನೀರಿನ ಅಂಶ ಮತ್ತು ಖನಿಜಗಳನ್ನು ಕಳೆದುಕೊಳ್ಳುತ್ತವೆ,ಪರಿಣಾಮವಾಗಿ ಅವು ಒಡೆಯುತ್ತವೆ ಮತ್ತು ಅವುಗಳ ಚರ್ಮಗಳು ಸುಲಿಯುತ್ತವೆ. ನೀವು ದೈಹಿಕವಾಗಿ ತುಂಬ ಕ್ರಿಯಾಶೀಲರಾಗಿದ್ದಲ್ಲಿ ಅಥವಾ ಮಧುಮೇಹದಂತಹ ಕಾಯಿಲೆಗಳಿಂದ ನರಳುತ್ತಿದ್ದರೆ ನಿಮ್ಮ ಶರೀರವು ನಿರ್ಜಲೀಕರಣಗೊಳ್ಳುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ನಿಮ್ಮ ಚರ್ಮ ಮತ್ತು ಶರೀರವನ್ನು ರಕ್ಷಿಸಿಕೊಳ್ಳಲು ಯಥೇಚ್ಛ ನೀರು ಮತ್ತು ನೈಸರ್ಗಿಕ ಖನಿಜಗಳ ಸೇವನೆ ಏಕಮಾತ್ರ ಮಾರ್ಗವಾಗುತ್ತದೆ. ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ನೀರು ಸೇವನೆಯ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಯತ್ನಿಸಿ.

► ಅಲರ್ಜಿ

ತುಟಿಗಳು ಸಂವೇದನಾಶೀಲ ಭಾಗಗಳಾಗಿದ್ದು,ಹೆಚ್ಚಿನ ಕಾಳಜಿ ಅಗತ್ಯವಾಗಿದೆ. ಆದರೆ ಪರಿಸ್ಥಿತಿ ಕೈ ಮೀರುವವರೆಗೆ ನಾವು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಒಡೆಯುವುದು ಅಥವಾ ಸುಲಿಯುವುದು ನೀವು ಸೇವಿಸುವ ಆಹಾರ ನಿಮಗೆ ಸೂಕ್ತವಲ್ಲ ಮತ್ತು ಅಲರ್ಜಿಕಾರಕವಾಗಿವೆ ಎನ್ನುವುದನ್ನು ನಿಮ್ಮ ತುಟಿಗಳು ನಿಮಗೆ ಸೂಚಿಸುತ್ತಿರುವ ವಿಧಾನವಾಗಿರಬಹುದು. ಕೆಲವು ಔಷಧಿಗಳೂ ಈ ಪರಿಣಾಮವನ್ನುಂಟು ಮಾಡುತ್ತವೆ. ಬಾಯಿ ಸುತ್ತಲೂ ಉಂಟಾಗುವ ಅಲರ್ಜಿಯ ಲಕ್ಷಣ ಸಾಮಾನ್ಯವಾಗಿ ತುಟಿಗಳಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ ಮತ್ತು ಅವು ಒಣಗಲು,ಒಡೆಯಲು ಕಾರಣವಾಗುತ್ತದೆ. ಹೀಗಾಗಿ ಅಲರ್ಜಿಯನ್ನು ಕಡೆಗಣಿಸದೆ ಅದನ್ನು ನಿವಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

► ಕವಾಸಾಕಿ ಕಾಯಿಲೆ

ಒಡೆದ ತುಟಿಗಳು ಅತ್ಯಂತ ಅಪಾಯಕಾರಿಯಾದ ಕವಾಸಾಕಿ ಕಾಯಲೆಯನ್ನು ಸೂಚಿಸಬಹುದು. ಈ ಕಾಯಿಲೆಗೆ ಸಾಧ್ಯವಾದಷ್ಟು ಶೀಘ್ರ ಚಿಕಿತ್ಸೆ ಪಡೆಯದಿದ್ದರೆ ಅದು ಮಾರಣಾಂತಿಕವೂ ಆಗಬಹುದು. ಶಿಶುಗಳು ಮತ್ತು ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯು ರಕ್ತನಾಳಗಳು ಊದಿಕೊಳ್ಳುವಂತೆ ಮಾಡುತ್ತದೆ ಮತ್ತು ದುಗ್ಧರಸ ಗ್ರಂಥಿಗಳ ಸಮಸ್ಯೆಗೆ ಕಾರಣವಾಗುತ್ತದೆ. ಚಿಕಿತ್ಸೆ ಪಡೆಯದಿದ್ದರೆ ಇದು ಹೃದ್ರೋಗಗಳಿಗೆ ಕಾರಣವಾಗಬಲ್ಲದು.

► ಥೈರಾಯ್ಡ ಸಮಸ್ಯೆ

ಥೈರಾಯ್ಡ ಸಮಸ್ಯೆಯನ್ನು,ವಿಶೇಷವಾಗಿ ಪ್ರಾರಂಭಿಕ ಹಂತಗಳಲ್ಲಿ ಸೂಕ್ತವಾಗಿ ನಿರ್ಧರಿಸಲು ಸಾಧ್ಯವಾಗುವುದಿಲ್ಲ ಮತ್ತು ಇದೇ ಕಾರಣದಿಂದ ಇದು ಅತ್ಯಂತ ಭೀಕರ ಕಾಯಿಲೆಗಳಲ್ಲೊಂದಾಗಿದೆ. ಪತ್ತೆ ಹಚ್ಚಿದರೂ ಅದನ್ನು ನಿರ್ವಹಿಸುವುದು ಅಷ್ಟೊಂದು ಸುಲಭವಲ್ಲ. ಹೈಪೊಥೈರಾಯ್ಡಿಸಂ ಇಂತಹ ಸ್ಥಿತಿಗಳಲ್ಲೊಂದಾಗಿದ್ದು, ಅದು ತುಟಿಗಳನ್ನು ಒಣಗಿಸುತ್ತದೆ ಮತ್ತು ಒಡೆಯುವಂತೆ ಮಾಡುತ್ತದೆ. ಥೈರಾಯ್ಡಿ ಗ್ರಂಥಿಯು ಅಗತ್ಯವಿರುವಷ್ಟು ಹಾರ್ಮೋನನ್ನು ಉತ್ಪತ್ತಿ ಮಾಡಲು ವಿಫಲಗೊಂಡಾಗ ಅಂತಹ ಸ್ಥಿತಿಯನ್ನು ಹೈಪೊಥೈರಾಯ್ಡಿಸಂ ಎಂದು ಕರೆಯಲಾಗುತ್ತದೆ. ಹೀಗಾಗಿ ನಿಮ್ಮ ತುಟಿಗಳು ಒಡೆದಾಗಿ ಅವು ಈ ಸಮಸ್ಯೆಯನ್ನು ಸೂಚಿಸುತ್ತಿರಬಹುದು ಮತ್ತು ತಕ್ಷಣವೇ ವೈದ್ಯರನ್ನು ಭೇಟಿಯಾಗಿ.

► ಯೀಸ್ಟ್‌ನ ಸೋಂಕು

  ನಿಮ್ಮ ತುಟಿಗಳು ಸುಲಿದಂತಾಗಿದ್ದರೆ,ವಿಶೇಷವಾಗಿ ಬಾಯಿಯ ಮೂಲೆಯ ಬಳಿ ಬಿರುಕು ಬಿಟ್ಟಿದ್ದರೆ ನೀವು ಯೀಸ್ಟ್‌ನ ಸೋಂಕಿಗೊಳಗಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಜೊಲ್ಲು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವುದನ್ನು ತಡೆಯಲು ತುಟಿ ಮತ್ತು ಅದರ ಸುತ್ತಲಿನ ಜಾಗಗಳಿಗೆ ನಾಲಿಗೆಯನ್ನು ತಾಗಿಸುವುದನ್ನು ನಿವಾರಿಸುವುದು ಒಳ್ಳೆಯ ಕ್ರಮವಾಗುತ್ತದೆ ಮತ್ತು ಯಥೇಚ್ಛ ನೀರಿನ ಸೇವನೆಯು ಅಗತ್ಯವಾಗುತ್ತದೆ.

► ಹರ್ಪಿಸ್

ಕೆಲವು ಪ್ರಕರಣಗಳಲ್ಲಿ ತುಟಿಗಳು ಒಡೆಯುವುದು ಹರ್ಪಿಸ್ ಅಥವಾ ಸರ್ಪಸುತ್ತು ಸೋಂಕನ್ನು ಸೂಚಿಸಬಹುದು. ನಿಮ್ಮ ತುಟಿಗಳು ಅನಿಯಂತ್ರಿತವಾಗಿ ಸುಲಿಯುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

► ಇಂಪೆಟಿಗೊ

ಇದು ಹೆಚ್ಚಿನವರಿಗೆ ಹೊಸ ಶಬ್ದವಾಗಿರಬಹುದು. ವಾಸ್ತವದಲ್ಲಿ ಇದು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು ಆಗಿದ್ದು,ಶರೀರದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಸಾಮಾನ್ಯವಾಗಿ ಮೂಗು ಅಥವಾ ಬಾಯಿಯ ಸುತ್ತ,ಕಂಕುಳುಗಳಲ್ಲಿ ಮತ್ತು ಪೃಷ್ಠಗಳಲ್ಲಿ ಕಂಡು ಬರುತ್ತದೆ. ಈ ಸೋಂಕು ಕೆಲವೊಮ್ಮೆ ತುರಿಕೆಯನ್ನನುಂಟು ಮಾಡುತ್ತದೆ ಮತ್ತು ತುರಿಸಿಕೊಂಡಾಗ ಚರ್ಮದ ಇನ್ನಷ್ಟು ಭಾಗದಲ್ಲಿ ಹರಡುತ್ತದೆ. ಒಣ ಮತ್ತು ಸುಲಿದ ತುಟಿಗಳು ಇಂಪೆಟಿಗೊವನ್ನು ಸೂಚಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News