ಅಂಚೆ ಪೆಟ್ಟಿಗೆಗಳಲ್ಲಿ ಪತ್ರಗಳು ಮಾತ್ರವಲ್ಲ..... ಇವೂ ಇರುತ್ತವೆ, ಗೊತ್ತೇ ?

Update: 2018-10-15 10:51 GMT

ಇಂದಿನ ಡಿಜಿಟಲ್ ಯುಗದಲ್ಲಿ ಇ-ಮೇಲ್‌ಗಳ ಭರಾಟೆಯಿಂದಾಗಿ ಕೈಬರಹದ ಪತ್ರಗಳು ಹಳೆಯ ಕಾಲದ್ದಾಗುತ್ತಿವೆ. ಬೀದಿಬದಿಗಳಲ್ಲಿ ಅಲ್ಲಲ್ಲಿರುವ ಅಂಚೆಪೆಟ್ಟಿಗೆಗಳಲ್ಲಿ ಪತ್ರಗಳು ಬೀಳುವುದು ಅಪರೂಪ ಎನ್ನಬಹುದು. ಆದರೆ ಈ ಪಾಪದ ಅಂಚೆಪೆಟ್ಟಿಗೆಗಳನ್ನು ಬಳಕೆಯಲ್ಲಿಡಲು ಜೇಬುಗಳ್ಳರು ಮಾರ್ಗವನ್ನು ಕಂಡುಕೊಂಡಿದ್ದಾರೆ ಮತ್ತು ಅಷ್ಟರ ಮಟ್ಟಿಗೆ ತುಕ್ಕು ಹಿಡಿದು ಹಾಳಾಗುವುದನ್ನು ತಪ್ಪಿಸುತ್ತಿದ್ದಾರೆ!

ಉದಾಹರಣೆಗೆ ಚೆನ್ನೈ ಮಹಾನಗರದಲ್ಲಿ ಈ ಅಂಚೆಪೆಟ್ಟಿಗಗಳು ಈಗ ಕದ್ದ ಐಡಿ ಕಾರ್ಡ್‌ಗಳು ಮತ್ತು ಪರ್ಸ್‌ಗಳನ್ನು ತೊರೆಯುವ ಸ್ಥಳಗಳಾಗಿವೆ. ಕಳೆದ ಆರು ತಿಂಗಳುಗಳಲ್ಲಿ ಚೆನ್ನೈ ನಗರದಾದ್ಯಂತ ಸ್ಥಾಪಿಸಲಾಗಿರುವ ಅಂಚೆ ಪೆಟ್ಟಿಗೆಗಳಲ್ಲಿ ಸರಕಾರ ಮತ್ತು ಖಾಸಗಿ ಸಂಸ್ಥೆಗಳು ವಿತರಿಸಿರುವ ಸುಮಾರು 70 ಗುರುತುಚೀಟಿಗಳು ಪತ್ತೆಯಾಗಿವೆ.

ಚೆನ್ನೈನಲ್ಲಿ 216 ಅಂಚೆಕಚೇರಿಗಳು ಮತ್ತು 2,000 ಅಂಚೆ ಪೆಟ್ಟಿಗೆಗಳಿವೆ. ಜೇಬುಗಳ್ಳರು ತಮ್ಮ ಕೆಲಸವಾದ ಬಳಿಕ ಈ ಅಂಚೆಪೆಟ್ಟಿಗೆಗಳಲ್ಲಿ ತೊರೆಯುವ ದಾಖಲೆಗಳಲ್ಲಿ ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿಗಳು,ಪಾನ್ ಕಾರ್ಡ್‌ಗಳು,ವಾಹನ ಚಾಲನಾ ಪರವಾನಿಗೆಗಳು ಮತ್ತು ಆಧಾರ್ ಕಾರ್ಡ್‌ಗಳು ಇತ್ಯಾದಿ ಸೇರಿವೆ.

ಕೆಲವು ಜೇಬುಗಳ್ಳರು ತಾವು ಕದ್ದ ಪರ್ಸ್‌ಗಳಲ್ಲಿನ ಹಣವನ್ನು ತೆಗೆದುಕೊಂಡು ಖಾಲಿ ಪರ್ಸ್‌ಗಳನ್ನು ಈ ಪೆಟ್ಟಿಗೆಗಳಲ್ಲಿ ಹಾಕುತ್ತಾರೆ. ಹಣವಿಲ್ಲದ,ಆದರೆ ದಾಖಲೆಗಳು ಇರುವ ಪರ್ಸ್ ಅಂಚೆಪೆಟ್ಟಿಗೆಯಲ್ಲಿ ಸಿಕ್ಕಿದರೆ ಅದು ಜೇಬುಗಳ್ಳರ ಕೈವಾಡವಾಗಿರುತ್ತದೆ ಎನ್ನುತ್ತಾರೆ ಅಂಚೆ ಇಲಾಖೆ ಅಧಿಕಾರಿಗಳು.

ಕೆಲವು ಪ್ರಕರಣಗಳಲ್ಲಿ ಕೇವಲ ಕಾರ್ಡ್‌ಗಳು ಪತ್ತೆಯಾಗುತ್ತವೆ ಮತ್ತು ಪರ್ಸ್ ಜೊತೆಯಲ್ಲಿರುವುದಿಲ್ಲ. ಇಲ್ಲಿ ಹೆಚ್ಚಾಗಿ ದಾರಿಹೋಕರು ರಸ್ತೆಗಳಲ್ಲಿ ಬಿದ್ದಿರುವ ಗುರುತು ಚೀಟಿಗಳನ್ನು ಕಂಡು ಅವುಗಳನ್ನು ಪೆಟ್ಟಿಗೆಗಳಲ್ಲಿ ಹಾಕಿರುತ್ತಾರೆ.

ಎಪ್ರಿಲ್‌ನಿಂದೀಚಿಗೆ ಚೆನ್ನೈನಲ್ಲಿ ಇಂತಹ 70 ಘಟನೆಗಳು ಪತ್ತೆಯಾಗಿವೆ. ಇತ್ತೀಚಿಗೆ ಅರುಂಬಕ್ಕಮ್‌ನ ಅಂಚೆಪೆಟ್ಟಿಗೆಯೊಂದರಲ್ಲಿ ಎರಡು ಪಾಸ್‌ಪೋರ್ಟ್‌ಗಳು ಪತ್ತೆಯಾಗಿದ್ದು,ಅಂಚೆ ಅಧಿಕಾರಿಗಳು ಅವುಗಳನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಹಸ್ತಾಂತರಿಸಿದ್ದರು.

ಹೀಗೆ ಅಂಚೆಪೆಟ್ಟಿಗೆಗಳಲ್ಲಿ ಪತ್ತೆಯಾಗುವ ಗುರುತಿನ ಚೀಟಿಗಳನ್ನು ಅವುಗಳ ಮಾಲಕರಿಗೆ ಅಂಚೆ ಮೂಲಕ ಅಥವಾ ವೈಯಕ್ತಿಕವಾಗಿ ಮರಳಿಸಲಾಗುತ್ತದೆ. ನಮ್ಮ ಸಿಬ್ಬಂದಿಗಳಿಗೆ ಇಂತಹ ದಾಖಲೆಗಳು ದೊರೆತಾಗ ಅವರು ಅದನ್ನು ಅಂಚೆಯ ಮೂಲಕ ಆಯಾ ವಿಳಾಸಕ್ಕೆ ರವಾನಿಸುತ್ತಾರೆ ಅಥವಾ ದಾಖಲೆಯನ್ನು ಕಳೆದುಕೊಂಡ ವ್ಯಕ್ತಿಯ ಸಂಪರ್ಕ ಸಂಖ್ಯೆ ಲಭ್ಯವಿದ್ದರೆ ಅವರನ್ನು ಅಂಚೆ ಕಚೇರಿಗೆ ಆಹ್ವಾನಿಸಿ ವೈಯಕ್ತಿಕವಾಗಿ ಒಪ್ಪಿಸಲಾಗುತ್ತದೆ. ಆದರೆ ಅಂತಹ ವ್ಯಕ್ತಿ ಯಾವುದೇ ಗುರುತಿನ ಚೀಟಿಯನ್ನು ಹಾಜರು ಪಡಿಸುವುದು ಅಗತ್ಯವಾಗುತ್ತದೆ ಎನ್ನುತ್ತಾರೆ ಚೆನ್ನೈ ಸಿಟಿ ಪ್ರದೇಶದ ಪೋಸ್ಟ್ ಮಾಸ್ಟರ್ ಜನರಲ್ ಆರ್.ಆನಂದ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News