ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹೊರಗೆ: ಟ್ರಂಪ್ ಇಂಗಿತ

Update: 2018-10-15 16:59 GMT

ವಾಶಿಂಗ್ಟನ್, ಅ. 15: ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ನನ್ನ ಸರಕಾರದಿಂದ ಹೊರಹೋಗಲು ಚಿಂತನೆ ನಡೆಸಿದ್ದಾರೆ ಎಂಬ ಇಂಗಿತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.

ಮಾಜಿ ಮರೀನ್ ಕಾರ್ಪ್ಸ್ ಜನರಲ್ ಮ್ಯಾಟಿಸ್ ‘ಸ್ವಲ್ಪ ಡೆಮಾಕ್ರಟಿಕರಂತೆ’ ಎಂಬುದಾಗಿ ಅವರು ಬಣ್ಣಿಸಿದರು.

ಸಿಬಿಎಸ್‌ಗೆ ನೀಡಿದ ‘60 ನಿಮಿಷಗಳ ಸಂದರ್ಶನ’ದಲ್ಲಿ ಟ್ರಂಪ್ ತಾನು ಅಧಿಕಾರಕ್ಕೆ ಬಂದ ಸುಮಾರು ಎರಡು ವರ್ಷಗಳಲ್ಲಿ ನಡೆದ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ ಹಾಗೂ ಇನ್ನೂ ಹೆಚ್ಚಿನ ಬದಲಾವಣೆಗಳು ಬರುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ.

‘‘ನನಗೆ ತೃಪ್ತಿಯಾಗದ ಕೆಲವು ಜನರಿದ್ದಾರೆ, ನಾನು ಸಂತೋಷಪಡುವಂತೆ ಮಾಡದ ಕೆಲವು ಜನರಿದ್ದಾರೆ’’ ಎಂದು ಅವರು ಹೇಳಿದ್ದಾರೆ.

ನಾನು ಬಿಟ್ಟುಹೋಗುತ್ತೇನೆ ಎಂಬುದನ್ನು ಮ್ಯಾಟಿಸ್ ನನಗೆ ಹೇಳಿಲ್ಲ ಎಂದು ಟ್ರಂಪ್ ಹೇಳಿದರು. ಆದಾಗ್ಯೂ, ಮ್ಯಾಟಿಸ್ ಬಿಟ್ಟು ಹೋಗುವುದು ನಿಮಗೆ ಇಷ್ಟವೇ ಎಂಬ ಪ್ರಶ್ನೆಗೆ ಟ್ರಂಪ್ ನೇರವಾಗಿ ಉತ್ತರಿಸಲಿಲ್ಲ.

‘‘ಎರಡು ದಿನಗಳ ಹಿಂದೆ ನಾನು ಅವರೊಂದಿಗೆ ಊಟ ಮಾಡಿದೆ. ನಾನು ಅವರೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದೇನೆ. ನಿಮಗೆ ಸತ್ಯ ಏನೆಂದು ಗೊತ್ತಾಗಬೇಕಾದರೆ, ನನ್ನ ಪ್ರಕಾರ, ಅವರು ಸ್ವಲ್ಪ ಡೆಮಾಕ್ರಟಿಕರಂತೆ’’ ಎಂದು ಟ್ರಂಪ್ ನುಡಿದರು.

‘‘ಅವರು ಬಿಟ್ಟು ಹೋಗಬಹುದು. ಅಂದರೆ, ಒಂದು ಹಂತದಲ್ಲಿ ಎಲ್ಲರೂ ಹೋಗುವವರೇ. ಅದೇ ವಾಶಿಂಗ್ಟನ್’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News