ಪಶ್ಚಿಮ ಘಟ್ಟ ಸಂರಕ್ಷಣೆ: ಗಾಡ್ಗೀಳ್ ವರದಿಗೆ ಎಳ್ಳುನೀರು?

Update: 2018-10-16 04:17 GMT

ಹೊಸದಿಲ್ಲಿ, ಅ.16: ಪಶ್ಚಿಮ ಘಟ್ಟದ ಸಂರಕ್ಷಣೆಗೆ ಸಂಬಂಧಿಸಿದಂತೆ ಪರಿಸರ ತಜ್ಞ ಡಾ.ಗಾಡ್ಗೀಳ್ ನೀಡಿರುವ ವರದಿಗೆ ಕೇಂದ್ರ ಪರಿಸರ ಸಚಿವಾಲಯ ಎಳ್ಳುನೀರು ಬಿಟ್ಟಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನಾಶದ ಅಂಚಿನಲ್ಲಿರುವ ಅಪೂರ್ವ ಜೀವವೈವಿಧ್ಯವನ್ನು ಹೊಂದಿರುವ ಪಶ್ಚಿಮ ಘಟ್ಟದ ಕೆಲ ಭಾಗವನ್ನು ಯುನೆಸ್ಕೊ, ವಿಶ್ವ ನೈಸರ್ಗಿಕ ಪರಂಪರೆ ತಾಣದ ಪಟ್ಟಿಗೆ ಸೇರಿಸಿದೆ. 2010ರಲ್ಲಿ ಯುಪಿಎ ಸರ್ಕಾರ ಮಾಧವ ಗಾಡ್ಗೀಳ್ ಸಮಿತಿ ರಚಿಸುವ ಮೂಲಕ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆ ಆರಂಭಿಸಿತ್ತು. ಆದರೆ ಕೇರಳ ಹಾಗೂ ಕರ್ನಾಟಕ ಸೇರಿದಂತೆ ಹಲವೆಡೆ ಗಾಡ್ಗೀಳ್ ವರದಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವರದಿ ನನೆಗುದಿಗೆ ಬಿದ್ದಿತ್ತು. ಈ ವರದಿ ಅನುಷ್ಠಾನದಿಂದ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ ಹಾಗೂ ದೊಡ್ಡ ವಾಸತಾಣಗಳಿಗೆ ಸಂಚಕಾರ ಬರುತ್ತದೆ ಎನ್ನುವ ವಾದವನ್ನು ರಾಜ್ಯಗಳು ಮಂಡಿಸಿದ್ದವು.

ಇದಾದ ಬಳಿಕ ಇಸ್ರೊ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿತ್ತು. ಇದು 2013ರಲ್ಲಿ ವರದಿ ನೀಡಿ, ಶೇಕಡ 37 ಪ್ರದೇಶವನ್ನು ಅಂದರೆ 60 ಸಾವಿರ ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ಶಿಫಾರಸು ಮಾಡಿತ್ತು. ಆದರೆ ಇದರಿಂದಲೂ ರಾಜ್ಯಗಳಿಗೆ ತೃಪ್ತಿಯಾಗಲಿಲ್ಲ. ಏಕೆಂದರೆ ಪರಿಸರಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಉಷ್ಣವಿದ್ಯುತ್ ಸ್ಥಾವರಗಳ ಸ್ಥಾಪನೆ ನಿಷೇಧಿಸಲಾಗುತ್ತದೆ.

ಆದರೆ ಕೇಂದ್ರ ಪರಿಸರ ಸಚಿವಾಲಯ ಕಸ್ತೂರಿ ರಂಗನ್ ಸಮಿತಿ ಶಿಫಾರಸಿನ ಜಾರಿಗೆ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಗಾಡ್ಗೀಳ್ ವರದಿಯ ಬಹುತೇಕ ಶಿಫಾರಸುಗಳನ್ನು ಕಡೆಗಣಿಸಲಾಗಿದೆ ಎನ್ನುವುದು ಪರಿಸರವಾದಿ ಮತ್ತು ಜಲತಜ್ಞ ಹಿಮಾಂಶು ಠಕ್ಕರ್ ಅವರ ಆರೋಪ.

"ಪಶ್ಚಿಮಘಟ್ಟ ಮತ್ತು ಅಲ್ಲಿ ವಾಸಿಸುವ ಜನರನ್ನು ಸಂರಕ್ಷಿಸಬೇಕಾದರೆ, ಗಾಡ್ಗೀಳ್ ವರದಿಯ ಯಥಾವತ್ ಅನುಷ್ಠಾನದ ಅಗತ್ಯವಿದೆ. ಭೂತಾನ್‌ನಂಥ ಪುಟ್ಟ ದೇಶದ ಸಂವಿಧಾನದಲ್ಲೂ, ಶೇಕಡ 60ರಷ್ಟು ಅರಣ್ಯ ಉಳಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಕೇವಲ ಶೇಕಡ 37ರಷ್ಟು ಅರಣ್ಯವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದು ನಿರಾಶಾದಾಯಕ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News